ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಲೋಕವೆಲ್ಲ ನಾದಮಯ: ಇಂದು (ಜೂನ್ 21) ವಿಶ್ವ ಸಂಗೀತ ದಿನಾಚರಣೆ

ಲೋಕವೆಲ್ಲ ನಾದಮಯ: ಇಂದು (ಜೂನ್ 21) ವಿಶ್ವ ಸಂಗೀತ ದಿನಾಚರಣೆ


ಪ್ರಪಂಚದ ಒಂದು ವಿಶೇಷವಾದ ಪ್ರಕಾರವೇ ಸಂಗೀತ. ಶಬ್ದವಿರದೆ ಜಗತ್ತು ಎಂದಾದರೂ ಇದ್ದಿತೋ? ಇದ್ದಿರಲಾರದು. ಮನುಷ್ಯರ ಮಾತು ಕತೆಯಾಗಲಿ. ಪ್ರಾಣಿಗಳ ಕಲಕಲವಾಗಲಿ, ಪಕ್ಷಿಗಳ ಚಿಲಿಪಿಲಿಯಾಗಲಿ ಇರದಿದ್ದಾಗಲೂ ಸಮುದ್ರದ ಅಲೆಗಳ ಅಬ್ಬರ, ಹರಿವ ತೊರೆಗಳ ಮೊರೆತ, ಮಳೆ ಗಾಳಿಗಳ ಹೊಡೆತ, ಮೋಡಗಳ ಗುಡುಗಾಟ ಇವೆಲ್ಲಾ ಇದ್ದಿರಲೇಬೇಕಲ್ಲ? ಆದರೆ ನೀರಿನೊಳಗೂ ನೆಲದ ಮೇಲೂ ಜೀವ ತಲೆದೋರಿಕೊಂಡಾಗ ಶಬ್ದದ ಹರವು ಹೆಚ್ಚಿತು. ಪ್ರಾಣಿಗಳೂ ಪಕ್ಷಿಗಳೂ ದನಿಯನ್ನು ಪಡೆದುಕೊಂಡ ಮೇಲೆ ಶಬ್ದಕ್ಕೊಂದು ನೆಲೆ ದೊರಕಿತು. ಇನ್ನು ಮನುಷ್ಯ ಮಾತನಾಡತೊಡಗಿದ ಮೇಲಂತೂ ಅದಕ್ಕೊಂದು ಹೊಸ ಚೌಕಟ್ಟು ಸಿದ್ಧವಾಯಿತು. ಈ ಚೌಕಟ್ಟಿನಲ್ಲಿ ಮಾಡಿಕೊಂಡು ಬಂದುದು ಸಂಗೀತ.

 


ಮನುಷ್ಯ ಮೊದಲು ಮಾತನಾಡಿದನೋ ಹಾಡಿದನೋ ಹೇಳುವುದು ಕಷ್ಟ. ಹುಟ್ಟಿದ ಮಕ್ಕಳೇನೋ ಹಾಡುವುದೇ ಮೊದಲು. ಆದರೆ ಬದುಕಿನಲ್ಲಿ ಮಾತನಾಡುವುದೇ ಮುಖ್ಯವಾಗುತ್ತದೆ. ನಮ್ಮ ಆಲೋಚನೆಗಳನ್ನೂ ಅಭಿಪ್ರಾಯಗಳನ್ನೂ ಆವೇಗಗಳನ್ನೂ ಬೇರೆಯವರಿಗೆ ಮುಟ್ಟಿಸಲು, ಬೇರೆಯವರ ಮೆದುಳೊಳಗೆ ಒಡಲೊಳಗೆ ನಡೆಯುವ ಇದೇ ವಿವರಗಳನ್ನು ನಾವು ಅರಿತುಕೊಳ್ಳಲು ಮಾತುಕತೆ ಅಗತ್ಯ. ಇನ್ನು ಮಾತುಕತೆ ಸಾಹಿತ್ಯವಾದ ಮೇಲಂತೂ ಅದರ ನೆರವು ಇನ್ನಷ್ಟು ಹೆಚ್ಚಿತು. ಈಗೀಗ ಮನುಷ್ಯ ಮಾತನಾಡುವುದೇ ಹೆಚ್ಚು, ಹಾಡುವುದು ಕಡಿಮೆ. ಆದರೆ ಮಾನವಸಂಸ್ಕøತಿ ಮೊದಲಾಗುವಾಗ, ಮೊದಲಿನ ದಿನಗಳಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಬದುಕಿನ ಹಲವು ಪ್ರಸಂಗಗಳಲ್ಲಿ ಹಾಡೇ ಮುಖ್ಯವಾಗಿದ್ದಿತು. ದೈವಗಳನ್ನು ತಣಿಸುವುದಿರಲಿ, ನಲಿಮೆ-ಒಲುಮೆ-ದುಗುಡ-ಕಾಳಗಳಂತೆ ಕಾವಿರುವ ಸಂದರ್ಭಗಳಿರಲಿ. ಬೇಟೆ-ಬೇಸಾಯ-ದುಡಿಮೆಗಳಂಥ ಬರಡು ಪ್ರಸಂಗಗಳಲ್ಲಿ ಕೂಡ ಹಾಡು ತಪ್ಪದೆ ಒದಗುತ್ತಿದ್ದಿತು. ಈಗಲೂ ಆದಿವಾಸಿಗಳಲ್ಲಿ ಇದರ ಅವಶೇಷಗಳನ್ನು ಕಾಣಬಹುದು. ಬಿರುಸಿನ ಸಭ್ಯತೆಯ ಸುಳಿಗೆ ಇನ್ನೂ ಸಿಗದಿರುವ ಜನರಲ್ಲೂ ಹಾಡಿನ ಹೆಚ್ಚಳವನ್ನು ಗುರುತಿಸಬಹುದು.  


ನಿಸರ್ಗದಲ್ಲಿ ತೋರಿಬರುವ ಶಬ್ದದ ವೈವಿಧ್ಯವನ್ನು ಮನುಷ್ಯ ಅನುಭವಿಸಿದ, ಅದರ ಸೊಬಗನ್ನು ಸವಿದ; ಅದರ ಕೆಲವು ಪ್ರಕಾರಗಳನ್ನು ಅನುಕರಿಸಿದ, ತನ್ನ ಅಗತ್ಯಕ್ಕೆ ತಕ್ಕಂತೆ ಕೆಲವು ಪ್ರಕಾರಗಳನ್ನು ಮಾರ್ಪಡಿಸಿಕೊಂಡ. ಹಾಡುವಾಗ ಮೈಮರೆತು ಕುಣಿದ. ಕುಣಿಯುವಾಗ ಕೈ ಚಪ್ಪಾಳೆ ತಟ್ಟಿದ, ಕಾಲುಗಳನ್ನು ಲಯಬದ್ಧವಾಗಿ ಮೆಟ್ಟಿದ; ಕುಣಿತದ ಹೆಜ್ಜೆಗಳಿಗೆ ಸರಿಯಾಗಿ, ಹಾಡಿನ ಗತಿಗೆ ಸರಿಯಾಗಿ ಮರದ ಕಟ್ಟಿಗೆಯೊಂದನ್ನು ಕಲ್ಲಮೇಲ ಕುಟ್ಟಿಯೋ, ಎರಡು ಮರದ ಪಟ್ಟಿಗಳನ್ನು ಬಡಿದೋ, ಪೊಳ್ಳಾದ ಸೋರೆ-ಬುರುಡೆಯ ಮೇಲೆ ಕಡ್ಡಿಯಿಂದ ಸದ್ದು ಮಾಡಿತೋ ಲಯವನ್ನು ಸೇರಿಸಿದ. ಮಾತನಾಡುವಾಗ ಕುಣಿತವಾಗಲೀ ಲಯದ ಕಡೆ ಗಮನವಾಗಲೀ ಇರಬೇಕಾದುದಿಲ್ಲ. ಹಾಡುವಾಗ ಮಾತ್ರ ಎರಡೂ ಸೊಗಸಾಗುತ್ತವೆ.  


ಸಂಗೀತಕ್ಕೆ  ಮೂಲ ಸಾಮಗಾನವೆಂದೇ ಹೇಳಲಾಗಿದೆ. ಆದರೆ ಅದು ಮಾರ್ಗಿಸಂಗೀತಕ್ಕೆಂದು ತಿಳಿಯಬೇಕಷ್ಟೇ. ತಜ್ಞರಿಂದ ಸಿದ್ಧವಾದ, ಶಾಸ್ತ್ರೀಯ ಚೌಕಟ್ಟಿನೊಳಗೆ ನಿರ್ದಿಷ್ಟ ಕ್ರಮ ಮತ್ತು ಸಂದರ್ಭದಲ್ಲಿ ಅಭಿವ್ಯಕ್ತಿಸುವುದನ್ನು ಮಾರ್ಗಿಯೆಂದು ಮತಂಗ ಹೇಳುತ್ತಾನೆ. ದೇಶಿಯೆಂದರೆ ಯಾವುದೇ ಕಟ್ಟುಪಾಡಿರದೆ ತಮಗೆ ತೋರಿದಂತೆ, ತೋರಿದೆಡೆ ತನ್ನದೇ ಕ್ರಮದಿಂದ ಭಾವವನ್ನು ತೋರ್ಪಡಿಸುವ ಪ್ರಕಾರ. ಇಲ್ಲಿ ರಾಗಕ್ಕಿಂತ ಭಾವವೇ ಪ್ರಧಾನ. ರಾಗಿ ಬೀಸುತ್ತಲೋ, ದಿಮ್ಮಿ ಉರುಳಿಸುತ್ತಲೋ ಲಯಬದ್ಧವಾಗಿ ಕಟ್ಟಿದ ಹಾಡುಗಳು ಯಾವುದೇ ಒಬ್ಬ ವ್ಯಕ್ತಿ/ಜಾತಿ/ಪಂಥಕ್ಕೆ ಸೇರಿದವುಗಳಲ್ಲ. ಅವು ಇಡೀ ಸಮೂಹದ ಧ್ವನಿಯಾಗಿ ಮೂಡಿಬಂದಿವೆ.

 

ಭಾರತೀಯ ಸಂಗೀತದಲ್ಲಿ ಕಂಡುಬರುವ ವ್ಯತ್ಯಾಸಶೀಲತೆ ಮತ್ತು ನಾನತ್ವದಲ್ಲಿ ಏಕತೆ ಪ್ರಪಂಚದ ಬೇರೆ ಯಾವುದೇ ಸಂಗೀತ ಪ್ರಕಾರಗಳಲ್ಲಿ ಕಂಡುಬರುವುದಿಲ್ಲ. ರಾಗ-ತಾಳಗಳ ಪರಿಕಲ್ಪನೆಗಳಂತೂ ಅಭೂತಪೂರ್ವವಾದದ್ದೆಂದೇ ಹೇಳಬೇಕು. ಇಲ್ಲಿಯ ಪ್ರತಿಯೊಂದು ರಾಗಕ್ಕೂ ಅದರದ್ದೇ ಆದ ವ್ಯಕ್ತಿತ್ವವಿದೆ. ಒಂದೇ ರಾಗದ ಅಭಿವ್ಯಕ್ತಿ ಕಲಾವಿದನಿಂದ ಕಲಾವಿದನಿಗೆ ವ್ಯತ್ಯಾಸವಿರುವಂತೆ; ಒಬ್ಬನೇ ಸಂಗೀತಗಾರ ಬೇರೆ ಬೇರೆ ಸಮಯಗಳಲ್ಲಿ, ಬೇರೆ ಬೇರೆ ಸ್ಥಳಗಳಲ್ಲಿನ ಅಭಿವ್ಯಕ್ತಿ ಹೊಸತನ ಪಡೆಯುತ್ತದೆ. ಇವೆಲ್ಲವುಗಳ ಮೂಲ ಆಶಯವಾಗಿ ಸೌಂದರ್ಯ ಸಾಕ್ಷಾತ್ಕಾರದ ಶಾಸ್ತ್ರೀಯ ಕೇಂದ್ರವಾಗಿದೆ. ರಸಾಭಿವ್ಯಕ್ತಿ, ಶಕ್ತಿ ಸ್ವತಂತ್ರಾಭಿವ್ಯಕ್ತಿಯ ಆಧಾರದ ಮೇಲೆ ಋತು, ದಿನ, ಸಮಯಗಳನ್ನು ಅನುಸರಿಸಿ ರಾಗಗಳನ್ನು ವಿಂಗಡಿಸಿರುವ ಸಂಗೀತಪದ್ಧತಿಯೂ ಇದೊಂದೆ. ಹಾಗೆಯೆ ಗಮಕ ಸ್ವರಾಲಂಕಾರ ಹಾಗೂ ಹಾಡಿನ ತಾಳಪದ್ಧತಿ ಇರುವುದು ನಮ್ಮಲ್ಲಿ ಮಾತ್ರ.  


ಹಿಂದೂಸ್ತಾನಿ ಮತ್ತು ಕರ್ನಾಟಕ ಎಂಬೆರಡು ಪದ್ಧತಿಗಳೂ ಮೂಲ ಭಾರತೀಯ ಸಂಗೀತದ ಕವಲುಗಳಷ್ಟೇ ಹೊರತು ಭೂಭಾಗ / ಜನರನ್ನು ಅನ್ವಯಿಸಿ ವಿಭಾಗಿಸಿದ್ದಲ್ಲ. ಮೊದಲು ಕರ್ನಾಟಕ ಸಂಗೀತವಿತ್ತೆಂದು 1200-1300 ಸುಮಾರಿನಲ್ಲಿ ಅಮೀರ್‌ ಖುಸ್ರು ಇರಾನಿನ ಸಂಗೀತವನ್ನು ಸೇರಿಸಿದನೆಂದೂ ನಂತರ ಅದೇ ಹಿಂದೂಸ್ತಾನಿಯೆಂದೂ ಹೇಳಲಾಗುತ್ತಿದೆ. ಕರೀಂಖಾನರೇ ಹೇಳುವಂತೆ ಉತ್ತರಾದಿಯಲ್ಲಿ ಲಾಲಿತ್ಯಕ್ಕೆ ಹೆಚ್ಚು ಒತ್ತುಕೊಟ್ಟರೆ ದಕ್ಷಿಣಾದಿಯಲ್ಲಿ ತಾಳಕ್ಕೆ ಗಮನಕೊಡುತ್ತಾರೆ. ಆದರೆ ಮೂಲಭೂತವಾದ ಅಂಶಗಳು, ರಾಗಗಳು ಎರಡೂ ಸಂಗೀತ ಪದ್ಧತಿಗಳಲ್ಲಿಯೂ ಇವೆ. 

ಭಾರತೀಯ ಸಂಸ್ಕೃತಿಯಲ್ಲಿ ದೇವರನ್ನು ಸ್ತುತಿಸಿ ಹಾಡುವುದು ಅನಾದಿಕಾಲದಿಂದ ರೂಢಿಯಲ್ಲಿದೆ. ಭಗವಂತನ ಸಾಕ್ಷಾತ್ಕಾರಕ್ಕೆ ಯಾಗ, ಯಜ್ಞ, ಯೋಗ, ತಪಸ್ಸು, ಜ್ಞಾನ, ಭಕ್ತಿ ಇತ್ಯಾದಿ ಮಾರ್ಗಗಳಿದ್ದರೂ ನಾದ ಮಾರ್ಗವು ಅತಿ ಸುಲಭ ಸಾಧ್ಯವಾದ ಮಾರ್ಗ. ಆದ್ದರಿಂದಲೇ ವೇದ, ಪುರಾಣಗಳು ಸಂಗೀತಕ್ಕೆ ಹೆಚ್ಚಿನ ಆದ್ಯತೆ ನೀಡಿವೆ. 


ಪ್ರಪಂಚದ ಇನ್ಯಾವುದೇ ದೇಶಕ್ಕೆ ಹೋಲಿಸಿದರೆ, ಭಾರತದಲ್ಲಿ ಧರ್ಮ ಮತ್ತು ಸಂಗೀತಕ್ಕೆ ನಿಕಟಸಂಬಂಧವಿದೆ. ಸಂಗೀತವು ಒಂದು ವಿಶ್ವಮಾನ್ಯಕಲೆ. ಇಂಪಾದ ಸಂಗೀತವು ``ಶಿಶುರ್ವೇತ್ತಿ ಪಶುರ್ವೇತ್ತಿ ವೇತ್ತಿ ಗಾನರಸಂಫಣೇ’’ ಎಂಬ ಉಕ್ತಿಯಂತೆ ಶಿಶು, ಪಶು, ವಿಷ ಜಂತುವಾದ ಹಾವುಗಳನ್ನೂ ತಲೆದೂಗುವಂತೆ ಮಾಡುತ್ತದೆ. ಅದಕ್ಕೆ ಮಾನವನೂ ಮಣಿದಿರುವುದು ಸಹಜವೇ.


ಸಂಗೀತವು ವಿದ್ಯೆಯೂ, ಹಾಗೆಯೇ ಕಲೆಯೂ ಹೌದು. ಅದು ಅನಾದಿಕಾಲದಿಂದ ಇಲ್ಲಿಯವರೆಗೆ ವಿಶಿಷ್ಟ ರೀತಿಯಲ್ಲಿ ಬೆಳೆದು ಬಂದಿರುವುದು ಸಂಗೀತ ಇತಿಹಾಸದಿಂದ ವೇದ್ಯವಾಗುತ್ತದೆ. 


'ನಾಹಂ ವಸಾಮಿ ವೈಕುಂಠೇ ನಯೋಗಿ ಹೃದಯೇರವೌ ಮದ್ಭಕ್ತಾಯಂತ್ರ ಗಾಯಂತಿ ತತ್ರತಿಷ್ಠಾಮಿ ನಾರದೆ’’ ಎಂಬ ನಾರದನ ಮಾತಿನಂತೆ (ನಾನು ವೈಕುಂಠದಲ್ಲಿಯಾಗಲೀ ಯೋಗಿಗಳ ಹೃದಯದಲ್ಲಿಯಾಗಲೀ ನೆಲೆಸುವುದಿಲ್ಲ, ಎಲ್ಲಿ ನನ್ನ ಭಕ್ತರು ಹಾಡುವರೋ ಅಲ್ಲಿ ನೆಲೆಸುತ್ತೇನೆ) ಮಾನವನಾದರೋ ತಾನು ಆರಾಧಿಸುವ ದೇವತೆಗಳ ಕೈಗೆ ಸಂಗೀತ ವಾದ್ಯಗಳನ್ನು ನೀಡಿ, ಸಂಗೀತ ಕಲೆಯಲ್ಲಿ ತನಗಿರುವ ಪ್ರೀತಿ ಗೌರವಗಳನ್ನು ಸೂಚಿಸಿದ್ದಾನೆ. ಪರಮೇಶ್ವರನ ಕೈಯಲ್ಲಿ ಢಮರುಗ, ಕೃಷ್ಣನ ಕೈಯಲ್ಲಿ ಕೊಳಲು, ಸರಸ್ವತಿಯ ಕೈಯಲ್ಲಿ ವೀಣೆ, ನಾರದರ ಕೈಯಲ್ಲಿ ತಂಬೂರಿ ಹೀಗೆ ಉದಾಹರಿಸಲು ಸಾಧ್ಯ. ಆಂಜನೇಯ, ನಾರದ, ತುಂಬುರು, ರಾವಣ, ಅರ್ಜುನ ಇವರೆಲ್ಲರೂ ಸಂಗೀತವನ್ನು ಚೆನ್ನಾಗಿ ಬಲ್ಲವರಾಗಿದ್ದರೆಂದು ಪುರಾಣಗಳಿಂದ ತಿಳಿದುಬರುತ್ತದೆ. ಈ ಕಾರಣದಿಂದಾಗಿ ಸಂಗೀತವು ಗಂಧರ್ವ ವೇದವೆಂದೂ ಸಂಗೀತದ ನಾದವನ್ನು ನಾದಬ್ರಹ್ಮವೆಂದೂ ಗಣಿಸಲಾಗಿದೆ.  


ದೇಹದಲ್ಲಿ ವಿಶಿಷ್ಟ ಹಂತದ ಚೇತನಕ್ಕೆ ಕಾರಣವಾಗುವ ಏಳು ಚಕ್ರಗಳೊಂದಿಗೆ ಸಂವಾದಿಯಾಗಿ ಏಳು ಮೂಲ ಸ್ವರಗಳು ಕಾರ್ಯನಿರ್ವಹಿಸುತ್ತವೆ ಎಂಬ ಪರಿಕಲ್ಪನೆಯೂ ಇದರಲ್ಲಿದೆ. ಉದಾಹರಣೆಗೆ `ಸ’ ಸ್ವರವು ಅತ್ಯಂತ ಕೆಳಗಿನ ಮೂಲಾಧಾರ ಚಕ್ರಕ್ಕೆ ಸಂವಾದಿಯಾಗಿದೆ. ಅಂದರೆ ಈ ಸ್ವರದ ಪಠನವನ್ನು ಶಾಸ್ತ್ರೀಯವಾಗಿ ಅಭ್ಯಸಿಸಿದ್ದೇ ಆದರೆ ಆ ಮೂಲಕ ಮೂಲಾಧಾರ ಚಕ್ರವನ್ನು ಚೇತನಗೊಳಿಸಲು ಸಾಧ್ಯವಿದೆ. ಇದೇ ರೀತಿ `ರ’ ಸ್ವರವು ಸ್ವಾಧಿಷ್ಠಾನ ಚಕ್ರಕ್ಕೆ `ಪ’ವು ವಿಶುದ್ಧ ಚಕ್ರಕ್ಕೆ, `ದ’ವು ಆಜ್ಞಾ ಚಕ್ರಕ್ಕೆ `ನಿ’ಯು ಅತ್ಯಂತ ಉನ್ನತ ಸ್ತರದ ಚಕ್ರವಾದ ಸಹಸ್ರಾರಕ್ಕೆ ಸಂವಾದಿಯಾಗಿರುತ್ತವೆ. ಸಂಗೀತದಲ್ಲಿ `ಆರೋಹ’ ಮತ್ತು `ಅವರೋಹ’ಗಳು ಅದೇ ಪ್ರಕಾರವಾಗಿ ಚಕ್ರಗಳಲ್ಲಿ ಶಕ್ತಿ ಸಂಚಾರಕ್ಕೆ ಕಾರಣವಾಗುತ್ತವೆ. 


ಸಂಗೀತ ಚಿಕಿತ್ಸೆ ಮನಃಶಾಂತಿ, ನೆಮ್ಮದಿ ನೀಡಿ, ರೋಗ ನಿವಾರಣೆಗೂ ನೆರವಾಗುವುದರಿಂದ ಬರೀ ಸಂಗೀತದ ಗುಂಗಿನಲ್ಲೇ ಇರಬೇಡಿ. ಅತಿಯಾದರೆ ಅಮೃತವೂ ವಿಷವಂತೆ! ಸಂಗೀತದ ಶಬ್ದ ಸದ್ದು ಮಿತಿ ಮೀರಿದರೆ ನಿಮ್ಮ ಶ್ವಾಸಕೋಶ ದುರ್ಬಲಗೊಳ್ಳುತ್ತದೆ. ಆದ್ದರಿಂದ ರಾಕ್ ಪಾಪ್ ಸಂಗೀತದಿಂದ ದೂರವಿರಿ, ಆರೋಗ್ಯ ಸಂಪತ್ತನ್ನು ಪಡೆಯಿರಿ.  


ಸುಮಧುರ ಸಂಗೀತದ ಹಿಂದೆ ಭಗವಂತ ನಡೆದು ಬರುತ್ತಿರುತ್ತಾನೆ. ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಯುದ್ಧಕ್ಕೆ ಹೋಗುವಾಗ ತಮ್ಮೊಂದಿಗೆ ಸಂಗೀತಗಾರರನ್ನೂ ಕರೆದೊಯ್ಯುತ್ತಿದ್ದರು. ರಾತ್ರಿಯ ವೇಳೆ ಸುಮಧುರ ಸಂಗೀತ ಹಾಡಿ, ಯುದ್ಧ ಮಾಡಿ ದಣಿದ ಸೈನಿಕರ ಮನಸ್ಸನ್ನು ತಣಿಸುವ ಜವಾಬ್ದಾರಿ ಅವರದಾಗಿರುತ್ತಿತ್ತು. ಇಂದು ನಮ್ಮ ಜೀವನವೇ ಕುರುಕ್ಷೇತ್ರ, ಪ್ರತಿದಿನವೂ ಒಂದೊಂದು ಯುದ್ಧ. ಸಂಗೀತದಲ್ಲಿ ಸಮಾಧಾನವನ್ನು, ಸಂತೋಷವನ್ನೂ ಅರಸುವ ಕ್ರಿಯೆ ಈಗ ಮತ್ತೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. `ಓಂ ಭೂರ್ಭುವಸ್ವಃ...’ ಎಂಬ ಸಾಲುಗಳು ಕಿವಿಗೆ ಬೀಳುತ್ತಿದ್ದರೆ, ಹೊಸದೊಂದು ಹುರುಪು ಹುಮ್ಮಸ್ಸು ಮೈಮನಗಳಲ್ಲಿ ಹರಿದಾಡುತ್ತದೆ. 


ಇಟಲಿಯ ಸರ್ವಾಧಿಕಾರಿ ಮುಸೋಲಿನಿ ನಿದ್ರಾಹೀನತೆಯಿಂದ ಬಳಲುತ್ತಿದ್ದ.ಮಹಾ ಮೇಧಾವಿ ಪಂಡಿತರು, ಸುಪ್ರಸಿದ್ಧ ವೈದ್ಯರೂ ಅವನನ್ನು ಗುಣಪಡಿಸುವಲ್ಲಿ ಸೋತು ಹೋಗಿದ್ದರು. ಅದೇ ಸಮಯಕ್ಕೆ ಪ್ರಸಿದ್ಧ ಶಾಸ್ತ್ರೀಯ ಸಂಗೀತ ತಜ್ಞ ಪಂಡಿತ ಓಂಕಾರ ನಾಥ ಠಾಕೂರ್ ಯುರೋಪ್‍ಗೆ ಭೇಟಿ ನೀಡಿದ್ದರು. ಮುಸೋಲಿನಿಯ ಸಮಸ್ಯೆ ಅರಿತ ಅವರು, ಸಂಗೀತ ಚಿಕಿತ್ಸೆ ನೀಡಿ ನಿದ್ರಾಹೀನತೆ ಗುಣಪಡಿಸಲು ಮುಂದಾದರು. ಅವರು ಹಾಡಲು ಪ್ರಾರಂಭಿಸಿದ ಪುರಿಯಾ ಗಾರ ನಿಜಕ್ಕೂ ಜಾದೂ ಮಾಡಿ ಬಿಟ್ಟಿತು. ಕೇವಲ ಅರ್ಧ ಗಂಟೆಯಲ್ಲಿ ಮುಸೋಲಿನಿ ಚಿಕ್ಕ ಮಗುವಿನಂತೆ ನಿದ್ರೆಗೆ ಜಾರಿ ಬಿಟ್ಟ. ಸಂಗೀತದ ಸಾಮರ್ಥ್ಯ  ನಮ್ಮ ಜನಪದರಿಗೂ ಅರಿವಿತ್ತು ಎಂಬುದಕ್ಕೆ ಬೀಸುವ ಪದಗಳು, ಕಟ್ಟುವ ಪದಗಳು ಜೋಗುಳ ಪದಗಳು... ಮೊದಲಾದವೇ ಸಾಕ್ಷಿ. ನಮ್ಮಲ್ಲಿ ಹಸುಗೂಸುಗಳಿಗೆ ಜೋಗುಳ ಪದಗಳನ್ನು ಹಾಡಿ ರಮಿಸುವಂತೆ, ವಿದೇಶಗಳಲ್ಲೂ ವಿಶೇಷ ರಾಗಗಳನ್ನು ಕೇಳಿಸಲಾಗುತ್ತದೆ. ತೀರಾ ಇತ್ತೀಚಿನ ಉದಾಹರಣೆಯೆಂದರೆ ಸ್ಲೋವಾಕಿಯಾದ ಆಸ್ಪತ್ರೆಯೊಂದರಲ್ಲಿ ಮಕ್ಕಳ ಕಿವಿಗೆ ಇಯರ್ ಫೋನ್ ಇಟ್ಟು ಮೊಝಾರ್ಟ ಮೊದಲಾದ ಸಂಗೀತವನ್ನು ಕೇಳಿಸಲು ಪ್ರಾರಂಭಿಸಿರುವುದು. ಭವಿಷ್ಯದಲ್ಲಿ ಆ ಮಕ್ಕಳು ಅತ್ಯಂತ ಚತುರಮತಿಗಳಾಗಿ ಬೆಳೆಯಲು ಇದು ಸಹಕಾರಿಯಂತೆ. ಸಂತರಾದ ತ್ಯಾಗರಾಜ, ಕಬೀರ್, ಮೀರಾಬಾಯಿ, ನಾಮದೇವ, ಪುರಂದರದಾಸ, ತುಕಾರಾಮ ಮೊದಲಾದವರಿಗೆ ಸಂಗೀತ ಸಾಮರ್ಥ್ಯದ ಅರಿವಿದ್ದುದರಿಂದಲೇ ಅವರು ತಮ್ಮ ನಿರ್ವಾಣಕ್ಕೆ ಅದನ್ನು ಮಾರ್ಗವಾಗಿ ಆರಿಸಿಕೊಂಡಿದ್ದು.


ಎಲ್ಲರಿಗೂ ಅರಿವಿರುವಂತೆ ಕೆಲಸದ ಒತ್ತಡ, ಭಾವನಾತ್ಮಕ ಏರುಪೇರುಗಳು ಕಾಲಿಟ್ಟಲ್ಲೆಲ್ಲ ಸೋಲು ಸ್ವಾಗತಿಸುತ್ತದೆ ಎಂಬ ಭಯ ಎಲ್ಲರೂ ನಮ್ಮನ್ನು ಹಣಿದು ಹಾಕುತ್ತವೆ. ನಮಗೆ ಅರಿವಿಲ್ಲದಂತೆಯೇ ಹೊಸ ಹೊಸ ರೋಗಗಳಿಗೆ ಆಹ್ವಾನ ನೀಡುತ್ತವೆ. ಗ್ಯಾಸ್ಟ್ರಿಕ್, ರಕ್ತದೊತ್ತಡ, ಮಧುಮೇಹ ಮೊದಲಾದ ರೋಗಗಳ ಸಾಲಿಗಂತೂ ಇದು ರೆಡ್ ಕಾರ್ಪೆಟ್ ಹಾಸಿಟ್ಟು ಕರೆದಂತಹ ಸ್ಥಿತಿ. ಸಂಗೀತದ ಕಾರಣ ಇಂತಹ ಒತ್ತಡಗಳಿಂದ ನಾವು ಪಾರಾಗಿ ಸಮಾಧಾನ, ಶಾಂತಿ, ಖುಷಿ, ಉತ್ಸಾಹ ಹೊಂದುತ್ತೇವೆ ಎಂದರೆ ದೇಹವನ್ನು ರೋಗಗಳ ವಿರುದ್ಧ ಸದೃಢಪಡಿಸುತ್ತಿದ್ದೇವೆ ಎಂದೇ ಅರ್ಥ. ಆ ಮಟ್ಟಿಗೆ ಸಂಗೀತ ನಮ್ಮ ಹಿತೈಷಿ.  


ಅನಾದಿ ಕಾಲದಿಂದಲೂ ಪಾಶ್ಚಿಮಾತ್ಯರಿಗೆ ಸಂಗೀತ ಮತ್ತು ಆರೋಗ್ಯದ ನಡುವಿನ ಸಂಬಂಧದ ಬಗ್ಗೆ ಅರಿತ್ತೇನೋ ಎಂಬುದಕ್ಕೆ ಒಂದು ಉದಾಹರಣೆ ಎಂದರೆ ಗೀಕರ ಅಪೊಲೊ ಸಂಗೀತ ಮತ್ತು ಕಲೆಗೆ ಮಾತ್ರವಲ್ಲ ಗುಣಪಡಿಸುವ ಕ್ರಿಯೆಗೂ ಅಧಿದೇವನಾಗಿರುವುದು. ಅರಿಸ್ಟಾಟಲ್ ಮತ್ತು ಪ್ಲೆಟೋರ ಬರಹಗಳಲ್ಲಿಯೂ ಸಂಗೀತ ಮತ್ತು ಆರೋಗ್ಯದ ನಡುವಿನ ಸಂಬಂಧವನ್ನು ಚರ್ಚಿಸಲಾಗಿದೆ. ಇತ್ತ ಚೀನಾದಲ್ಲಿ ಮನಶಾಂತಿಯನ್ನು ಒದಗಿಸಲು ಸಿಲ್ಕ್-ವೀವಿಂಗ್ ವ್ಯಾಯಾಮಗಳನ್ನು ಅದರಲ್ಲೂ ಶಬ್ದಕ್ಕೆ (ಸಂಗೀತಕ್ಕೆ) ಮಹತ್ವ. ಈ ವ್ಯಾಯಾಮವನ್ನು ಮಾಡುವಾಗ ಕೇವಲ ಉಸಿರಾಟದ ಸದ್ದನ್ನು ಮಾತ್ರ ಕೇಳಿಸಿಕೊಳ್ಳಬೇಕು ಎನ್ನುತ್ತದೆ ನಿಯಾಮವಳಿ.  


ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಂಗೀತ ಚಿಕಿತ್ಸೆ ಬಹುದೊಡ್ಡ ಪ್ರಮಾಣದಲ್ಲಿ ಖ್ಯಾತಿಗೆ ಬಂದಿದ್ದು ಮೊದಲನೆಯ ಹಾಗೂ ಎರಡನೆಯ ಮಹಾಯುದ್ಧಗಳ ನಂತರ. ಈ ಯುದ್ಧಗಳಲ್ಲಿ ಭಾಗವಹಿಸಿ ಮಾನಸಿಕ ಹಾಗೂ ದೈಹಿಕ ತುಮುಲಗಳಿಂದ ಬಾಧೆ ಪಡುತ್ತಿದ್ದವರಿಗೆ ಸಮಾಧಾನವನ್ನು ಒದಗಿಸಲು ಸಂಗೀತ ಚಿಕಿತ್ಸೆಯೇ ಉತ್ತಮ ಎಂದು ಕಂಡುಕೊಳ್ಳಲಾಯಿತು. ಸಂಗೀತ ಚಿಕಿತ್ಸೆಯ ಉದ್ದೇಶದಿಂದಲೇ 1998ರಲ್ಲಿ ದಿ ಅಮೆರಿಕನ್ ಮ್ಯೂಸಿಕ್ ಥೆರಪಿ ಅಸೋಸಿಯೇಶನ್ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.  


ಪಾಶ್ಚಿಮಾತ್ಯ ರಾಷ್ಟ್ರಗಳ ಹೆಚ್ಚಿನ ಆಸ್ಪತ್ರೆಗಳಲ್ಲಿ ಸಂಗೀತ ಚಿಕಿತ್ಸೆ ವಿಭಾಗಗಳು ಲಭ್ಯವಿದ್ದು ಈ ಚಿಕಿತ್ಸೆಯನ್ನು ಸಾಮಾನ್ಯವಾಗಿ ಬಳಸಿಕೊಳ್ಳುವ ಸಂದರ್ಭಗಳೆಂದರೆ...

• ಸಮಾಧಾನ ಚಿತ್ತರನ್ನಾಗಿಸಲು ಹಾಗೂ ನಿದ್ರೆ ಬರುವಂತೆ ಮಾಡಲು 

• ಅನಗತ್ಯವಾಗಿ ಕಾಡುವ ಹೆದರಿಕೆ ಬಡಿದೊಡಿಸಲು 

• ರೋಗಗಳನ್ನು ಖಿನ್ನತೆಯಿಂದ ಹೊರತರಲು 

•ನೋವು ನಿವಾರಕಗಳ ಪರಿಣಾಮವನ್ನು ಹೆಚ್ಚಿಸಲು

•ಉದ್ರೇಕಗೊಂಡ ಮಾಂಸ ಖಂಡ ಹಾಗೂ ನರ ವ್ಯವಸ್ಥೆಯನ್ನು ಉಪಶಮನಗೊಳಿಸಲು 

ಈ ಹಿನ್ನೆಲೆಯಲ್ಲಿ ಸಂಗೀತ ಚಿಕಿತ್ಸೆಗೆ ವಿಶೇಷ ಕಾರ್ಯಕ್ರಮ ರೂಪಿಸಿ ಅದರಲ್ಲಿ ಪರಿಣಿತರನ್ನು ರೂಪಿಸುವ ಉದ್ದೇಶದಿಂದ, ವಿಶ್ವದಲ್ಲಿಯೇ ಪ್ರಪ್ರಥಮ ಬಾರಿಗೆ 1944ರಲ್ಲಿ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಸಂಗೀತ ಚಿಕಿತ್ಸೆ ಪದವಿ ಪ್ರಾರಂಭಿಸಲಾಯಿತು. 

-ಡಾ. ಗುರುರಾಜ ಪೋಶೆಟ್ಟಿಹಳ್ಳಿ,

ಸಂಸ್ಕೃತಿ  ಚಿಂತಕರು,

ಬೆಂಗಳೂರು 97393 69621


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


0 تعليقات

إرسال تعليق

Post a Comment (0)

أحدث أقدم