ಪೆರ್ಲ: ಕುಂಬಳೆ ಮತ್ತು ವಿಟ್ಲ ಸೀಮೆಯ ಪ್ರಸಿದ್ಧ ದೈವ ನರ್ತಕ ಕರಿಯ ಖಂಡಿಗ ಅವರು ನಿಧನ ಹೊಂದಿದ್ದಾರೆ.
78 ವರ್ಷದ ಕರಿಯ ಖಂಡಿಗ ಅವರು ಶನಿವಾರ ಮುಂಜಾನೆ ಕಾಸರಗೋಡು ಜಿಲ್ಲೆಯ ಪೆರ್ಲ ಸಮೀಪದ ಖಂಡಿಗದಲ್ಲಿರುವ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ಅಸುನೀಗಿದರು.
ಉಳ್ಳಾಕುಲು ರಾಜ್ಯದೈವ ಪಂಜುರ್ಲಿ ಹಾಗೂ ಇನ್ನಿತರ ಭೂತಗಳ ನರ್ತಕರಾಗಿ ಅವರು ಹೆಸರು ವಾಸಿಯಾಗಿದ್ದರು. ಸ್ಪಷ್ಟ ಉಚ್ಚಾರ, ಪಾರಂಪರಿಕ ನುಡಿಕಟ್ಟಿನ ಅರಿವು ಹೊಂದಿದ್ದ ಕರಿಯ ಅವರು 100 ಕ್ಕೂ ಹೆಚ್ಚು ಪಾಡ್ದನಗಳನ್ನು ಕಂಟಸ್ಥವಾಗಿಸಿಕೊಂಡಿದ್ದರು.
ಕರಿಯ ಅವರು ದಿ .ಕೊರಗ ಹಾಗೂ ಮದರು ದಂಪತಿಗಳ ಮಗ. ಇವರಿಗೆ ದೈವ ನರ್ತನವೇ ತನ್ನ ಹಿರಿಯರಿಂದ ಬಂದ ಕುಲಕಸುಬು. ತನ್ನ 14 ನೇ ವಯಸ್ಸಲ್ಲೇ ಕುಂಬಳೆ ಹಾಗೂ ವಿಟ್ಲ ಸೀಮೆಯಲ್ಲಿ ಪಾರಂಪರಿಕವಾಗಿ ದೈವಗಳನ್ನು ಕಟ್ಟಿ ತನ್ನ ಹೆಸರನ್ನು ವಿಸ್ತರಿಸಿ ಕೊಂಡವರು. ಕ್ಷೇತ್ರ ವ್ಯಾಪ್ತಿಯಾಗಿ ಆಯಾಯ ಊರುಗಳ ಸಂಪ್ರದ್ರಾಯದಂತೆ ದೈವವನ್ನು ಕಟ್ಟಿ ನುಡಿಗಳನ್ನು ನೀಡುತ್ತಿದ್ದವರು.
ಪ್ರಮುಖವಾಗಿ ಕುಂಬಳೆ ಸೀಮೆಯ ಮುಳಿಯಾಲ, ಸಾಂತಪದವು, ಮಳಿ ಎಂಬಲ್ಲಿ ಪ್ರಧಾನ ದೈವ ಉಳ್ಳಾಕುಳು ರಾಜ್ಯ ದೈವ ಪಂಜುರ್ಲಿ ದೈವದ ಹಾಗೂ ವಿಟ್ಲ ಸೀಮೆಯ ಕಡಂಬು ಬಾಳಿಕೆಯ ರಕ್ತೇಶ್ವರಿ ಸಾನಿಧ್ಯದ ಕೊರತ್ತಿ ದೈವಗಳ ನರ್ತಕರಾಗಿದ್ದವರು.
ಉಳ್ಳಾಕುಳು, ಪಂಜುರ್ಲಿ, ವಾರಾಹಿ (ಮಲರಾಯಿ), ಧೂಮಾವತಿ, ಪಿಲಿಚಾಮುಂಡಿ, ಕಲ್ಲುರ್ಟಿ, ಕೊರಗತನಿಯ, ಕೊರತ್ತಿ,ಗುಳಿಗ ಕುಲಪೆರ್ಗಡೆ, ಮುಂತಾದ 150 ಕ್ಕೂ ಹೆಚ್ಚು ದೈವಗಳನ್ನು ಕಟ್ಟಿದವರು. ಭೂತಾರಾಧನೆಗೆ ಪಾಡ್ದನವೇ ಮೂಲ ಎಂಬುದಾಗಿ ಚಿಂತಿಸಿದವರು. ಮುಖವರ್ಣಿಕೆಯಲ್ಲಾಗಲೀ, ದೈವದ ನುಡಿಗಟ್ಟುಗಳಲ್ಲಾಗಲೀ, ಯಾವುದೇ ಲೋಪ-ದೋಷಗಳಿಲ್ಲದೇ ನಿರ್ವಹಿಸಿದವರು. ಆಯಾಯ ದೈವಗಳ ಸ್ವರೂಪದಂತೆ ಮುಖವರ್ಣಿಕೆಯನ್ನು ಇದಮಿತ್ತಂ ಎಂದು ಹೇಳಬಲ್ಲವರು.
ಸಾಧು - ಸಜ್ಜನರಾಗಿದ್ದ ಅವರು ಎಲ್ಲರಿಗೂ ಅಚ್ಚು ಮೆಚ್ಚಿನವರಾಗಿದ್ದವರು. ಯಾವುದೇ ಸನ್ಮಾನಗಳ ಬೆನ್ನ ಹಿಂದೆ ಬಿದ್ದವರಲ್ಲ. ಕಾಸರಗೋಡು ಜಿಲ್ಲಾ ದೈವನರ್ತಕ ಪ್ರಶಸ್ತಿ ಸಹಿತ 100 ಕ್ಕೂ ಹೆಚ್ಚು ಸಂಘ- ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿರುತ್ತಾರೆ. ತಮ್ಮ ವೃತ್ತಿಯಲ್ಲಿ 50 ಸಂವತ್ಸರಗಳನ್ನು ಪೂರೈಸಿ ದೈವ ನರ್ತಕರ ಸಾಲಿನಲ್ಲಿ ಅನಭಿಷಿಕ್ತ ದೊರೆಯಾಗಿ ಮೆರೆದವರು. ಸುಮಾರು 250ಕ್ಕೂ ಹೆಚ್ಚು ಶಿಷ್ಯರನ್ನು ಪರಿಣತರನ್ನಾಗಿ ಮಾಡಿದ ಹೆಗ್ಗಳಿಕೆ ಇವರದ್ದಾಗಿದೆ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق