ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಿರಿಯ ಲೇಖಕಿ ಮನೋರಮಾ ಎಂ ಭಟ್ ನಿಧನ

ಹಿರಿಯ ಲೇಖಕಿ ಮನೋರಮಾ ಎಂ ಭಟ್ ನಿಧನ




ಮಂಗಳೂರು: ಸಣ್ಣ ಕತೆಗಾರ್ತಿ, ನಾಟಕಕಾರ್ತಿ, ಆಕಾಶವಾಣಿ ಕಲಾವಿದೆಯಾಗಿ, ಅಂಕಣಕಾರ್ತಿ, ಕವಯಿತ್ರಿಯಾಗಿ ಹೆಸರು ಮಾಡಿದ್ದ ಹಿರಿಯ ಲೇಖಕಿ ಮನೋರಮಾ ಎಂ ಭಟ್ ಇಂದು (ಸೆ.16) ಅಪರಾಹ್ನ 2.05ರ ವೇಳೆಗೆ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.


ಹಲವರಿಗೆ ಅಮ್ಮ, ಕೆಲವರಿಗೆ ಅಕ್ಕ, ಮತ್ತೆ ಕೆಲವರಿಗೆ ಹೋರಾಟಗಾರ್ತಿ ಸಾಹಿತಿಯಾಗಿ ಬದುಕಿನ 92 ವರ್ಷಗಳನ್ನು ಅರ್ಥಪೂರ್ಣವಾಗಿ ಕಳೆದವರು  ಹಿರಿಯಕ್ಕ ಮನೋರಮಾ ಎಂ.ಭಟ್ಟರು. ನಾಡೋಜ ಮುಳಿಯ ತಿಮ್ಮಪ್ಪಯ್ಯನವರ ಎರಡನೆಯ ಸೊಸೆಯಾಗಿ, ಯಕ್ಷಗಾನ ವಿದ್ವಾಂಸ ಮುಳಿಯ ಮಹಾಬಲ ಭಟ್ಟರ ಪತ್ನಿಯಾಗಿ ಕುಟುಂಬದ ಘನತೆಯನ್ನು ಎತ್ತಿ ಹಿಡಿದವರು. ಅಮೆರಿಕದಲ್ಲಿ ನೆಲೆಗೊಂಡ ಜಯರಾಮ್ ಭಟ್ ಹಾಗೂ ಬೆಂಗಳೂರಿನಲ್ಲಿರುವ ಖ್ಯಾತ ಛಾಯಾಚಿತ್ರ ತಂತ್ರಜ್ಞ ಮಹೇಶ್ ಎಂ ಭಟ್ಟರ ಧನ್ಯ ತಾಯಿಯವರು.


ಹೆಂಗಸರು ವಿಧವೆಯರಾದಾಗ ಮಾಂಗಲ್ಯವನ್ನು ತೆಗೆಯಬೇಕೆಂಬ ಗೊಡ್ಡು ನಂಬಿಕೆಯನ್ನು ನಖಶಿಖಾಂತ ಎದುರಿಸಿ ಹೋರಾಡಿದವರು. ಪೊಲೀಸರನ್ನು ಪೇದೆ ಎಂದು ಹಗುರವಾಗಿ ಕರೆಯುವವರನ್ನು ವಿರೋಧಿಸಿ ಪೊಲೀಸರ ಸಭೆಯಲ್ಲೇ ಗುಡುಗಿದವರು, ಲೇಖಕಿಯರ ವಾಚಕಿಯರ ಸಂಘದ ಪದಾಧಿಕಾರಿಯಾಗಿ ಹೆಣ್ಣುಮಕ್ಕಳ ಬದುಕಿನ ಪುರೋಗತಿಯ ಬಗ್ಗೆ ಸದಾ ಹೋರಾಟನಿರತರಾದವರು, ಇನ್ನೂ ಬರೆಯಬೇಕೆಂಬ ಹಂಬಲ, ಇನ್ನೂ ಕಸೂತಿ ಕೆಲಸ ಮಾಡಬೇಕೆಂಬ ತುಡಿತ ಅವರಲ್ಲಿ ಕೊನೆತನಕ ಬತ್ತಲೇ ಇಲ್ಲ.


'ಅವತಾರ್'ಗೆ ಅವರನ್ನು ನೋಡಬಂದವರಿಗೆಲ್ಲ ತಾನೇ ನೇಯ್ದ ಶಾಲು ಹೊದಿಸಿ ಸನ್ಮಾನಿಸಿ ಕಳುಹಿಸುವುದು ಅವರ ಪರಿಪಾಠವಾಗಿತ್ತು. ತನ್ನ ಮಾವ ಮುಳಿಯ ತಿಮ್ಮಪ್ಪಯ್ಯನವರ ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ ಎರಡು ದಶಕಗಳಗಿಂತಲೂ ಹೆಚ್ಚುಕಾಲ ಮುಳಿಯ ಪ್ರಶಸ್ತಿ ಕಾರ್ಯಕ್ರಮ ನಡೆಸಿಕೊಂಡು ಬಂದವರು. ಉತ್ಸಾಹದ ಚಿಲುಮೆಯಾಗಿದ್ದ ಮನೋರಮಾ ಎಂ ಭಟ್ಟರು ಇಂದು (ಸೆ.16) ಅಪರಾಹ್ನ 2.05ಕ್ಕೆ ನಮ್ಮನ್ನೆಲ್ಲ ಅಗಲಿ ಪತಿಯ ಜೊತೆ ಸೇರಲು ಹೊರಟು ಹೋದರು.


(ನಾ.ದಾ. ಶೆಟ್ಟರು ತಮ್ಮ ಫೇಸ್‌ ಬುಕ್‌ ವಾಲ್‌ನಲ್ಲಿ ಪ್ರಕಟಿಸಿದ ಮಾಹಿತಿಯನ್ನು ಇಲ್ಲಿ ಬಳಸಿಕೊಳ್ಳಲಾಗಿದೆ).


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


0 Comments

Post a Comment

Post a Comment (0)

Previous Post Next Post