ಶಿವಮೊಗ್ಗ: ವಿಧಾನ ಪರಿಷತ್ ಮಾಜಿ ಸದಸ್ಯ, ಬಿಜೆಪಿ ನಾಯಕ ಎಂ. ಬಿ. ಭಾನುಪ್ರಕಾಶ್ (69) ಇಂದು ವಿಧಿವಶರಾದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಅವರಿಗೆ ಹೃದಯಾಘಾತವಾಗಿದ್ದು, ಚಿಕಿತ್ಸೆ ಫಲಿಸದೇ ನಿಧನರಾದರು.
ಸೋಮವಾರ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಶಿವಮೊಗ್ಗದಲ್ಲಿ ಬಿಜೆಪಿ ಪ್ರತಿಭಟನೆ ಆಯೋಜಿಸಿತ್ತು. ನಗರದ ಗೋಪಿ ವೃತ್ತದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾನುಪ್ರಕಾಶ್ ಪಾಲ್ಗೊಂಡಿದ್ದರು.
ಪ್ರತಿಭಟನೆ ನಡೆಸುವಾಗಲೇ ಎಂ.ಬಿ. ಭಾನುಪ್ರಕಾಶ್ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಭಾನುಪ್ರಕಾಶ್ ವಿಧಿವಶರಾದರು.
ರಾಷ್ಟೀಯ ಸ್ವಯಂ ಸೇವಕ ಸಂಘದ ಸದಸ್ಯರಾಗಿದ್ದ ಎಂ.ಬಿ. ಭಾನುಪ್ರಕಾಶ್ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಬಿಜೆಪಿ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿಯೂ ನೇಮಕ ಮಾಡಿತ್ತು.
ಸರಳ, ಸಜ್ಜನರಾಗಿದ್ದ ಎಂ. ಬಿ. ಭಾನುಪ್ರಕಾಶ್ ಉತ್ತಮ ವಾಗ್ಮಿ. 2001 ರಿಂದ 2005ರ ತನಕ ಗಾಜನೂರು ಗ್ರಾಮದಿಂದ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಬಳಿಕ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಗೊಂಡಿದ್ದರು.
ಹಲವು ಗಣ್ಯರ ಕಂಬನಿ: ಭಾನುಪ್ರಕಾಶ್ ನಿಧನಕ್ಕೆ ಹಲವಾರು ನಾಯಕರು ಸಂತಾಪ ಸೂಚಿಸಿದ್ದಾರೆ. ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, 'ರಾಷ್ಟೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕರು, ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರು, ರಾಜ್ಯ ಪ್ರಕೋಷ್ಠಗಳ ಸಂಯೋಜಕರಾಗಿ ಪಕ್ಷವನ್ನು ಶಿಸ್ತು ಬದ್ಧವಾಗಿ ಸಂಘಟಿಸುವಲ್ಲಿ ಅವಿರತ ಶ್ರಮಿಸಿದ ಪ್ರಮುಖರು, ಮಾಜಿ ವಿಧಾನ ಪರಿಷತ್ ಸದಸ್ಯರು, ನನ್ನ ರಾಜಕೀಯ ಮಾರ್ಗದರ್ಶಕರಾಗಿ ಸಲಹೆ ನೀಡಿ ಹರಸಿದ ಶ್ರೀ ಭಾನುಪ್ರಕಾಶ್ ಅವರು ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಅವರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ, ಕುಟುಂಬ ಸದಸ್ಯರಿಗೆ ದುಃಖ ಸಹಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ' ಎಂದು ಸಂತಾಪ ಸೂಚಿಸಿದ್ದಾರೆ.
ಕಾರ್ಕಳದ ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್, 'ಭಾರತೀಯ ಜನತಾ ಪಾರ್ಟಿಯ ಹಿರಿಯ ಮುತ್ಸದ್ಧಿ ವಿಧಾನ ಪರಿಷತ್ತಿನ ಮಾಜಿ ಸದಸ್ಯರು, ಮಿತ್ರರು, ಮಾರ್ಗದರ್ಶಕರು ಆದ ಭಾನುಪ್ರಕಾಶ್ ಜೀ ಅವರು ದೈವಾಧೀನರಾಗಿರುವ ಸುದ್ದಿ ಅತೀವ ದುಃಖ ತಂದಿದೆ. ರಾಷ್ಟ್ರೀಯವಾದಿ ಚಿಂತನೆಯನ್ನು ಬದುಕಿನುದ್ದಕ್ಕೂ ಪಾಲಿಸಿಕೊಂಡು, ಕಾರ್ಯಕರ್ತರಿಗೆ ಆದರ್ಶಪ್ರಾಯರಾಗಿದ್ದ ಇವರ ವ್ಯಕ್ತಿತ್ವ ನಮಗೆಲ್ಲರಿಗೂ ಪ್ರೇರಣೆ. ಅಗಲಿದ ಚೇತನಕ್ಕೆ ಪರಮಾತ್ಮ ಚಿರಶಾಂತಿ ಕರುಣಿಸಲಿ. ಅವರ ಕುಟುಂಬಕ್ಕೆ, ಬಂಧುಗಳಿಗೆ, ಅಭಿಮಾನಿಗಳಿಗೆ ಅವರ ಅಗಲುವಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂಶಾಂತಿ' ಎಂದು ಸಂತಾಪ ಸಂದೇಶ ಪೋಸ್ಟ್ ಮಾಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, 'ಸಹಸ್ರಾರು ಜನರಿಗೆ ಆಶ್ರಯ ನೀಡಿದ ಆಲದ ಮರವೊಂದು ಧರೆಗುರುಳಿತು. ಓಂ ಶಾಂತಿಃ ಶಾಂತಿಃ ಶಾಂತಿ' ಎಂದು ಸಂತಾಪ ಸೂಚಿಸಿದ್ದಾರೆ. ಬಿ. ಎಸ್. ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾಗ ಎಂ. ಬಿ. ಭಾನುಪ್ರಕಾಶ್ ಅವರನ್ನು ಬಿಜೆಪಿ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಆದರೆ ಯಡಿಯೂರಪ್ಪ ಕಾರ್ಯ ವೈಖರಿ ಟೀಕಿಸಿ, ಉಪಾಧ್ಯಕ್ಷ ಸ್ಥಾನ ಬೇಡ, ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಇರುತ್ತೇನೆ ಎಂದು ಹೇಳಿದ್ದರು. ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾಗ ಭಾನುಪ್ರಕಾಶ್ ಅವರಿಗೆ ಮತ್ತೆ ಉಪಾಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق