ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಧರ್ಮದರ್ಶಿ ಸುಬ್ರಾಯ ಉಡುಪ ಅಸ್ತಂಗತ

ಧರ್ಮದರ್ಶಿ ಸುಬ್ರಾಯ ಉಡುಪ ಅಸ್ತಂಗತ



ಉಡುಪಿ: ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಧರ್ಮದರ್ಶಿ ಆಗಿರುವ ಬಳ್ಕೂರು ಸುಬ್ರಾಯ ಉಡುಪ ಅವರು ಶನಿವಾರ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.


ಶ್ರೀಯುತ ಬಳ್ಕೂರು ಸುಬ್ರಾಯ ಉಡುಪರು ಓರ್ವ ನಿಜಾರ್ಥದ ಧರ್ಮದರ್ಶಿಯಾಗಿದ್ದವರು. 94 ಸಂವತ್ಸರಗಳ ದೀರ್ಘಾಯುಷ್ಯವನ್ನು ಸಮಾಜಮುಖಿ ಧರ್ಮಮುಖಿಯಾಗಿ ಸಾರ್ಥಕಗೊಳಿಸಿಕೊಂಡ ಮಹಾಚೇತನ. ಸುದೀರ್ಘ 36 ವರ್ಷ ಅಧ್ಯಾಪಕ ಮುಖ್ಯೋಪಾಧ್ಯಾಯರಾಗಿ ಸಾವಿರಾರು ಮಕ್ಕಳಿಗೆ ಜ್ಞಾನದ ಬೆಳಕಿನಲ್ಲಿ ಸನ್ಮಾರ್ಗದ ಪಥತೋರಿದ ಗುರುಗಳು. ವಿಶ್ವಾಮಿತ್ರ ಗೋತ್ರಜರೂ ಸೇರಿದಂತೆ ಅಸಂಖ್ಯ ಭಕ್ತಾದಿಗಳನ್ನು ಹೊಂದಿರುವ ಕರಾವಳಿಯ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿರುವ ಉಳ್ಳೂರು ಶ್ರೀ ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನದ ಪುನರುತ್ಥಾನದ ದೊಡ್ಡ ಶ್ರೇಯಸ್ಸು ಧರ್ಮದರ್ಶಿ ಸುಬ್ರಾಯ ಉಡುಪರಿಗೆ ಸಲ್ಲುತ್ತದೆ.


ಭಕ್ತಜನರ ಸಹಕಾರದೊಂದಿಗೆ ಯಾವುದೇ ಸದ್ದು ಗದ್ದಲವಿಲ್ಲದೆ ಹಂತಹಂತವಾಗಿ ಒಂದೊಂದೇ ಭಾಗದ ನವೀಕರಣವನ್ನು ಕೈಗೊಂಡು ಶ್ರೀದೇವಳವನ್ನು  ಸಮಗ್ರವಾಗಿ ಜೀರ್ಣೋದ್ಧಾರಗೊಳಿಸುವಲ್ಲಿ ಉಡುಪರ ಕ್ರತುಶಕ್ತಿ, ಉದ್ವೇಗರಹಿತವಾದ ಸರಳ ಸಜ್ಜನಿಕೆಯ ಕಾರ್ಯಶೈಲಿ ಒಂದು ಮಾದರಿ. ಸಾಮಾನ್ಯವಾಗಿ ಒಂದು ದೇವಸ್ಥಾನ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಬಹಳ ತ್ವರಿತ ಗತಿಯಲ್ಲಿ ಆರಂಭಿಸಿ ಬೇಗನೇ ಮುಗಿಸುವ ಧಾವಂತ, ಪ್ರಚಾರದ  ಭರಾಟೆಗಳಿಂದ ಕೂಡಿದ್ದರೆ ಉಳ್ಳೂರು ದೇವಳ ಅದಕ್ಕೊಂದು ಅಪವಾದ.


ಒಂದೇ ಬಾರಿಗೆ ಸಂಪೂರ್ಣ ಅಥವಾ ದೊಡ್ಡ ಮಟ್ಟದ ನವೀಕರಣ ಕೈಗೆತ್ತಿಕೊಳ್ಳದೇ ಸಣ್ಣ ಸಣ್ಣಮಟ್ಡದ ಭಾಗಗಳ ನವೀಕರಣ ಕಾರ್ಯಗಳನ್ನು  ಎತ್ತಿಕೊಂಡು ಅದನ್ನು ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಸಾವಧಾನವಾಗಿ ಮುಗಿಸಿದ ಬಳಿಕವೇ ಮತ್ತೊಂದು ಭಾಗವನ್ನು ನವೀಕರಿಸುವ ಹೊಸ ಪದ್ಧತಿ ಉಳ್ಳೂರು ದೇವಳದಲ್ಲಿ ಕಾಣಬಹುದು. ಇದು ಉಡುಪರ ನೇತೃತ್ವದ ಶೈಲಿ. ಮೃದು- ಮಿತಭಾಷಿಯಾಗಿದ್ದು ಸದಾ ಕ್ರಿಯಾಶೀಲರಾಗಿದ್ದುಕೊಂಡು ಸಮಾಜಕ್ಕೆ ಅವರು ನೀಡಿದ ಮಾರ್ಗದರ್ಶನ, ಸಮರ್ಥವಾಗಿ ನಿರ್ವಹಿಸಿದ ನ್ಯಾಯಕೈಂಕರ್ಯಗಳು, ಧಾರ್ಮಿಕ ಸಾಮಾಜಿಕ  ಕೊಡುಗೆಗಳು ಅನುಗಾಲ ಸ್ಮರಣೀಯ. ಒಂದೊಮ್ಮೆ ಹನ್ನೆರಡು ವರ್ಷಗಳ ಹಿಂದೆ ತಿರುಪತಿಯಲ್ಲಿ ನಡೆಯುತ್ತಿದ್ದ ಮತಾಂತರ ಚಟುವಟಿಕೆಗಳನ್ನು ವಿರೋಧಿಸಿ ನಡೆದ ತಿರುಪತಿ ಉಳಿಸಿ ಆಂದೋಲನ, ಹಿಂದೂ ಸಮಾಜೋತ್ಸವ ಇತ್ಯಾದಿಗಳಿಗೂ ತನ್ನ ಇತಿಮಿತಿಯಲ್ಲಿ ಒಳ್ಳೆಯ ಸಹಕಾರ ನೀಡಿದ್ದನ್ನು ಸ್ಮರಿಸಬೇಕು. ಇಂಥ ಸಾರ್ಥಕ ಬದುಕು ನಡೆಸಿ ತೆರಳಿದ ಸುಬ್ರಾಯ ಉಡುಪರ ದಿವ್ಯಾತ್ಮಕ್ಕೆ ಉಳ್ಳೂರು ಕಾರ್ತಿಕೇಯ ಸ್ವಾಮಿ ಸಹಿತ ದೈವೀ ಶಕ್ತಿಗಳು ಸದ್ಗತಿಯನ್ನು ಕರುಣಿಸಲಿ. 


- ಜಿ ವಾಸುದೇವ ಭಟ್ ಪೆರಂಪಳ್ಳಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

0 Comments

Post a Comment

Post a Comment (0)

Previous Post Next Post