ಖ್ಯಾತ ನಟ, ನಾಟಕ ಕಲಾವಿದ, ಹಾಡುಗಾರ ಪ್ರಸಾಧನಕಾರ ಎಸ್. ರಾಮದಾಸ್ ನಿಧನ.
ಮಂಗಳೂರು: ಖ್ಯಾತ ನಟ, ನಾಟಕ ಕಲಾವಿದ, ಹಾಡುಗಾರ ಪ್ರಸಾಧನಕಾರ ಎಸ್. ರಾಮದಾಸ್ (86) ಇಲ್ಲಿನ ಟಿ. ಟಿ. ರಸ್ತೆ ನಿವಾಸಿ ಅಲ್ಪ ಕಾಲದ ಅಸೌಖ್ಯದಿಂದಾಗಿ 27.03.2024 ರಂದು ಮಧ್ಯಾಹ್ನ ನಗರದ ಸ್ವಗ್ರಹದಲ್ಲಿ ನಿಧನ ಹೊಂದಿದರು.
ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆ ಯಲ್ಲಿ 32 ವರ್ಷ ಸೇವೆ ಸಲ್ಲಿಸಿದ ಇವರು ಕಲ್ಕೂರ ಜಾಹೀರಾತು ಸಂಸ್ಥೆಯಲ್ಲಿ ಕೆಲವು ವರ್ಷ ಕೆಲಸ ಮಾಡಿದ್ದರು .ದಶಕಗಳ ಕಾಲದ ಹಿಂದೆ ಪ್ರಾಥಮಿಕ ನವೋದಯ ಕಲಾವೃoದದಲ್ಲಿ ಮಸಣಕ್ಕೆ, ತರಂಗ ತರಂಗ ಅಂತರಂಗ, ಹೆಗಲಿಗೆ ಇರುಳು, ಅಸ್ತಮಾನ, ಕಲ್ಜಿಗದ ಕುರುಕ್ಷೇತ್ರ, ಕೋಟಿ ಚೆನ್ನಯ್ಯ ಪ್ರಮುಖ ಪಾತ್ರ ದಲ್ಲಿ ನಟಿಸಿದ್ದ ಇವರು ಎನ್. ಎಸ್. ರಾವ್ ರಚಿಸಿದ ಕಲಿ ಕಂಠೀರವ ನಾಟಕದಲ್ಲಿ ನಂಜಯ್ಯನ ಪಾತ್ರದಲ್ಲಿ ಮಿಂಚಿದ್ದರು. ಸೀತಾರಾಮ್ ಕುಲಾಲ್ ರವರ ಮಣ್ಣಿನ ಮಗಳು ಅಬ್ಬಕ್ಕ ದಲ್ಲಿ ನಾರ್ಣಪ್ಪಯ್ಯ ಪಾತ್ರ ಸ್ಮರಿಸುವಂತದ್ದು.
ಮಾಸ್ಟರ್ ವಿಠ್ಠಲ್ ಜತೆ ಯಲ್ಲಿ 40 ವರ್ಷ ಗಳಿಂದ ಹಾಡುಗಾರನಾಗಿ ಪ್ರಸಾಧನ ಕಲಾವಿದರಾಗಿ, ಮಾಯಾಮೃಗ, ಶಕುಂತಳಾ, ಮೋಹಿನಿ - ಭಸ್ಮಾಸುರ..ಇನ್ನೂ ಅನೇಕ ರೂಪಕಗಳಿಗೆ ಹಾಡುಗಾರನಾಗಿ, ಪ್ರಸಾಧನ ಕಲಾವಿದನಾಗಿ ಪ್ರಸಿದ್ದಿ ಹೊಂದಿದ್ದರು . ದಿ. ರಾಮ ಕಿರೋಡಿಯನ್ ರವರ ಬಿರ್ದ್ ದ ಬೈರವೆರ್, ತುಳಸಿ ಜಲoಧರ, ಕಾಂತಾಬಾರೆ ಬೂದಾಬಾರೆಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ.ರಾಣಿ ಅಬ್ಬಕ್ಕ ನಾಟಕದಲ್ಲಿ ಮಂತ್ರಿ ನಾರ್ಣಪಯ್ಯನ ಪಾತ್ರ, ರತ್ನಾಕರ್ ರಾವ್ ಕಾವೂರು ರಚಿಸಿದ ರಾಘವೇಂದ್ರ ವೈಭವ ನಾಟಕದಲ್ಲಿ ವೆಂಕಣ್ಣಯ್ಯ ಪಾತ್ರ, ಯು. ಆರ್ ಚಂದರ್ ರವರ ಹೆಣ್ಣಿನ ಕಣ್ಣೀರು- ಹೀಗೆ ಅನೇಕ ನಾಟಕಗಳಲ್ಲಿ ಅತ್ಯುತ್ತಮ ಪಾತ್ರವಹಿಸಿ ಜನಮನ ಗೆದ್ದಿದ್ದರು. ಡಾ. ಮೋಹನ್ ಆಳ್ವರ ಅನೇಕ ಕಾರ್ಯಕ್ರಮ ಗಳಲ್ಲಿ ಹಿನ್ನೆಲೆ ಗಾಯಕನಾಗಿ ಪ್ರಶಂಸೆಗೆ ಪಾತ್ರ ರಾಗಿದ್ದರು.
ಮಂಗಳೂರು ಆಕಾಶವಾಣಿಯಲ್ಲಿ ಭಾವಗೀತೆ ಕಾರ್ಯಕ್ರಮ, ರೇಡಿಯೋ ನಾಟಕ ಕೋಟಿ ಚೆನ್ನಯ್ಯದಲ್ಲಿ ಧ್ವನಿ ನೀಡಿದ್ದರು. ಅನೇಕ ನಾಟಕಗಳಲ್ಲಿ, ಭರತ ನಾಟ್ಯ ಸಂಸ್ಥೆಗಳ ಕಲಾವಿದರಿಗೆ, ಶಾಲಾ ಕಾಲೇಜು, ಹಬ್ಬದ ದಿನಗಲ್ಲಿ ಸಹಸ್ರಾರು ಮಕ್ಕಳಿಗೆ ವರ್ಣಾಲಂಕಾರಧಾರಿ ಯಾಗಿದ್ದರು. ಹಲವು ಕಡೆಗಳಲ್ಲಿ ಕನ್ನಡ ದಾಸ ಕೀರ್ತನೆ, ಭಜನಾ ಕಾರ್ಯಕ್ರಮಗಳಲ್ಲಿ, ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಇವರು ಮುಖ್ಯ ವಾಗಿ ಪೇಜಾವರ ಶ್ರೀ ಪಾದಂಗಳವರಿಂದ ಪ್ರಥಮ ಪ್ರಶಸ್ತಿಗೆ ಭಾಜನರಾದ ಭಜನಾಕಾರರಾಗಿದ್ದರು. ರಾಮದಾಸರು ತಮ್ಮ ಕಲಾಕ್ಷೇತ್ರದ ಮಹತ್ತರ ಸಾಧನೆಗಾಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲ್ಪಟ್ಟಿದ್ದಾರೆ. ಅಲ್ಲದೆ ಮಂಜುನಾಥ ಕ್ರಪಾಪೋಷಿತ ನಾಟಕ ಸಭಾ, ಲಕುಮಿ ತಂಡ, ಸಂಸ್ಕಾರ ಭಾರತೀ, ಕದಿರೆಯ ಕಲಾವಿದರು ಹೀಗೆ ಹತ್ತು ಹಲವು ಸಂಘ ಸಂಸ್ಥೆ ಗಳಿಂದ ಸನ್ಮಾನಿತರಾಗಿದ್ದಾರೆ.
ಮೃತರು ಪತ್ನಿ, ಎರಡು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ದ.ಕ.ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್,ಕಲ್ಕೂರ ಜಾಹೀರಾತು ಸಂಸ್ಥೆ ಯ ಪ್ರದೀಪ್ ಕುಮಾರ್ ಕಲ್ಕೂರ, ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಸನಾತನ ನಾಟ್ಯಾಲಯದ ಚಂದ್ರಶೇಖರ ಶೆಟ್ಟಿ, ಶ್ರೀಕೃಷ್ಣ ಯಕ್ಷ ಸಭಾದ ಸುಧಾಕರ ರಾವ್ ಪೇಜಾವರ ಸೇರಿದಂತೆ ಜಿಲ್ಲೆಯ ಅನೇಕ ಭಜನಾ ಸಂಸ್ಥೆಗಳು, ನಾಟಕ ಸಂಸ್ಥೆಗಳು, ಭರತ ನಾಟ್ಯ ಸಂಸ್ಥೆಗಳು ಸಂತಾಪ ಸೂಚಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
Post a Comment