ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಿರಿಯ ಮುತ್ಸದ್ದಿ ಡಿ.ಬಿ ಚಂದ್ರೇಗೌಡ ನಿಧನ

ಹಿರಿಯ ಮುತ್ಸದ್ದಿ ಡಿ.ಬಿ ಚಂದ್ರೇಗೌಡ ನಿಧನ


 

ಮೂಡಿಗೆರೆ: ಹಿರಿಯ ಮುತ್ಸದ್ದಿ, ಮಾಜಿ ಸಚಿವ ಡಿ.ಬಿ. ಚಂದ್ರೇಗೌಡ ಅವರು ಸೋಮವಾರ ಮಧ್ಯರಾತ್ರಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.


ಅವರಿಗೆ ಪತ್ನಿ ಪೂರ್ಣಿಮಾ ಮತ್ತು ನಾಲ್ವರು ಪುತ್ರಿಯರಿದ್ದಾರೆ. ಚಂದ್ರೇಗೌಡ ಅವರ ಪಾರ್ಥಿವ ಶರೀರವನ್ನು ಇಂದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಾಳೆ (ಬುಧವಾರ) ದಾರದಹಳ್ಳಿಯ ಅವರ ಪೂರ್ಣಚಂದ್ರ ಎಸ್ಟೇಟ್‌ನಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.


ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮದ ಪಟೇಲ್ ಭೈರೇಗೌಡ ಮತ್ತು ಪುಟ್ಟಮ್ಮ ಅವರ ಪುತ್ರರಾಗಿ ಡಿ.ಬಿ ಚಂದ್ರೇಗೌಡರು 1936ರ ಆಗಸ್ಟ್‌ 26ರಂದು ಜನಿಸಿದ್ದರು. ಕಾನೂನು ಪದವಿ ಪಡೆದು ವಕೀಲ ವೃತ್ತಿಯಲ್ಲಿ ನಿರತಾಗಿದ್ದರು. 1971ರಲ್ಲಿ ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶಿಸಿದ್ದ ಅವರು, ವಿಧಾನಸಭೆ, ವಿಧಾನ ಪರಿಷತ್ತು, ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರಾಗುವ ಮೂಲಕ ನಾಲ್ಕೂ ಸದನಗಳ ಸದಸ್ಯರಾಗಿದ್ದ ಖ್ಯಾತಿಗೆ ಪಾತ್ರರಾಗಿದ್ದರು.


1971ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾದರು. 1977ರಲ್ಲಿ 2ನೇ ಬಾರಿಗೆ ಸಂಸದರಾಗಿ ಚುನಾಯಿತರಾದ ಅವರು, 1978ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಚಿಕ್ಕಮಗಳೂರಿನಿಂದ ಸ್ಪರ್ಧಿಸಲು ಮುಂದಾದಾಗ ರಾಜೀನಾಮೆ ನೀಡಿ ಸ್ಥಾನ ತೆರವುಗೊಳಿಸಿದ್ದರು.


ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ವಿಧಾನ ಪರಿಷತ್ ಸದಸ್ಯರಾಗಿ 1979-80ರ ಅವಧಿಯಲ್ಲಿ ನೀರಾವರಿ ಸಚಿವರಾಗಿದ್ದರು. ಬಳಿಕ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ದೇವರಾಜ ಅರಸು ಅವರ ಜತೆಗೆ ಕ್ರಾಂತಿರಂಗದಲ್ಲಿ ಗುರುತಿಸಿಕೊಂಡು 1980-81ರ ಅವಧಿಯಲ್ಲಿ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕರಾಗಿ ಕೆಲಸ ಮಾಡಿದರು.


ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 1983-85ರಲ್ಲಿ ಚಂದ್ರೇಗೌಡರು ವಿಧಾಣಸಭಾ ಸ್ಪೀಕರ್ ಆಗಿಯೂ ಕಾರ್ಯನಿರ್ವಹಿಸಿದರು. 1999ರಿಂದ 2004ರ ವರೆಗೆ ಎಸ್‌.ಎಂ ಕೃಷ್ಣ ಅವರ ಸಂಪುಟದಲ್ಲಿ ಸಚಿವರಾಗಿದ್ದರು. 2009ರಲ್ಲಿ ಬಿಜೆಪಿ ಸೇರಿದ್ದ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭಾ ಸದಸ್ಯರಾದರು.


ನಾಲ್ಕೂವರೆ ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿದ್ದ ಅವರು ಇತ್ತೀಚೆಗೆ ನಿವೃತ್ತ ಜೀವನ ನಡೆಸುತ್ತಿದ್ದರು.


ಹೆಗ್ಗಡೆ ಸಂತಾಪ

ಮಾಜಿ ಸಚಿವ ಹಾಗೂ ಹಿರಿಯ ರಾಜಕೀಯ ಮುತ್ಸದ್ಧಿ ಡಿ. ಬಿ. ಚಂದ್ರೇಗೌಡ ಅವರ ನಿಧನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸಂತಾಪ ವ್ಯಕ್ತಪಡಿಸಿದ್ದಾರೆ.


ಈ ಸಂಬಂಧ ಪ್ರಕಟಣೆ ನೀಡಿರುವ ಅವರು,  ಹಿರಿಯ ರಾಜಕೀಯ ಮುತ್ಸದ್ಧಿ ಡಿ. ಬಿ. ಚಂದ್ರೇಗೌಡ ನಿಧನರಾದ ವಿಚಾರ ತಿಳಿದು ವಿಷಾದವಾಯಿತು. ಶಾಸಕರಾಗಿ, ಸಂಸದರಾಗಿ, ಸಚಿವರಾಗಿ, ವಿಧಾನಸಭೆಯ ಸಭಾಪತಿಯಾಗಿ ಅವರು ಉತ್ತಮ ಸೇವೆ ನೀಡಿದ್ದಾರೆ. ಧರ್ಮಸ್ಥಳದ ಅಭಿಮಾನಿಯೂ, ಭಕ್ತರೂ ಆಗಿದ್ದ ಅವರು ನಮ್ಮ ಕಾರ್ಯಕ್ರಮಗಳಿಗೆ ಸಕ್ರಿಯ ಸಹಕಾರ ನೀಡಿದ್ದಾರೆ. ನೇರ ನಡೆ-ನುಡಿಯ ಅವರು ಸರಳ ವ್ಯಕ್ತಿತ್ವವನ್ನು ಹೊಂದಿದ್ದರು.


ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಹಾಗೂ ಅವರ ಅಗಲುವಿಕೆಯಿಂದ ಕುಟುಂಬವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.


0 Comments

Post a Comment

Post a Comment (0)

Previous Post Next Post