ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್‌.ವಿ ಭಟ್ ನಿಧನ

ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್‌.ವಿ ಭಟ್ ನಿಧನ



ಕಾಸರಗೋಡು: ಕಾಸರಗೋಡು ಜಿಲ್ಲೆಯ ಕನ್ನಡ ಪರ ಹೋರಾಟದಲ್ಲಿ ಮಂಚೂಣೆಯಲ್ಲಿದ್ದ "ಕನ್ನಡ ಸಾಹಿತ್ಯ ಪರಿಷತ್‌" ನ ಕೇರಳ ಗಡಿನಾಡ ಘಟಕದ ಜಿಲ್ಲಾಧ್ಯಕ್ಷರಾಗಿರುವ ಎಸ್‌.ವಿ. ಭಟ್‌ (ಸುಬ್ರಹ್ಮಣ್ಯ ವೆಂಕಟ್ರಮಣ ಭಟ್‌)  (72) ಹೃದಯಾಘಾತದಿಂದ ಕುಸಿದು ಬಿದ್ದು, ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ನಿಧನರಾದರು. 


ಕಾಸರಗೋಡು ಬೀರಂತಬೈಲು ನಿವಾಸಿಯಾಗಿರುವ ಎಸ್‌. ವಿ ಭಟ್‌ ರವರು ಕುಂಬಳೆ, ಕಾಸರಗೋಡು, ಅಡೂರು ಹಾಗೂ ಜಿಲ್ಲೆಯ ವಿವಿಧ ಕಡೆಗಳ ಶಾಲೆಗಳಲ್ಲಿ ಅಧ್ಯಾಪಕರಾಗಿಯೂ, ಮುಖ್ಯೋಪಾಧ್ಯಾಯರಾಗಿಯೂ ಸೇವೆ ಸಲ್ಲಿಸಿ, ಕಾಸರಗೋಡು ಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿಯಾಗಿ ನಿವೃತ್ತಿ ಹೊಂದಿದ್ದರು. ಕನ್ನಡ ಸಾಹಿತ್ಯ ಪರಿಷತ್‌ ಕೇರಳ ಘಟಕದ ಅಧ್ಯಕ್ಷರಾಗಿ ಮೂರು ಬಾರಿ ಆಯ್ಕೆಯಾಗಿ, ಕನ್ನಡ ಪರ ಹೋರಾಟಗಳಲ್ಲಿ, ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಹಲವಾರು ಸಾಹಿತ್ಯ, ಸಮ್ಮೇಳನವನ್ನು, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ಯಶಸ್ವಿಯಾಗಿದ್ದರು.


ಇದೀಗ ವಿಶ್ರಾಂತ ಜೀವನ ನಡೆಸುತ್ತಿದ್ದ ಎಸ್‌.ವಿ ಭಟ್‌ ರವರು ಇಂದು (ಸೆ.10) ಬದಿಯಡ್ಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ಅಲ್ಲೇ ಹೃದಯಾಘಾತದಿಂದ ಕುಸಿದು ಬಿದ್ದ ಇವರನ್ನು ಸ್ಥಳೀಯರು ಕೂಡಲೇ ಕಾಸರಗೋಡಿನ ಇ.ಕೆ ನಾಯನಾರ್‌ ಆಸ್ಪತ್ರೆಗೆ ಕರೆದೊಯ್ದರು. ಆದರೆ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದರು.


ಮೃತರು ಪತ್ನಿ ತಾರಾ ಪಿ. ಭಟ್‌ (ನಿವೃತ್ತ ಪೋಸ್ಟ್‌ ಮಾಸ್ಟರ್‌), ಮಕ್ಕಳಾದ: ಡಾ. ಮುರಳೀಧರ ಭಟ್‌ ( ಪುತ್ತೂರು ಹಾಗೂ ವಿಟ್ಣದಲ್ಲಿ ಕಾರ್ಯಾಚರಿಸುತ್ತಿರುವ ಪರ್ಫೆಕ್ಟ್‌ ಸ್ಮೈಲ್‌ ದಂತ ಚಿಕಿತ್ಸಾಲಯದ ವೈದ್ಯ), ವೀಣಾ (ಇಂಜಿನಿಯರ್‌ ಬೆಂಗಳೂರು), ಸೊಸೆ: ಡಾ. ಶಿಲ್ಪಾ (ಆಯುರ್ವೇದಿಕ್‌. ವೈದ್ಯೆ), ಅಳಿಯ: ಪ್ರಶಾಂತ್‌ (ಇಂಜಿನಿಯರ್‌ ಬೆಂಗಳೂರು), ಸಹೋದರಿ: ಗಿರಿಜಾ ಹಾಗೂ ಇನ್ನೋರ್ವೇ ಸಹೋದರಿಯನ್ನು ಕೂಡಾ ಅಗಲಿದ್ದಾರೆ.


ಇದೀಗ ಮೃತದೇಹ ಇ.ಕೆ ನಾಯನಾರ್‌ ಆಸ್ಪತ್ರೆಯಲ್ಲಿದ್ದು, ಅಂತ್ಯಕ್ರಿಯೆ ಸೋಮವಾರ ಬೆಳಗ್ಗೆ ನಡೆಯಲಿದೆ ಎಂದು ಮನೆ ಮಂದಿ ತಿಳಿಸಿದ್ದಾರೆ.


ಡಾ. ಎಂ.ಪಿ. ಶ್ರೀನಾಥ ಸಂತಾಪ:

ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಎಸ್‌ .ವಿ. ಭಟ್‌ ಅವರ ನಿಧನಕ್ಕೆ ಸಂತಾಪ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಹಿರಿದಾದುದು. ಅವರ ಅಗಲುವಿಕೆ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಅವರ ನಿಧನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಮತ್ತು ಕುಟುಂಬ ವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ವಿ.ಬಿ. ಕುಳಮರ್ವ ಸಂತಾಪ:

ಎಸ್‌.ವಿ ಭಟ್ಟರ ನಿಧನಕ್ಕೆ ಕಾಸರಗೋಡಿನ ಹಿರಿಯ ಕವಿ, ಸಾಹಿತಿ ವಿ.ಬಿ. ಕುಳಮರ್ವ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 

ಕಳೆದ 48 ವರ್ಷಗಳಿಂದ ಆತ್ಮೀಯ ಒಡನಾಡಿಯೂ ಸ್ನೇಹಿತರೂ ಬಂಧುಗಳೂ ಆಗಿರುವ ಶ್ರೀ ಎಸ್.ವಿ.ಭಟ್ ಅವರು ಇನ್ನಿಲ್ಲವೆಂಬ ವಾರ್ತೆಯನ್ನು ನಂಬುವುದೇ ಕಷ್ಟ! ನಿನ್ನೆ ಸಂಜೆಯ ವರೆಗೂ ಸಾಹಿತ್ಯ ಸಮಾರಂಭಗಳಲ್ಲಿ ನಾವು ಒಟ್ಟಿಗೇ ಇದ್ದವರು. ಪರಸ್ಪರ ಆರೋಗ್ಯ, ಯೋಗಕ್ಷೇಮ ಸಮಾಚಾರದ ಕುರಿತು ಮಾತನಾಡುತ್ತಾ ಅವರು ನನ್ನಲ್ಲಿ ಕೊನೆಯದಾಗಿ ಹೇಳಿದ ಮಾತು "ನಾವು ನೀವೆಲ್ಲ ಬೋನಸ್ ಆಯಿಸ್ಸಿನಲ್ಲಿರುವವರು; ಆದುದರಿಂದ ಸಾಧ್ಯವಿದ್ದಷ್ಟು ಗರಿಷ್ಟ ಸಮಾರಂಭಗಳಲ್ಲಿ ಭಾಗವಹಿಸ ಬೇಕು..." ಎಂದು ನಗುತ್ತಾ ಹೇಳಿದವರು! ಅದುವೇ ಅವರ ಮತ್ತು ನನ್ನ ನಡುವಿನ ಕೊನೆಯ ಮಾತು! ಅವರ ಆ ಮುಗ್ಧನಗು ಈಗಲೂ ನನ್ನ ಕಣ್ಣೆದುರು ಮಿಂಚುತ್ತಾ ಇದೆ. 

ಆದರೆ ಇದೀಗ ಬಂದೊದಗಿದ ವಾರ್ತೆ ಎಲ್ಲರನ್ನೂ ಕಂಗೆಡಿಸುವ ಬರಸಿಡಿಲು! ಶ್ರೀ ಎಸ್.ವಿ.ಭಟ್ಟರ ದಿವ್ಯಾತ್ಮಕ್ಕೆ ಶ್ರೀ ಮಹಾವಿಷ್ಣು ಸಾಯುಜ್ಯ ಪ್ರಾಪ್ತವಾಗಲಿ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಶ್ರೀ ದೇವರು ಎಲ್ಲರಿಗೂ ಅನುಗ್ರಹಿಸಲಿ! 

ಓಂ ಶಾಂತಿಃ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

0 Comments

Post a Comment

Post a Comment (0)

Previous Post Next Post