ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗಾನ ನಿಲ್ಲಿಸಿದ ವಾಣಿ: ಖ್ಯಾತ ಹಿನ್ನೆಲೆ ಗಾಯಕಿ, ಪದ್ಮಭೂಷಣ ವಾಣಿ ಜಯರಾಂ ಇನ್ನಿಲ್ಲ

ಗಾನ ನಿಲ್ಲಿಸಿದ ವಾಣಿ: ಖ್ಯಾತ ಹಿನ್ನೆಲೆ ಗಾಯಕಿ, ಪದ್ಮಭೂಷಣ ವಾಣಿ ಜಯರಾಂ ಇನ್ನಿಲ್ಲ

 



ಬೆಂಗಳೂರು: ಖ್ಯಾತ ಗಾಯಕಿ ವಾಣಿ ಜಯರಾಂ ಇನ್ನಿಲ್ಲ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಚೆನ್ನೈನ ನುಂಗಂಬಾಕ್ಕಂ ಹಡ್ಡೋಸ್‌ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಇಂದು (ಶನಿವಾರ, ಫೆ.4) ನಿಧನರಾದರು.


ಕನ್ನಡವೂ ಸೇರಿದಂತೆ ಬಹು ಭಾಷೆಗಳ ಚಿತ್ರಗಳಿಗೆ ಹಿನ್ನೆಲೆ ಗಾಯಕಿಯಾಗಿ ಅಪಾರ ಜನಪ್ರಿಯತೆ ಪಡೆದವರು ವಾಣಿ ಜಯರಾಂ.  1974ರಲ್ಲಿ ಪೋಸ್ಸುಮಂಗಲಿ ಚಿತ್ರದ ಮೂಲಕ ಗಾಯಕಿಯಾಗಿ ಚಿತ್ರ ರಂಗ ಪ್ರವೇಶಿಸಿದ ಅವರು 10 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ಅವರಿಗೆ ಮೂರು ಬಾರಿ ರಾಷ್ಟ್ರಪ್ರಶಸ್ತಿಗಳು ಬಂದಿವೆ.


ಕೇಂದ್ರ ಸರಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಕೂಡ ಮೊನ್ನೆ ತಾನೇ ಅವರನ್ನು ಅರಸಿಕೊಂಡು ಬಂದಿದೆ.



ವಾಣಿ ಜಯರಾಂ ಜನಿಸಿದ್ದು ತಮಿಳುನಾಡಿನ ವೆಲ್ಲೂರಿನಲ್ಲಿ. ಅವರ ತಾಯಿ ಸುಪ್ರಸಿದ್ಧ ಸಂಗೀತ ವಿದ್ವಾಂಸ ರಂಗ ರಾಮಾನುಜ ಅಯ್ಯಂಗಾರ್ ಅವರ ಶಿಷ್ಟೆ. ಹೀಗಾಗಿ ಸಂಗೀತದ ಹಿನ್ನೆಲೆ ಅವರಿಗತ್ತು. ಬಾಲ್ಯದಿಂದಲೇ ಸಂಗೀತ ಅಭ್ಯಾಸ ಮಾಡಿದ್ದ ಅವರು, ನಂತರ ಮದ್ರಾಸ್‌ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲೂ ಸ್ವಲ್ಪ ಕಾಲ ಕೆಲಸ ಮಾಡಿದ್ದರು. ಮದುವೆಯ ನಂತರ ಮುಂಬಯಿಯಲ್ಲಿ ನೆಲೆಸಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದರು.


ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಓಡಿಯಾ, ಗುಜರಾತಿ, ಬಂಗಾಳಿ ಸೇರಿದಂತೆ ಭಾರತೀಯ ನಾನಾ ಭಾಷೆಗಳ ಸಿನಿಮಾಗಳಿಗೆ ಹಾಡಿದ ಹೆಗ್ಗಳಿಕೆ ಇವರದ್ದಾಗಿದೆ. ಕನ್ನಡದಲ್ಲಿ ಅನುಭವ, ರಣರಂಗ, ಶಿವ ಮೆಚ್ಚಿದ ಕಣ್ಣಪ್ಪ, ಒಲವಿನ ಉಡುಗೊರೆ, ಮಲಯ ಮಾರುತ ಸೇರಿದಂತೆ 50ಕ್ಕೂ ಮಿಕ್ಕು ಗೀತೆಗಳನ್ನು ಹಾಡಿದ್ದಾರೆ. ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್, ಅನಂತ್ ನಾಗ್ ಸೇರಿದಂತೆ ಹೆಸರಾಂತ ಕಲಾವಿದರ ಚಿತ್ರಕ್ಕೆ ಹಾಡಿದ ಹೆಗ್ಗಳಿಕೆ ವಾಣಿ ಜಯರಾಂ ಅವರದ್ದು.



‘ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧ ಚೆಲ್ಲಿ, ರಾಗವೆಂಬ ಜೇನ ಹೊನಲು ತುಂಬಿ ಹರಿಯಲಿ, ಜಗವ ಕುಣಿಸಿ ನಲಿಸಲಿ” ಎಂದು ಆಕೆ ಹಾಡಿದರೆ ನಮ್ಮ ಹೃದಯಾಂತರಂಗ ಸಂಗೀತದಲ್ಲಿ ವಿಲೀನವಾಗಿಬಿಟ್ಟಿರುತ್ತದೆ.  ಸಂಗೀತ ಪ್ರಧಾನವಾದ ‘ಶಂಕರಾಭರಣಂ’ ಚಿತ್ರ  ಸಂಗೀತ ಪ್ರೇಮಿಗಳು ತುಂಬಿರುವ ಕನ್ನಡ ನಾಡಿನಲ್ಲಿ ಪ್ರಚಂಡ ಯಶಸ್ಸು ಕಂಡಿತು. ಆ ಚಿತ್ರದಲ್ಲಿ ವಾಣಿ ಜಯರಾಂ ಅವರ ದ್ವನಿಯಲ್ಲಿ ಮೂಡಿರುವ  ‘ಮಾನಸ ಸಂಚರರೆ, ಬ್ರಹ್ಮನಿ ಮಾನಸ ಸಂಚರರೆ’ ಹಾಡು ಕೇಳುವುದು ಒಂದು ಅಧ್ಯಾತ್ಮಿಕ ಅನುಭವವಾಗುತ್ತದೆ.  ಆ ಹಾಡಿನ ಅಂತಿಮ ಚರಣದಲ್ಲಿನ ‘ಪರಮಹಂಸ ಮುಖ ಚಂದ್ರ ಚಕೋರೆ, ಪರಿಪೂರಿತ ಮುರಳೀರವಧಾರೆ’ ಎಂಬಲ್ಲಿ ವಾಣಿ ಜಯರಾಂ ಅವರ ಭಾವುಕ ಉಚ್ಚಾರ ಸರ್ವಶ್ರೇಷ್ಠವಾದದ್ದು.  ಇದೇ ಹಾಡಿಗೆ ವಾಣಿ ಜಯರಾಂ ಅವರಿಗೆ ರಾಷ್ಟ್ರ ಪ್ರಶಸ್ತಿ ದೊರಕಿರುವುದು ನಮಗೆಲ್ಲರಿಗೂ ತಿಳಿದ ವಿಚಾರ. ಇದೇ ರೀತಿ ರಜನೀಕಾಂತರನ್ನು ತಮಿಳು ಸಿನಿಮಾಗೆ ಪರಿಚಯಿಸಿದ ‘ಅಪೂರ್ವ ರಾಗಂಗಳ್‘ ಚಿತ್ರದ ‘ಏಳು ಸ್ವರಂಗಳುಕ್ಕುಳ್ ಎತ್ತನೈ ಪಾಡಲ್’ ಎಂಬ ಅಷ್ಟೇ ಸುಶ್ರಾವ್ಯ ಹಾಡಿಗೂ ಕೂಡ ಅವರು ರಾಷ್ಟ್ರ ಪ್ರಶಸ್ತಿ ಪಡೆದರು.  


“ಶಾಂತರಸ ಹರಿದಿಹುದು ತುಂಗೆಯಾಗಿ, ಶಾರದೆಯು ನೆಲೆಸಿಹಳು ಮಾತೆಯಾಗಿ” ಎಂಬ ದಿನನಿತ್ಯ ನಾವು ಕೇಳುವ ಹಾಡಾಗಲಿ, ಆಗಾಗ ಸುಗಮ ಸಂಗೀತದಲ್ಲಿ ರೇಡಿಯೋದಲ್ಲಿ ನಮ್ಮ ಕಿವಿಗೆ ಬೀಳುತ್ತಿದ್ದ “ಏನು ಮಾತು, ಏನು ಮಾತು, ಏನು ಮಾತಮ್ಮ ಇದು ಸುಳ್ಳು ಹೋಗಿ ಹೋಗಿ” ಎಂಬ ಸುಗಮ ಸಂಗೀತದ ಛಾಯೆ ಇರುವ ಹಾಡಿನಲ್ಲಾಗಲಿ, “ಮಲೆನಾಡಿನ್ ಮೂಲೆಯಾಗೆ ಇತ್ತೊಂದು ಸಣ್ಣ ಹಳ್ಳಿ” ಎಂಬ ಜನಪದ ಶೈಲಿಯ ಹಾಡಾಗಲಿ, “ಹ್ಯಾಪಿಯೆಸ್ಟ್ ಮೂಮೆಂಟ್, ಎವ್ರಿ ಈವೆಂಟ್” ಎಂಬ ಪಾಶ್ಚಾತ್ಯ ಶೈಲಿಯ ಹಾಡಾಗಲಿ ಅಥವಾ ಇನ್ಯಾವುದೇ ಹಾಡಿನಲ್ಲಾಗಲಿ ವಾಣಿ ಜಯರಾಂ ಅವರ ಧ್ವನಿ ತನ್ನ ಮಾಧುರ್ಯವನ್ನು ಬಿಟ್ಟುಕೊಡುವುದೇ ಇಲ್ಲ.  ಅಷ್ಟು ಪರಿಪಕ್ವ, ಅವರ ಹೃದಯಾಂತರಾಳದ ಸಂಗೀತಸುಧೆ.

0 Comments

Post a Comment

Post a Comment (0)

Previous Post Next Post