ಮೈಸೂರು - ಜಿಲ್ಲೆಯಲ್ಲಿ ಇತ್ತೀಚೆಗೆ ಚಿರತೆ ಹಾವಳಿ ಹೆಚ್ಚುತ್ತಲೇ ಇದ್ದು, ಇದೀಗ ನಗರ ಪ್ರದೇಶದಲ್ಲೂ ಚಿರತೆ ಕಾಣಿಸಿಕೊಂಡಿರುವುದು, ನಗರದ ಜನರ ನಿದ್ದೆಗೆಡಿಸಿದೆ. ಆರ್‍ಟಿ ನಗರದಲ್ಲಿರುವ ಉರುಕಾತೇಶ್ವರಿ ದೇವಸ್ಥಾನ ಬಳಿ ರಾತ್ರಿ ಚಿರತೆಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.
ರಸ್ತೆ ಕಾಮಗಾರಿ ನಡೆಯುತ್ತಿದ್ದು, ಮಣ್ಣಿನ ಗುಡ್ಡದ ಹಿಂದೆ ಅವಿತಿದ್ದ ಚಿರತೆ ರಸ್ತೆ ದಾಟುವ ದೃಶ್ಯ ಕಾರಿನಲ್ಲಿ ಸಾಗುತ್ತಿದ್ದವರ ಮೊಬೈಲ್‍ನಲ್ಲಿ ಸೆರೆಯಾಗಿದೆ. ರಸ್ತೆ ದಾಟುತ್ತಿದ್ದ ಚಿರತೆ ದೃಶ್ಯವನ್ನು ವೀಕ್ಷಿಸಿದ ಸ್ಥಳೀಯರು ಇದೀಗ ಭಯಗ್ರಸ್ಥರಾಗಿದ್ದಾರೆ.
ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ನಿನ್ನೆ ಮೈಸೂರು ತಾಲೂಕಿನ ಇಲವಾಲ ಹೋಬಳಿಯ ಮೈದನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.
ಆದರೆ ಇದೀಗ ಮತ್ತೊಂದು ಚಿರತೆ ಪ್ರತ್ಯಕ್ಷವಾಗರುವುದು ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.
Post a Comment