ಕಾಸರಗೋಡು : ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಮಗು ಸೇರಿದಂತೆ ಇಬ್ಬರು ಮೃತಪಟ್ಟು , ನಾಲ್ವರು ಗಾಯಗೊಂಡ ಘಟನೆಯೊಂದು ಸೋಮವಾರ ಸಂಜೆ ಕೇರಳ - ಕರ್ನಾಟಕ ಗಡಿಯ ಪರಪ್ಪದಲ್ಲಿ ನಡೆದಿದೆ.
ಗಾಳಿಮುಖ ಗೋಳಿತ್ತಡಿಯ ಶಾನು ರವರ ಪತ್ನಿ ಶಾಹಿನಾ ( ೨೮) ಮತ್ತು ಪುತ್ರಿ ಫಾತಿಮ್ಮತ್ ಶಝ ( ೨ ವರ್ಷ) ಮೃತಪಟ್ಟವರು.
ಕಾರಿನಲ್ಲಿದ್ದ ನಾಲ್ವರಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಮವಾರ ಸಂಜೆ ೩.೩೦ ರ ಸುಮಾರಿಗೆ ಅಪಘಾತ ನಡೆದಿದೆ.
ವಿವಾಹ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಇವರು ಸಂಚರಿಸುತ್ತಿದ್ದ ಇನ್ನೋವಾ ಕಾರು ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಕ್ಕುರುಳಿ ಮರವೊಂದಕ್ಕೆ ಡಿಕ್ಕಿ ಹೊಡೆದಿದ್ದು, ವಾಹನದಲ್ಲಿ ಸಿಲುಕಿದ್ದವರನ್ನು ಸ್ಥಳೀಯರು ಹೊರತೆಗೆದು ಆಸ್ಪತ್ರೆಗೆ ತಲಪಿಸಿದರೂ ತಾಯಿ ಮತ್ತು ಮಗು ಮೃತಪಟ್ಟಿದ್ದರು.
ಮೃತದೇಹವನ್ನು ಸುಳ್ಯದ ಆಸ್ಪತ್ರೆಯ ಶವರಾಗರದಲ್ಲಿರಿಸಲಾಗಿದ್ದು ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಾಯಿತು.
ವಾಹನದಲ್ಲಿ ಏಳು ಮಂದಿ ಇದ್ದರೆನ್ನಲಾಗಿದೆ. ಆದೂರು ಠಾಣಾ ಪೋಲಿಸರು ಘಟನಾ ಸ್ಥಳಕ್ಕೆ ತೆರಳಿ ತನಿಖೆ ನಡೆಸಿದರು.
Post a Comment