ಉಡುಪಿ : ರೋಸ್‌ನಲ್ಲಿ ಭಾಗಿಯಾಗಿದ್ದ ಯುವತಿ ಕುಳಿತ ಜಾಗದಲ್ಲಿಯೇ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆಯೊಂದು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಾವಂಜೆಯಲ್ಲಿ ನಡೆದಿದೆ
23 ವರ್ಷದ ಹಾವಂಜೆ ನಿವಾಸಿ ಜೋಸ್ನಾ ಲೂವಿಸ್ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮೃತ ಜೋಸ್ನಾ ಲೂವಿಸ್ ಬ್ರಹ್ಮಾವರ ತಾಲೂಕಿನ ಕೊಳಲಗಿರಿ ಸಮೀಪದ ಹಾವಂಜೆಯಲ್ಲಿ ನಡೆಯುತ್ತಿದ್ದ ತಮ್ಮ ಸಂಬಂಧಿರ ಮನೆಗೆ ಮದುವೆ ಮುನ್ನ ಮಾಡುವ ರೋಸ್ ಕಾರ್ಯಕ್ರಮಕ್ಕೆ ಬಂದಿದ್ದರು. ಮದುವೆ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು.
ಧಾರ್ಮಿಕ ಕಾರ್ಯಕ್ರಮವಾದ ರೋಸ್‌ನ ಎಲ್ಲಾ ರೀತಿಯ ಶಾಸ್ತ್ರಗಳು ನಡೆಯುವ ಸಂದರ್ಭದಲ್ಲಿ ರಾತ್ರಿ ಸುಮಾರು 8:30ಕ್ಕೆ ಜೋಸ್ನಾ ಲೂವಿಸ್ ತಾನು ಕುಳಿತ ಕುರ್ಚಿಯಿಂದ ಏಕಾಏಕಿ ಕುಸಿದು ಬಿದ್ದಿದ್ದಾಳೆ. ಕೂಡಲೇ ಸ್ಥಳದಲ್ಲಿದ್ದವರು ಆಕೆಯನ್ನು ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯದಿದ್ದಾರೆ. ಆದರೆ ದುರಾದೃಷ್ಟವಶಾತ್ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ ಸಾವನ್ನಪ್ಪಿದ್ದಾಳೆ.
ಘಟನೆ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿಯ ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ಕಾರಣ ಏನು ಎನ್ನುವುದು ತಿಳಿದು ಬರಬೇಕಿದೆ.
ಮದುವೆ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ನೀರವ ಮೌನ ಆವರಿಸಿದ್ದು, ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
Post a Comment