ಬೆಂಗಳೂರು: ಅಡಿಕೆ ಮರಗಳಿಗೆ ಎಲೆಚುಕ್ಕಿರೋಗ ಹರಡಿ ಅಡಿಕೆ ಬೆಳೆಗಾರರು ಭಾರೀ ನಷ್ಟ ಅನುಭವಿಸುತ್ತಿರುವ ಹಿನ್ನೆಲೆ ಸರ್ಕಾರ ಅವರ ನೆರವಿಗೆ ಧಾವಿಸಬೇಕೆಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.
ಮಲೆನಾಡು ಪ್ರಾಂತ್ಯವಾದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಲ್ಲಿ ಅತಿಯಾದ ಮಳೆಯಿಂದ ಈ ಭಾಗದ ರೈತರ ಜೀವನಾಧಾರವಾಗಿದ್ದ ಅಡಿಕೆ, ಕಾಫಿ, ಮೆಣಸು ಬೆಳೆಗಳು ಶೇ.90ರಷ್ಟು ಹಾನಿಗೊಳಗಾಗಿವೆ.
ಅಡಿಕೆ ಮರಗಳಿಗೆ ದಶಕಗಳಿಂದಲೂ ಕಾಡುತ್ತಿರುವ ಹಳದಿ ರೋಗದಿಂದ ಅಡಿಕೆ ಬೆಳೆ ಸಂಪೂರ್ಣ ನಾಶವಾಗಿ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಅಡಿಕೆ ಬೆಳೆಯನ್ನೇ ಅವಲಂಬಿಸಿದ ರೈತರ ಬದುಕು ಕಂಗಲಾಗಿದ್ದು, ರೈತರು, ಕೃಷಿ ತಜ್ಞರು ಅಡಿಕೆ ಬೆಳೆರೋಗಗಳ ಸಂಶೋಧನಾಕಾರಿಗಳಿಂದ ಸಲಹೆ ಪಡೆದು ಅಡಿಕೆ ಮರಗಳಿಗೆ ರೋಗ ನಿರೋಧಕ ಔಷಧಗಳನ್ನು ಸಿಂಪಡಿಸಿದರೂ ಕೂಡ ಈ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಹಾನಿಕಾರಕ ಔಷಧಗಳಿಂದ ಪರಿಸರಕ್ಕೂ ಹಾನಿಯಾಗುವ ಆತಂಕ ಉಂಟಾಗುತ್ತಿದೆ.
ಈ ಹಿನ್ನೆಲೆ ಮಲೆನಾಡಿನ ರೈತರ ಪರಿಸ್ಥಿತಿ ಅವಲೋಕಿಸಿ ಅಡಿಕೆ ಮರಗಳಿಗೆ ತಗುಲಿರುವ ರೋಗಗಳಿಗೆ ಸೂಕ್ತ ಔಷಧ ಒದಗಿಸಿಕೊಡಬೇಕು.
ಅಡಿಕೆ ಬೆಳೆಗಾರರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಬೇಕು ಎಂದು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಿಎಂ ಜೊತೆ ಶ್ರೀಗಳು ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದು, ಈ ಕುರಿತು ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ.
إرسال تعليق