ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಗಲಿದ ಚೇತನಗಳಿಗೆ ದ.ಕ ಜಿಲ್ಲಾ ಕಸಾಪ ವತಿಯಿಂದ ನುಡಿನಮನ

ಅಗಲಿದ ಚೇತನಗಳಿಗೆ ದ.ಕ ಜಿಲ್ಲಾ ಕಸಾಪ ವತಿಯಿಂದ ನುಡಿನಮನ

ಭಾಷಾ ವಿಜ್ಞಾನಿ ಕೋಡಿ ಕುಶಾಲಪ್ಪ ಗೌಡ ಮತ್ತು ಧಾರವಾಡದ ಜನತಾ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ನ. ವಜ್ರಕುಮಾರ್‌ ಅವರ ಸಂಸ್ಮರಣೆ


ಮಂಗಳೂರು: ಇತ್ತೀಚೆಗೆ ಅಗಲಿದ ಹಿರಿಯ ಚೇತನಗಳಾದ ಭಾಷಾವಿಜ್ಞಾನಿ ಕೋಡಿ ಕುಶಾಲಪ್ಪ ಗೌಡ ಮತ್ತು ಧಾರವಾಡದ ಜನತಾ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಮತ್ತು ಮೂಲತಃ ನಂದಿಕೂರಿನವರಾದ ನ. ವಜ್ರಕುಮಾರ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನುಡಿನಮನ ಸಲ್ಲಿಸಲಾಯಿತು.


ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಶ್ರೀನಾಥ್ ಪ್ರಾಸ್ತಾವಿಕವಾಗಿ ಮಾತಾಡುತ್ತ ಕುಶಾಲಪ್ಪ ಗೌಡರು ಭಾಷಾ ವಿಜ್ಞಾನಿಯಾಗಿ ಮದರಾಸು ಮತ್ತು ಅಣ್ಣಾಮಲೈ ವಿಶ್ವವಿದ್ಯಾಲಯಗಳಲ್ಲಿ ಬಹಳ ದೊಡ್ಡ ಕೆಲಸ ಮಾಡಿದ್ದಾರೆ. ನ. ವಜ್ರಕುಮಾರ್ ಅವರು ಧರ್ಮಸ್ಥಳ ಶಿಕ್ಷಣ ಸಂಸ್ಥೆಯ ವ್ಯಾಪ್ತಿಯ ಧಾರವಾಡದ ಜೆ.ಎಸ್.ಎಸ್. ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿ ಸಾರ್ಥಕ ಸೇವೆ ಸಲ್ಲಿಸಿದ್ದಾರೆ. ಇಬ್ಬರೂ ಸೆ. 2 ರಂದು ಒಂದೇ ದಿನ ಗತಿಸಿ ಸಾಂಸ್ಕೃತಿಕ ಲೋಕ ಬಡವಾಗಿದೆ ಎಂದರು. 


ಹಳೆಯ ತಲೆಮಾರಿನ ಸಾಧಕರು ಜೀವನಮೌಲ್ಯಗಳಿಗೆ ಒಂದು ಮಾದರಿಯಾಗಿ ಕಂಡುಬರುತ್ತಾರೆ. ತಾವು ಆಯ್ದುಕೊಂಡ ಕ್ಷೇತ್ರದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಗಳಿಂದ ದುಡಿದು ನಾಡಿಗೆ ಕೀರ್ತಿ ತಂದವರು ಕುಶಾಲಪ್ಪ ಗೌಡ ಮತ್ತು ನ. ವಜ್ರಕುಮಾರ್. ಅವರ ಬದುಕು ಒಂದು ಸಂದೇಶದಂತಿದೆ ಎಂದು ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಬಿ. ಎ. ವಿವೇಕ ರೈ ಹೇಳಿದರು.


ಅವರಿಬ್ಬರೂ ತಮ್ಮ ಮೌಲ್ಯಗಳಿಗೆ ಬದ್ಧರಾಗಿ ಜೀವಿಸಿ ಸಮಾಜಕ್ಕೆ ಮಾದರಿಯಾಗಿದ್ದರು ಎಂದು ಯಕ್ಷಗಾನ ಅರ್ಥಧಾರಿ ಡಾ. ಎಂ. ಪ್ರಭಾಕರ ಜೋಶಿ ಹೇಳಿದರು. ಅವರಿಬ್ಬರ ಬದುಕು ದೊಡ್ಡದು. ದೊಡ್ಡದಾಗಿ ಬದುಕಿದಾಗ ಆಲೋಚನೆಗಳೂ ದೊಡ್ಡದಾಗಿರುತ್ತದೆ ಎಂದು ಕವಿ ಸಾಹಿತಿ ಡಾ. ವಸಂತಕುಮಾರ ಪೆರ್ಲ ನುಡಿದರು.


ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಪ್ರದೀಪಕುಮಾರ ಕಲ್ಕೂರ, ಡಾ. ವಿಶ್ವನಾಥ ಬದಿಕಾನ, ಡಾ. ಧನಂಜಯ ಕುಂಬಳೆ, ಕಾನೂನು ಕಾಲೇಜಿನ ಸಿದ್ಧಾರ್ಥ ಅಜ್ರಿ ಮೊದಲಾದವರು ನುಡಿನಮನ ಸಲ್ಲಿಸಿದರು.


ಜಿಲ್ಲಾ ಸಾಹಿತ್ಯ ಪರಿಷತ್ ಕಾರ್ಯದರ್ಶಿಗಳಾದ ವಿನಯ ಆಚಾರ್ಯ ಎಚ್., ಮತ್ತು ರಾಜೇಶ್ವರಿ ಎಂ., ತಾಲೂಕು ಅಧ್ಯಕ್ಷ ಡಾ. ಮಂಜುನಾಥ ಎಸ್. ರೇವಣಕರ್, ಎಸ್. ಡಿ.ಎಂ. ಕಾನೂನು ಕಾಲೇಜಿನ ಡಾ. ತಾರಾನಾಥ್ ಮೊದಲಾದವರು ಉಪಸ್ಥಿತರಿದ್ದರು.  


web counter

0 Comments

Post a Comment

Post a Comment (0)

Previous Post Next Post