ಬೆಂಗಳೂರು: ವಿಆರ್‌ಎಲ್ ಮೂವರ್ಸ್ ಅಂಡ್ ಪ್ಯಾಕರ್ಸ್ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರೆದು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಬಿಹಾರದ ಮೂವರು ಆರೋಪಿಗಳನ್ನು ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಯಶವಂತಪುರದಲ್ಲಿ ನೆಲೆಸಿದ್ದ ಬ್ರಹ್ಮದೇವ್ ಯಾದವ್ (25), ಮುಕೇಶ್ ಕುಮಾರ್ ಯಾದವ್, ವಿಜಯ್ ಕುಮಾರ್ ಯಾದವ್ (22) ಬಂಧಿತರು.
ನಗರದಿಂದ ವಿವಿಧೆಡೆಗೆ ದ್ವಿಚಕ್ರ ವಾಹನ ಕಳುಹಿಸಲು ಗೂಗಲ್‌ಗೆ ಹೋಗಿ ಪ್ಯಾಕರ್ಸ್ ಅಂಡ್ ಮೂವರ್ಸ್ ಎಂದು ನಮೂದಿಸಿದರೆ ವಿಆರ್‌ಎಲ್ ಮೂವರ್ಸ್ ಅಂಡ್ ಪ್ಯಾಕರ್ಸ್ ಎಂಬ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರೆದುಕೊಳ್ಳುತ್ತಿತ್ತು.
ಇದನ್ನೇ ನಂಬಿದ ಗ್ರಾಹಕರೊಬ್ಬರು ಕರೆ ಮಾಡಿ ವಿಚಾರಿಸಿದಾಗ, ಖಾತೆಗೆ ₹ 1 ಸಾವಿರ ಹಾಕಲು ಆರೋಪಿಗಳು ಹೇಳಿದ್ದರು. ಮರುದಿನ ಇಬ್ಬರೂ ಬಂದು ದ್ವಿಚಕ್ರ ವಾಹನವನ್ನು ಪ್ಯಾಕ್ ಮಾಡಿ, ಕೊಂಡೊಯ್ದಿದ್ದರು. ಅದಾದ ಮೇಲೆ ₹ 8 ಸಾವಿರ ನೀಡಿದರೆ ಬೈಕ್ ನೀಡುವುದಾಗಿ ಬೆದರಿಕೆ ಒಡ್ಡಿದ್ದರು' ಎಂದು ಪೊಲೀಸ್ ಮೂಲಗಳು ತಿಳಿಸಿವೆ.
'ಬೇರೆ ಬೇರೆ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರೆದು ಮೂವರೂ ವಂಚಿಸುತ್ತಿದ್ದರು. ಮೊದಲು ಕಡಿಮೆ ಹಣ ಪಡೆದು, ವಾಹನ ಸಿಕ್ಕಿದ ಮೇಲೆ ಹೆಚ್ಚಿನ ಹಣ ಸುಲಿಗೆ ಮಾಡುತ್ತಿದ್ದರು. ಒಂದು ಬೈಕ್, ನಾಲ್ಕು ಮೊಬೈಲ್ ವಶಕ್ಕೆ ಪಡೆಯಲಾಗಿದೆ' ಎಂದು ಮೂಲಗಳು ತಿಳಿಸಿವೆ.
Post a Comment