ಹೈಯರ್ ಸೆಕೆಂಡರಿ ಸಮತ್ವ ಪರೀಕ್ಷೆ
ಕಾಸರಗೋಡು: ಜಿಲ್ಲೆಯ ಭಾಷಾ ಅಲ್ಪಸಂಖ್ಯಾತ ಕನ್ನಡಿಗರಿಗೆ ನಿರಂತರ ಅನ್ಯಾಯ ನಡೆಯುತ್ತಿದ್ದು, ಇದೀಗ ಕನ್ನಡ ಮಾಧ್ಯಮ ಹೈಯರ್ ಸೆಕೆಂಡರಿ ಸಮತ್ವ ಪರೀಕ್ಷೆಯನ್ನು ಮಲೆಯಾಳಂ ಅಥವಾ ಆಂಗ್ಲಮಾಧ್ಯಮದಲ್ಲಿ ಬರೆಯಬೇಕೆಂದು ತಿರುವನಂತಪುರದ ಪರೀಕ್ಷಾ ಭವನ ಅಧಿಕಾರಿಗಳ ಮೌಖಿಕ ಆದೇಶ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಕೂಡಲೇ ಸರಕಾರ, ಶಿಕ್ಷಣ ಇಲಾಖೆ ಕ್ರಮಕೈಗೊಳ್ಳುವಂತೆ ಕಾಸರಗೋಡು ಜಿ.ಪಂ.ಮಾಜೀ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮುಖ್ಯಮಂತ್ರಿಗೆ ಮನವಿ ಮಾಡಿದ್ಜಾರೆ.
ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಸಮತ್ವ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸ್ಥಳಿಯಾಡಳಿತ ಸಂಸ್ಥೆಗಳ ನೆರವಿನಿಂದ ಕನ್ನಡ ಪುಸ್ತಕಗಳನ್ನು ಮುದ್ರಿಸಿ ವಿತರಿಸಲಾಗುತ್ತಿದೆ. ಕನ್ನಡ ಮಾಧ್ಯಮದಲ್ಲಿಯೇ ತರಗತಿಯನ್ನೂ ನೀಡಲಾಗುತ್ತಿದೆ. ಅಗಸ್ಟ್ 13ರಿಂದ ಸಮತ್ವ ಪರೀಕ್ಷೆ ನಡೆಯಲಿದ್ದು, ಇದೀಗ ಪರೀಕ್ಷಾ ಭವನ ಅಧಿಕಾರಿಗಳು ಸಭೆ ನಡೆಸಿ, ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆಯಲು ಅವಕಾಶವಿಲ್ಲವೆಂಬ ಮೌಖಿಕ ಆದೇಶ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ. ಈ ಬಗ್ಗೆ ಕಾಸರಗೋಡು ಜಿ.ಪಂ. ಮಾಜೀ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿಯವರು ಕೇರಳ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದು, ಭಾಷಾ ಅಲ್ಪಸಂಖ್ಯಾತ ಕನ್ನಡಿಗರಿಗೆ ಕನ್ನಡದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ.
ಶಿಕ್ಷಣ ಇಲಾಖೆ ಇತ್ತೀಚೆಗೆ ಹೊರಡಿಸಿದ ಆದೇಶದಲ್ಲಿ ಸಮತ್ವ ಪರೀಕ್ಷೆಯನ್ನು ಮಲೆಯಾಳಂ ಮತ್ತು ಆಂಗ್ಲ ಭಾಷೆಯಲ್ಲಿ ಮಾತ್ರವೇ ಪರೀಕ್ಷೆಗೆ ಅವಕಾಶ ಎಂಬ ಉಲ್ಲೇಖವಿದ್ದು, ಈ ಆದೇಶದಿಂದ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡನ್ನು ಹೊರತುಪಡಿಸುವಂತೆ ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಈ ವರ್ಷ 156 ಕನ್ನಡ ವಿದ್ಯಾರ್ಥಿಗಳು ಹೈಯ್ಯರ್ ಸೆಕೆಂಡರಿಗೆ ಹೆಸರು ನೋಂದಾಯಿಸಿದ್ದು, ಇವರಿಗೆ ಕನ್ನಡ ಭಾಷೆಯಲ್ಲಿಯೇ ತರಗತಿ ನಡೆಸಲಾಗಿತ್ತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment