ಹೊಳೆಹೊನ್ನೂರು: ಭದ್ರಾವತಿ ತಾಲೂಕು ಕೊಡ್ಲಿಗೆರೆಯ ನಿವಾಸಿ ಹಾಲೇಶಪ್ಪ 50 ಲಕ್ಷ ರೂ. ವೆಚ್ಚದಲ್ಲಿ ಮೃತ ತಾಯಿಗೆ ಸಮಾಧಿ ನಿರ್ಮಿಸುವ ಮೂಲಕ ಮಾದರಿಯಾಗಿದ್ದಾರೆ.
ಹಾಲೇಶಪ್ಪ ಅವರ ತಾಯಿ ಹೆಸರು ಕಮಲ. ಆದ್ದರಿಂದ ಸಮಾಧಿಯ ಜಾಗಕ್ಕೆ “ಕಮಲ ನಿಧಿ’ ಎಂದು ಹೆಸರಿಟ್ಟಿದ್ದಾರೆ. ಕಮಲ ಅವರಿಗೆ ಮೂವರು ಗಂಡು ಮಕ್ಕಳು. ಇದರಲ್ಲಿ ಹಾಲೇಶಪ್ಪ ಹಿರಿಯರು. ಕಡು ಬಡತನದಿಂದ ಬಂದಂತಹ ಹಾಲೇಶಪ್ಪ ಮೊದಲು ಕೂಲಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಈಗ ಗುತ್ತಿಗೆದಾರರಾಗಿ ಉತ್ತಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.
ಕಮಲಮ್ಮ ಕಳೆದ ವರ್ಷ ನಿಧನರಾಗಿದ್ದಾರೆ. ತಾಯಿ ನೆನಪಿಗಾಗಿ ಕಲ್ಪನಹಳ್ಳಿಯ ತಮ್ಮ ಜಮೀನಿನಲ್ಲಿ ಹಾಲೇಶಪ್ಪ ಸಮಾಧಿ ನಿರ್ಮಿಸಿದ್ದಾರೆ.
ಕಮಲಮ್ಮ ಯಾವಾಗಲೂ ಈ ಜಮೀನಿನಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದರು. ಅವರೇ ಈ ತೋಟವನ್ನು ನಿರ್ವಹಣೆ ಮಾಡುತ್ತಿದ್ದರು. ಹೀಗಾಗಿ ಹಾಲೇಶಪ್ಪ ಅದೇ ಜಮೀನಿನಲ್ಲಿಯೇ ಸಮಾಧಿ ನಿರ್ಮಿಸಿದ್ದಾರೆ.
ಸಮಾಧಿ ಪಕ್ಕದಲ್ಲಿ ಗಾರ್ಡನ್ ನಿರ್ಮಿಸಲಾಗಿದೆ. ನೀರು ಹರಿಯುವ ಕೃತಕ ಝರಿ ನಿರ್ಮಾಣ ಮಾಡಲಾಗಿದೆ. ತಾಯಿ-ಮಗನ ಪ್ರೀತಿಯ ಸಂಕೇತವಾಗಿ ಹಸು ಹಾಗೂ ಕರುವಿನ ಪುತ್ಥಳಿ ನಿರ್ಮಿಸಿದ್ದಾರೆ.
ತಮ್ಮ ತೋಟಕ್ಕೆ “ತಾಯಿಯ ನೆರಳು’ ಎಂದು ಹೆಸರನ್ನಿಟ್ಟಿದ್ದಾರೆ. ಹಾಲೇಶಪ್ಪ ಅವರ ಕಾರ್ಯಕ್ಕೆ ಮನೆಯವರು ಸಹ ಸಾಥ್ ನೀಡಿದ್ದಾರೆ. ಎಲ್ಲಿಗೇ ಹೋದರೂ ಹಾಲೇಶಪ್ಪ ದಿನಕ್ಕೊಂದು ಬಾರಿ ತಾಯಿ ಸಮಾಧಿಗೆ ಬಂದು ಪೂಜೆ ಮಾಡುತ್ತಾರೆ.
Post a Comment