ಮಂಗಳೂರು: ಶಾಲೆಯಲ್ಲಿ ಪಠ್ಯದ ಜೊತೆಗೆ ದೇಶಪ್ರೇಮ, ಪರಿಸರ ಪ್ರೇಮ ಮತ್ತು ಸಾಮಾಜಿಕ ಕಳಕಳಿ ಬಗ್ಗೆ ಮಕ್ಕಳಿಗೆ ತಿಳಿಸಿ ಹೇಳಬೇಕು. ಬರೀ ಪುಸ್ತಕದ ಪಾಠದಿಂದ ಮಕ್ಕಳ ವ್ಯಕ್ತಿತ್ವ ಸಂಪೂರ್ಣವಾಗಿ ರೂಪುಗೊಳ್ಳುವುದಿಲ್ಲ. ಸಮಯ ಪ್ರಜ್ಞೆ, ಸಾಮಾಜಿಕ ಬದ್ಧತೆ, ಸಾಮಾನ್ಯ ಜ್ಞಾನದ ಬಗ್ಗೆಯೂ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಎಳವೆಯಲ್ಲಿಯೇ ಗಿಡ ನೆಟ್ಟು ಪರಿಸರ ರಕ್ಷಣೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು ಹಾಗಾದಲ್ಲಿ ಮಾತ್ರ ಇಂದಿನ ಮಕ್ಕಳೇ ಮುಂದಿನ ಜವಾಬ್ದಾರಿಯುತ ಪ್ರಜೆಗಳು ಆಗಲು ಸಾಧ್ಯ ಎಂದು ದ. ಕ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಅಭಿಪ್ರಾಯಪಟ್ಟರು.
ಭಾನುವಾರ (ಜು.24) ಮೂಡಬಿದ್ರೆಯ ಬನ್ನಡ್ಕದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಡ್ಯಾರು ಇದರ ಆವರಣದಲ್ಲಿ ಮೂಡಬಿದಿರೆ ಗೃಹರಕ್ಷಕದಳದ ಆಶ್ರಯದಲ್ಲಿ ಶಾಲೆಯ ಮಕ್ಕಳು ಮತ್ತು ಅಧ್ಯಾಪಕರ ಸಹಕಾರದೊಂದಿಗೆ ವನಮಹೋತ್ಸವ ಜರುಗಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ವಾಸುದೇವ ಆಚಾರ್ಯ ಅವರು ಮಾತನಾಡಿ ಮಕ್ಕಳಿಗೆ ಪರಿಸರದ ರಕ್ಷಣೆ ಬಗ್ಗೆ ತಿಳುವಳಿಕೆ ಹೇಳಿದರು. ಕೈ ಕೆಸರಾದರೆ ಬಾಯಿ ಮೊಸರು ಎಂಬ ಮಾತಿನಂತೆ ನಾವು ಕಷ್ಟ ಪಟ್ಟು ಶ್ರಮವಹಿಸಿ ದುಡಿದರೆ ನಮ್ಮ ಬಾಳು ಬಂಗಾರವಾದೀತು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಮೂಡಬಿದ್ರೆ ಗೃಹರಕ್ಷಕದಳದ ಘಟಕಾಧಿಕಾರಿ ಶ್ರೀ ಪಾಂಡುರಾಜ್, ಹಿರಿಯ ಗೃಹರಕ್ಷಕರಾದ ಶ್ರೀ ಲಾರೆನ್ಸ್ ಡಿ'ಸೋಜಾ, ಮೇಲ್ವಿನ್ ರೋಜರಿಯೋ, ಪದ್ಮನಾಭ, ಸುಮನ ಆಚಾರ್ಯ, ವಿಜಯಲಕ್ಷ್ಮಿ, ಕಾವ್ಯ, ಅಶ್ವಿನಿ, ಮುಂತಾದವರು ಉಪಸ್ಥಿತರಿದ್ದರು. ಸುಮಾರು 35 ಮಂದಿ ಗೃಹರಕ್ಷಕರು ಈ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಾವು, ಬೇವು, ಪೇರಳೆ, ನೇರಳೆ, ಶ್ರೀಗಂಧ, ರಕ್ತಚಂದನ, ಸಾಗುವಾನಿ, ಹಲಸು, ಹೆಬ್ಬಲಸು ಮುಂತಾದ ಹಣ್ಣು ಮತ್ತು ಹೂವಿನ ಗಿಡಗಳನ್ನು ಶಾಲೆಯ ಆವರಣದಲ್ಲಿ ನೆಡಲಾಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق