ಸುಮಾರು 1987 ನೆಯ ಇಸವಿ. ನಾನಾಗ standard 20 ವ್ಯಾನಿನ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಮದುವೆ ಕರೆದುಕೊಂಡು ಬರಲು ಹೋಗಬೇಕಿತ್ತು. ಕೊಡಗಿನ ಮದುವೆಯ ವೈಶಿಷ್ಟ್ಯವೇ ಬೇರೆ ದಂಪತಿ ಮುಹೂರ್ತ ಎಂದಾದರೆ ಮಾತ್ರ ವರ ಮತ್ತು ವಧು ಮದುವೆ ಮಂಟಪದಲ್ಲಿ ತಾಳಿ ಕಟ್ಟುವ ಸಂದರ್ಭ. ಅಲ್ಲದೇ ಇದ್ದಲ್ಲಿ ವಧುವಿನ ಮನೆಯಲ್ಲಿ ವಧುವಿನ ಮದುವೆ ವರನ ಮನೆಯಲ್ಲಿ ವರನ ಮದುವೆ. ಇಲ್ಲಿನ ಮತ್ತೊಂದು ವಿಶೇಷವೆಂದರೆ ವಧುವಿಗೆ ತಾಳಿ ಕಟ್ಟುವುದು ವರ ಅಲ್ಲ ಬದಲಿಗೆ ವಧುವಿನ ತಾಯಿಯೇ ವಧುವಿಗೆ ತಾಳಿ ಕಟ್ಟುವ ಸಂಪ್ರದಾಯ. ಹಾಗೆ ಮದುವೆಗೆ ಬಂದ ಊರಿನವರು ಬಂಧುಗಳು ವಧುವಿನ ಮನೆಗೆ ವಧುವನ್ನು ಕರೆತರಲು ತೆರಳುವುದು ಸಾಮಾನ್ಯ ಸಂಗತಿ. ಅಲ್ಲಿನ ಆಚಾರ ವಿಚಾರಗಳನ್ನು ಬರೆಯಲು ಮತ್ತೊಮ್ಮೆ ಪ್ರಯತ್ನಿಸುವೆ. ಹಾಗೆ ಒಂದು ಗ್ರಾಮದ ವರನ ಮನೆಯಿಂದ ಮತ್ತೊಂದು ಗ್ರಾಮದ ವಧುವಿನ ಮನೆಗೆ ನಮ್ಮ ವಾಹನದಲ್ಲಿ ಹೋದೆವು. ಆ ಗ್ರಾಮದ ವಧುವಿನ ಮನೆಗೆ ತೆರಳಲು ರಸ್ತೆಯಿಂದ ಎಡಭಾಗಕ್ಕೆ ಒಂದು ಕಾಲುದಾರಿ. ಕಾಲುದಾರಿಯ ಎಡಭಾಗದಲ್ಲಿ ಕಾಫಿ ತೋಟ ಬಲಭಾಗದಲ್ಲಿ ಇಳಿಜಾರಾದ ಬರೆಕಾಡು ಮಧ್ಯೆ ಒಂದು ವಾಹನ ಸಾಗುವಷ್ಟು ದಾರಿಯಾದರೂ ನಮ್ಮ ವಾಹನ ಕೆಳಗಿಳಿಯುವುದು ಬೇಡ. ನಾವು ಹೋಗಿ ಬರುವ ನೀವು ಕೂಡ ನಮ್ಮೊಂದಿಗೆ ಬನ್ನಿ ಎಂದು ವರನ ಕಡೆಯವರು ಕರೆದರು. ಸಾಧಾರಣವಾಗಿ ಕೊಡಗಿನ ಮದುವೆ ಎಂದರೆ ಮಾಂಸ ಮಡ್ಡಿ ಎಲ್ಲವೂ ಇರುತ್ತದೆ.
ನಾನಾಗ ಮೈಸೂರಿನಿಂದ ಮರಳಿ ಬಂದ ಹೊಸತು. ಕೊಡಗಿನ ಆಚಾರ ವಿಚಾರಗಳು ರಕ್ತಗತವಾಗಿ ಬಂದಿದ್ದರೂ ಸಹ ಆರೇಳು ವರ್ಷಗಳ ಕಾಲ ಕೊಡಗಿನ ಹೊರಗೆ ಇದ್ದ ಕಾರಣದಿಂದ ಯಾವುದೇ ರೀತಿಯ ಅಭ್ಯಾಸಗಳು ಇನ್ನೂ ತೊಡಗಿರಲಿಲ್ಲ. ನನ್ನ ಜೊತೆಗಿದ್ದ ಸಹಾಯಕ ಹುಡುಗನ ಜೊತೆಗೆ ಎಲ್ಲ ಕಿಟಕಿ ಬಾಗಿಲುಗಳನ್ನು ಮುಚ್ಚಿಕೊಂಡು ಸರಿಯಾದ ಕ್ರಮದಲ್ಲಿ ವಾಹನ ನಿಂತಿದೆಯೇ ಎಂದು ಪರೀಕ್ಷಿಸಿಕೊಂಡು ನಾವಿಬ್ಬರೂ ಹೊರಡುವಷ್ಟರಲ್ಲಿ ಮದುವೆ ಕರೆಯಲು (ದಿಬ್ಬಣ) ಬಂದವರೆಲ್ಲರೂ ಮನೆ ತಲುಪಿಯಾಗಿತ್ತು. ಅಲ್ಲಿಯ ಶಾಸ್ತ್ರ ಸಂಪ್ರದಾಯವನ್ನು ಆಚರಿಸುವ ಭರದಲ್ಲಿ ನಮ್ಮನ್ನು ಮರೆತೂ ಹೋದರು. ಅಲ್ಲಿಯ ಆಚರಣೆಗಳು ಮುಗಿಸಿ ಅತಿಥಿ ಸತ್ಕಾರದ ಸಮಯದಲ್ಲಿ ತಲುಪಿದರೆ ಸಾಕೆಂದು ನಿಧಾನವಾಗಿ ನಾವು ಹೊರಟು ನಿಂತೆವು. ಒಂದೆರಡು ಹೆಜ್ಜೆ ಹಾಕುವಷ್ಟರಲ್ಲಿ ನಮ್ಮ ಎಡಬದಿಯ ಕಾಫಿ ತೋಟದಲ್ಲಿ ನಮ್ಮೊಂದಿಗೆ ಯಾರೋ ಹೆಜ್ಜೆ ಹಾಕುವ ಹಾಗೆ ತರಗೆಲೆಗಳ ಸದ್ದು ಕೇಳಿಸತೊಡಗಿತು. ನಮಗೆ ಸಂಶಯ ನಮ್ಮ ಹೆಜ್ಜೆಯ ಸದ್ದಾಗಿರಬಹುದೇ ಎಂದು ನಿಜವಾಗಿ ನೋಡಿದರೆ ನಮ್ಮ ಕಾಲಬುಡದಲ್ಲಿ ಯಾವುದೇ ರೀತಿಯ ತರಗೆಲೆಗಳು ಇರಲಿಲ್ಲ. ನಾವು ಮತ್ತೆ ಹೆಜ್ಜೆ ಹಾಕಿದಾಗ ನಮ್ಮ ಹೆಜ್ಜೆಯ ಜೊತೆಗೆ ಕಾಫಿ ತೋಟದೊಳಗೆ ಮತ್ತೆ ಹೆಜ್ಜೆಯ ಸದ್ದು ಮೂಡುತ್ತಿತ್ತು.
ಜೊತೆಯಲ್ಲಿ ಇದ್ದ ಹದಿನಾರರ ಹರೆಯದ ಹುಡುಗನಿಗೆ ಭಯ ಪ್ರಾರಂಭವಾಯಿತು. ಅಣ್ಣಾ ಎಂದು ನನ್ನ ಕೈಯನ್ನು ಗಟ್ಟಿಯಾಗಿ ಅಂಟಿಕೊಂಡಂತೆ ಹಿಡಿದುಕೊಂಡು ನನ್ನ ಜೊತೆ ಜೊತೆಗೆ ಹೆಜ್ಜೆ ಹಾಕತೊಡಗಿದನು. ನನಗೆ ಒಳಗೊಳಗೆ ತೆಳುವಾದ ಭಯವಿದ್ದರೂ ಸಹ ತೋರ್ಪಡಿಸದೇ ಧೈರ್ಯದಿಂದ ಮುಂದೆ ಸಾಗುತ್ತಿದ್ದೆ. ಸ್ವಲ್ಪ ಹೊತ್ತು ಕಳೆದ ನಂತರ ಕಾಫಿ ಗಿಡಗಳ ಮೇಲೆ ಮರಳನ್ನು ಎರಚಿದಂತೆ ಶಬ್ದವಾಯಿತು. ನೋಡಿದರೆ ನಮ್ಮ ಹತ್ತಿರವೂ ಮರಳಿನ ಕಣಗಳು ಸುಳಿಯಲಿಲ್ಲ. ಈಗ ಮಾತ್ರ ಹುಡುಗನಿಗೆ ಚಳಿ ಜ್ವರ ಬಂದಂತಾಗಿತ್ತು.
ಚಿಕ್ಕಂದಿನಲ್ಲಿ ಯಾರೋ ಒಮ್ಮೆ ಹೇಳಿದ್ದು ಬಹುಬೇಗನೆ ನನಗೆ ನೆನಪಾಯಿತು ಈ ರೀತಿಯ ಸಂದರ್ಭದಲ್ಲಿ ಬಾಯಿಗೆ ಬಂದಂತೆ ಬೈದರೆ ಅವು ಹತ್ತಿರ ಬರುವುದಿಲ್ಲವಂತೆ ಯಾರೋ ಅದು ಧೈರ್ಯವಿದ್ದರೆ ಹೊರಗೆ ಬಾ ಇಲ್ಲದಿದ್ದರೆ ಬಾಯಿ ಮುಚ್ಚಿಕೊಂಡು ದಾಟು ಅಲ್ಲಿಂದ ಎಂದು ಹೇಳಿದೆ. ಜೊತೆಯಲ್ಲಿ ಇದ್ದ ಹುಡುಗನಿಗೆ ಅದಾವ ಧೈರ್ಯ ಬಂತೋ ಗೊತ್ತಿಲ್ಲ. ಹೋತ ವಾತ ಪಿತ್ಥ ಎಲ್ಲವನ್ನೂ ಕರೆದುಬಿಟ್ಟ. ಇಷ್ಟೆಲ್ಲ ಆಗುವಾಗ ನಾವು ತೋಟದ ಬೇಲಿಯ ಅಂಚಿಗೆ ಬಂದಿದ್ದೆವು. ಹುಡುಗನ ಮಾತಿನ ರಭಸದಿಂದ ವಧುವಿನ ಮನೆಯವರಿಗೆ ಏನೋ ಆಗಿದೆಯೆಂದು ಅರಿವಾಗಿ ಮೂರ್ನಾಲ್ಕು ಜನರು ಓಡಿ ಬಂದರು. ವಿಷಯ ತಿಳಿದ ನಂತರ ಬನ್ನಿ ಅದು ಹಾಗೆಯೇ ಇವತ್ತು ಮದುವೆ ಬೇರೆ ಅಲ್ವೇ ಎಂದು ಕರೆದೊಯ್ದರು.
ನಿಮ್ಮವ ಬುಂಡೆದಾಸ
- ವೈಲೇಶ್ ಪಿ ಎಸ್ ಕೊಡಗು
Post a Comment