ಮಂಗಳೂರು: ನಗರದ ಬಜಾಲ್ ಪರಿಸರದಲ್ಲಿ ಗೋಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಗೋಕಳ್ಳರ ಬಂಧನಕ್ಕೆ ಶಾಸಕ ವೇದವ್ಯಾಸ್ ಕಾಮತ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅಕ್ರಮವಾಗಿ ಗೋಹತ್ಯೆ, ಗೋಕಳ್ಳತನ ಪ್ರಕರಣಗಳನ್ನು ತಡೆಯಲು ಗೋಕಳ್ಳರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸೂಚನೆ ನೀಡಿರುವ ಶಾಸಕ ಕಾಮತ್ ಗೋಕಳ್ಳರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಬಜಾಲ್ ಕಾನಕರಿಯ ನಿವಾಸಿ ಅಶ್ವಿನ್ ಎಂಬವರ ಮನೆಯ ಹಟ್ಟಿಯಿಂದ ಗೋಕಳ್ಳತನವಾಗಿದ್ದು ಕಂಕನಾಡಿ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದ್ದು ಶಾಸಕ ಕಾಮತ್ ಸೂಚನೆಯಿಂದ ತನಿಖೆಗೆ ಮತ್ತಷ್ಟು ಚುರುಕು ದೊರೆತಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಶಾಸಕ ವೇದವ್ಯಾಸ್ ಕಾಮತ್, ಹಿಂದೂ ಧರ್ಮದಲ್ಲಿ ಗೋವಿಗೆ ಮಹತ್ತರವಾದ ಸ್ಥಾನವಿದೆ. ಗೋವಿನಿಂದಲೇ ಬದುಕು ಸಾಗಿಸುವ ಅನೇಕ ಕುಟುಂಬಗಳಿವೆ. ಆ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಸರಕಾರವು ಗೋಹತ್ಯೆ ಪ್ರತಿಬಂಧಕವನ್ನು ಜಾರಿಗೊಳಿಸಿದ್ದು ಗೋಕಳ್ಳರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಗೋಕಳ್ಳತನ, ಗೋಹತ್ಯೆಯ ಅಪರಾಧ ರುಜುವಾತಾದರೆ ಆಸ್ತಿಮುಟ್ಟುಗೋಲು ಹಾಕಲು ಸೂಚನೆ ನೀಡಿದ್ದು ಇದು ಗೋಕಳ್ಳರಿಗೆ ಎಚ್ಚರಿಕೆಯ ಸಂದೇಶವಾಗಿದೆ. ಮುಂದೆಯೂ ಇಂತಹ ಕೃತ್ಯಗಳಲ್ಲಿ ಭಾಗಿಯಾದರೆ ಮತ್ತಷ್ಟು ಕಠಿಣ ಶಿಕ್ಷೆ ಅನುಭವಿಸಲು ಸಿದ್ಧರಿರಬೇಕೆಂದು ಗೋಕಳ್ಳರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಂಕನಾಡಿ ಠಾಣಾಧಿಕಾರಿ ಸಿದ್ದಣ್ಣ ಗೌಡ ಭಜಂತ್ರಿ, ಹಿಂದೂ ಸಂಘಟನೆಯ ಮುಖಂಡರಾದ ಕಿರಣ್ ರೈ ಬಜಾಲ್, ಉಮೇಶ್ ಜಪ್ಪಿನಮೊಗರು, ಪ್ರದೀಪ್ ಪಂಪ್ವೆಲ್, ಪದ್ಮನಾಭ ನಾವೂರು ಸಭೆಯಲ್ಲಿ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق