ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಕ್ತದಾನವೇ ಶ್ರೇಷ್ಠದಾನ: ಡಾ. ರಮಾನಂದ ಬನಾರಿ

ರಕ್ತದಾನವೇ ಶ್ರೇಷ್ಠದಾನ: ಡಾ. ರಮಾನಂದ ಬನಾರಿ


ಹೊಸಂಗಡಿ: ಎಲ್ಲಾ ದಾನಗಳೂ ಶ್ರೇಷ್ಠ. ವಿದ್ಯಾದಾನ, ನೇತ್ರದಾನ, ದೇಹದಾನ ಹೀಗೆ ಪ್ರತಿ ದಾನಕ್ಕೂ ಅದಕ್ಕೇ ಆದ ಮಹತ್ವ ಮತ್ತು ಪಾವಿತ್ರತೆ ಇದೆ. ಆದರೆ ರಕ್ತದಾನಕ್ಕೆ ಮಾತ್ರ ಇನ್ನಿಲ್ಲದ ಬೇಡಿಕೆ ಇರುವುದರಿಂದ ರಕ್ತದಾನಕ್ಕೆ ಹೆಚ್ಚಿನ ಆದ್ಯತೆ ಮತ್ತು ಪ್ರಾಮುಖ್ಯತೆ ದೊರೆಕಿದೆ. ಒಬ್ಬ ವ್ಯಕ್ತಿ ತಾನು ನೀಡುವ 350 ml ರಕ್ತದಾನದಿಂದ ನಾಲ್ಕು ಜೀವಗಳನ್ನು ಉಳಿಸುವ ಕಾರಣದಿಂದಲೇ ರಕ್ತದಾನವೇ ಇತರ ದಾನಗಳಿಗಿಂತ ಶ್ರೇಷ್ಠವಾಗಿದೆ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲದ ಕಾರಣದಿಂದಲೂ ರಕ್ತದಾನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ವೈದ್ಯರ ಜೀವ ಉಳಿಸುವ ಪ್ರಕ್ರಿಯೆಗೆ ರಕ್ತದಾನ ಮಾಡುವುದರ ಮೂಲಕ ಪಾಲುದಾರಿಕೆ ಪಡೆಯುವ ವಿಶೇಷ ಸೌಲಭ್ಯ ಸಾಮಾನ್ಯ ಜನರಿಗೆ ದೊರಕುತ್ತದೆ. ಈ ಕಾರಣದಿಂದಾಗಿ ಹೆಚ್ಚು ಹೆಚಚು ಜನರು ಮುಂದೆ ಬಂದು ರಕ್ತದಾನ ಮಾಡುವುದು ಅತೀ ಅಗತ್ಯ ಎಂದು ಖ್ಯಾತ ವೈದ್ಯ ಸಾಹಿತಿ, ಕುಟುಂಬ ವೈದ್ಯ ಮಂಜೇಶ್ವರದ ಡಾ|| ರಮಾನಂದ ಬನಾರಿ ಅಭಿಪ್ರಾಯಪಟ್ಟರು.


ಸುರಕ್ಷಾ ದಂತ ಚಿಕಿತ್ಸಾಲಯದ 25ನೇ ವರ್ಷದ ವಾರ್ಷಿಕೋತ್ಸವ ಮತ್ತು ವೈದ್ಯರ ದಿನಾಚರಣೆ ಅಂಗವಾಗಿ ಹೊಸಂಗಡಿಯ ಹೈಲ್ಯಾಂಡ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಇಂದು (ಜುಲೈ 01) ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ) ಮಂಗಳೂರು ಇದರ ಆಶ್ರಯದಲ್ಲಿ ರಕ್ತನಿಧಿ ವೆನ್‍ಲಾಕ್ ಆಸ್ಪತ್ರೆ ಇದರ ಸಹಕಾರದೊಂದಿಗೆ ನಡೆದ ರಕ್ತದಾನ ಶಿಬಿರವನ್ನು ಡಾ|| ಬನರಿ ಉದ್ಘಾಟಿಸಿ ಮಾತನಾಡಿದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ ಧಾರ್ಮಿಕ ಮುಂದಾಳು ಗೋಪಾಲ ಶೆಟ್ಟಿ ಅರೆಬೈಲ್, ಡಾ|| ಮುರಲೀ ಮತ್ತು ಡಾ|| ರಾಜಶ್ರೀ ಅವರ ಸಾಮಾಜಿಕ ಬದ್ಧತೆ ಕಾಳಜಿ ಮತ್ತು ಕಳಕಳಿಯನ್ನು ಮುಕ್ತ ಕಂಠದಿಂದ ಕೊಂಡಾಡಿದರು ಮತ್ತು ಶುಭ ಹಾರೈಸಿದರು. ಇನ್ನೋರ್ವ ಅತಿಥಿ ಹರ್ಷದ್ ವರ್ಕಾಡಿ ಅವರು ಮಾತನಾಡಿ, ಮಂಜೇಶ್ವರದ ಹೊಸಂಗಡಿಯಂತಹ ಹಳ್ಳಿ ಪ್ರದೇಶದಲ್ಲಿ ಕಳೆದ 25 ವರ್ಷಗಳಿಂದ ವಿಶ್ವ ದರ್ಜೆಯ ಸೇವೆ ನೀಡುವ ಡಾ|| ಮುರಲೀ ಮತ್ತು ಡಾ|| ರಾಜಶ್ರೀ ದಂಪತಿಗಳ ಸೇವೆ ಶ್ಲಾಘನೀಯ ಮತ್ತು ಅಭಿನಂದನೀಯ ಎಂದು ನುಡಿದು ಶುಭಹಾರೈಸಿದರು.


ಹಮೀದ್ ಹೊಸಂಗಡಿ ಅವರು ಮಾತನಾಡಿ, ಸಮಾಜದ ಸ್ವಾಸ್ಥ ಕಾಪಾಡುವಲ್ಲಿ ವೈದ್ಯರಿಗೆ ಪೂರಕವಾಗಿ ಕೆಲಸ ಮಾಡಿನಿರಂತರ ರಕ್ತದಾನ ಮಾಡುವ ಕೆಲಸ ಜನಸಾಮಾನ್ಯರಿಂದ ತುರ್ತಾಗಿ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯ ಮುಂಚೂಣಿಯಲ್ಲಿದೆ. ಗುಣಮಟ್ಟದ ದಂತ ಚಿಕಿತ್ಸೆಯ ಜೊತೆಗೆ ರಕ್ತದಾನ ಶಿಬಿರದಂತಹ ಜನಸ್ನೇಹಿ ಕಾರ್ಯಗಳನ್ನು ನಿರಂತರ ಮಾಡುತ್ತಾ ಜನರಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಹೊಸಂಗಡಿ ಜನರ ಭಾಗ್ಯ ಎಂದು ಅಭಿಪ್ರಾಯ ಪಟ್ಟರು.


ಸುರಕ್ಷಾ ದಂತ ಚಿಕಿತ್ಸಾಲಯದ ವೈದ್ಯರಾದ ಡಾ: ಮುರಲೀ ಮೋಹನ್ ಚೂಂತಾರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ವೆನ್‍ಲಾಕ್ ಆಸ್ಪತ್ರೆಯ ಸ್ನಾತಕೋತ್ತರ ವಿದ್ಯಾರ್ಥಿ    ಡಾ: ಫಲಾಕ್ ಅವರು ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು.


ವೆನ್‍ಲಾಕ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಜುಲ್ಫಿಕರ್ ಅವರು ಶಿಬಿರವನ್ನು ನಡೆಸಿಕೊಟ್ಟರು. ವೆನ್‍ಲಾಕ್ ಆಸ್ಪತ್ರೆಯ ರಕ್ತನಿಧಿಯ ಉಸ್ತುವಾರಿಗಳಾದ ಆಂಟೋನಿ ಡಿಸೋಜ ಮತ್ತು ಅಶೋಕ್ ಅವರು ನಡೆಸಿಕೊಟ್ಟರು.  ಸುರಕ್ಷಾ ದಂತ ಚಿಕಿತ್ಸಾಲಯದ ಡಾ. ರಾಜಶ್ರೀ ಮೋಹನ್ ವಂದಿಸಿದರು. ರಕ್ತನಿಧಿ ವಿಭಾಗದ ತಾಂತ್ರಿಕ ಅಧಿಕಾರಿಗಳು ಹಾಗೂ ಶುಶ್ರೂಶಕ ಅಧಿಕಾರಿಗಳು ಈ ಶಿಬಿರದಲ್ಲಿ ಉಪಸ್ಥಿತರಿದ್ದರು.


ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಇದರ ಸದಸ್ಯೆ ಶ್ರೀಮತಿ ಗೀತಾ ಗಣೇಶ್, ಸುರಕ್ಷಾ ದಂತ ಚಿಕಿತ್ಸಾಲಯ ಸಹಾಯಕಿಯರಾದ ರಮ್ಯ, ಸುಶ್ಮಿತ, ಚೈತ್ರ ಉಪಸ್ಥಿತರಿದ್ದರು. ಸುರಕ್ಷಾ ದಂತ ಚಿಕಿತ್ಸಾಲಯದ ವೈದ್ಯರಾದ ಡಾ: ಸುದೀಪ್ ನಾರಾಯಣ್ ಅವರು ರಕ್ತದಾನ ಮಾಡುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಸುಮಾರು 20 ಮಂದಿ ರಕ್ತದಾನಿಗಳು ಈ ಶಿಬಿರದಲ್ಲಿ ರಕ್ತದಾನ ಮಾಡಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post