ಮಂಗಳೂರು: ಮರದಲ್ಲಿರುವ ಹಣ್ಣು ಪಕ್ವವಾಗಬೇಕಾದರೆ ಅದು ಬಿಸಿಲನ್ನು ಉಣ್ಣಬೇಕು. ಅಂತೆಯೇ ಕಷ್ಟ ಕಾರ್ಪಣ್ಯದ ನಡುವೆ ತುಂಬು ಬಾಳನ್ನು ಬಾಳಿದ ಬೇಂದ್ರೆಯವರು ಅದನ್ನೇ ಕಾವ್ಯವಾಗಿಸಿದರು ಎಂದು ಎಸ್‌ಡಿಎಂ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ದಿವಾ ಕೊಕ್ಕಡ ಅಭಿಪ್ರಾಯ ಪಟ್ಟರು.
ನಗರದ ಬೆಸೆಂಟ್ ಮಹಿಳಾ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ, ಕನ್ನಡ ವಿಭಾಗ ಮತ್ತು ದ.ಕ.ಜಿಲ್ಲಾ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ-ಕಾವ್ಯ-ಸಾಹಿತ್ಯ-ಪರಂಪರೆ ಮಾಲಿಕೆ-2 ರಲ್ಲಿ "ವರಕವಿ ದ.ರಾ.ಬೇಂದ್ರೆ" ವಿಚಾರದ ಕುರಿತು ಉಪನ್ಯಾಸ ನೀಡಿದರು.
ಬೇಂದ್ರೆಯವರು ತಮ್ಮ ಸಾಹಿತ್ಯದಲ್ಲಿ ಪ್ರತ್ಯುತ್ಪನ್ನಮತಿಯ ಅಂಶಗಳನ್ನು ಸಮರ್ಥವಾಗಿ ಪ್ರತಿಬಿಂಬಿಸಿದ್ದಾರೆ. ಹಾಗಾಗಿಯೇ ಅವರಿಗೆ ಶಬ್ದಗಾರುಡಿಗ ಎಂಬ ಬಿರುದು ಅರ್ಹವಾಗಿಯೇ ಸಂದಿದೆಯೆಂದು ನುಡಿದರು. ಸಭಾ ವೇದಿಕೆಯಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಪ್ರಾಂಶುಪಾಲರಾದ ಡಾ. ಸತೀಶ್ ಕುಮಾರ್ ಶೆಟ್ಟಿ ಪಿ. ಸಭಾಧ್ಯಕ್ಷತೆ ವಹಿಸಿ ಬೇಂದ್ರೆಯವರ ಕವಿತೆಗಳನ್ನು ಉಲ್ಲೇಖಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಗಿರಿಯಪ್ಪ ಸರ್ವರನ್ನೂ ಸ್ವಾಗತಿಸಿದರು. ವಿದ್ಯಾರ್ಥಿನಿ ಕು.ಅನುಜ್ಞಾ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಜ್ಞಾನೇಶ್ವರಿ ಎನ್. ವಂದಿಸಿದರು. ಉಪನ್ಯಾಸಕ ರವಿರಾಜ್ ಎಸ್. ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment