ಪನ್ನಾ(ಮಧ್ಯಪ್ರದೇಶ): ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ಕರಡಿ ದಾಳಿ ನಡೆಸಿ ದಂಪತಿಯನ್ನು ಕೊಂದಿದ್ದು, ಐದು ಗಂಟೆಗೂ ಹೆಚ್ಚು ಕಾಲ ಶವಗಳನ್ನು ತಿಂದು ಹಾಕಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅವರ ದೇಹದ ಭಾಗಗಳನ್ನು ಕರಡಿ ತಿನ್ನುತ್ತಿದ್ದಾಗ ಅದನ್ನು ಓಡಿಸುವ ಪ್ರಯತ್ನಗಳು ವ್ಯರ್ಥವಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಶಾಂತಗೊಳಿಸುವಲ್ಲಿ ಯಶಸ್ವಿಯಾದ ನಂತರವೇ ಕರಡಿಯನ್ನು ಹಿಡಿಯಲಾಯಿತು ಎಂದು ಅಧಿಕಾರಿ ಹೇಳಿದರು.
'ಜಿಲ್ಲಾ ಕೇಂದ್ರದಿಂದ ಒಂದೂವರೆ ಕಿ.ಮೀಟರ್ ದೂರದಲ್ಲಿರುವ ಖೇರ್ಮೈ ಪ್ರದೇಶದಲ್ಲಿ ನಿನ್ನೆ ಬೆಳಿಗ್ಗೆ 6.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ.
ಇಲ್ಲಿನ ರಾಣಿಗಂಜ್ ಪ್ರದೇಶದ ಮುಖೇಶ್ ಠಾಕೂರ್ (50) ಮತ್ತು ಇಂದಿರಾ ಠಾಕೂರ್ (45) ಎಂದು ಗುರುತಿಸಲಾದ ದಂಪತಿಗಳು ಕರಡಿಗೆ ಬಲಿಯಾಗಿದ್ದಾರೆ.
ದೇವಸ್ಥಾನದಲ್ಲಿ ಪ್ರಾರ್ಥನೆಗೆಂದು ಹೋದ ವೇಳೆ ಕರಡಿ ಅವರ ಮೇಲೆ ದಾಳಿ ಮಾಡಿದೆ. ನಂತರ ಅವರಿಬ್ಬರನ್ನೂ ತಿಂದು ಹಾಕಿದೆ' ಎಂದು ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್‌ಒ) ಗೌರವ್ ಶರ್ಮಾ ತಿಳಿಸಿದ್ದಾರೆ.
ಇನ್ನೂ ದಂಪತಿಯ ಕುಟುಂಬಕ್ಕೆ ತಲಾ 4 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Post a Comment