ಜನನ- 22.01.1934- ನಿಧನ- 02.05.2022
ಕನ್ಯಾನ: ಸಾವಿರಾರು ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಿದ ಪಂಜಜೆಯ ಎ.ರಾಮಭಟ್ (88) ಸೋಮವಾರ ಮುಂಜಾನೆ 4 ಗಂಟೆಗೆ ಹರಿಹರದ ಕುಮಾರಪಟ್ಟಣಂನಲ್ಲಿ ಅಸ್ತಂಗತರಾದರು. ಅವರ ಅಂತ್ಯಸಂಸ್ಕಾರ ಅಲ್ಲೇ ನೆರವೇರಿಸಲಾಗಿದೆ. ಇನ್ನುಳಿದ ಕಾರ್ಯಗಳನ್ನು ಕಲ್ಲಡ್ಕದ ಶ್ರೀ ಉಮಾಶಿವ ಕ್ಷೇತ್ರದಲ್ಲಿ ನಡೆಸಲು ಕುಟುಂಬದವರು ತೀರ್ಮಾನಿಸಿದ್ದಾರೆ.
ಅವರು ನಿರ್ಮಲ, ಅರುಣಾ, ಭಾಗ್ಯ ಮೂವರು ಪುತ್ರಿಯರು, ಒಬ್ಬ ಪುತ್ರ ಉದಯ ಮತ್ತು ಕುಟುಂಬದ ಸದಸ್ಯರನ್ನು ಬಿಟ್ಟು ಅಗಲಿದ್ದಾರೆ. ಅವರು ಹರಿಹರ- ಕುಮಾರಪಟ್ಟಣಂನಲ್ಲಿರುವ ಪುತ್ರ ಉದಯ ಅವರ ಮನೆಯಲ್ಲಿದ್ದರು. ವಯೋಸಹಜ ಆರೋಗ್ಯ ಸಮಸ್ಯೆ ಎದುರಿಸಿದ್ದರು.
1950-60ರ ದಶಕದಲ್ಲಿ ಅಧ್ಯಾಪನ ವೃತ್ತಿ ಆರಂಭಿಸಿದರು. ಆರಂಭದಲ್ಲಿ ಅವರು ಶಿರಂಕಲ್ಲು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ 16-17 ವರ್ಷ ಸೇವೆ ಸಲ್ಲಿಸಿದ್ದರು. ಬಳಿಕ 1970ರ ದಶಕದ ಆರಂಭದಲ್ಲಿ ಪುತ್ತೂರಿನ ಸೇಂಟ್ ವಿಕ್ಟರ್ಸ್ ಗರ್ಲ್ಸ್ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ ಕೆಲಸಕ್ಕೆ ಸೇರಿದರು. 1999ರಲ್ಲಿ ನಿವೃತ್ತರಾಗುವ ತನಕ ಇದೇ ಶಾಲೆಯಲ್ಲಿ ಸಾವಿರಾರು ಮಕ್ಕಳಿಗೆ ಪಾಠ ಮಾಡಿದ್ದರು. ನಿವೃತ್ತಿಯ ಬಳಿಕ ಕೃಷಿಯಲ್ಲಿ ಹೆಚ್ಚು ಒಲವು ಬೆಳೆಸಿಕೊಂಡಿದ್ದರು. ಇದಲ್ಲದೆ ಅಧ್ಯಾತ್ಮ ವಿಚಾರ ವಿಶೇಷವಾಗಿ ಭಗವದ್ಗೀತೆ, ಶ್ರೀಮದ್ಭಾಗವತ, ಯೋಗ ವಾಸಿಷ್ಠದ ಬಗ್ಗೆ ಆಳ ಅಧ್ಯಯನ ನಡೆಸಿದ್ದರು. ಆಸಕ್ತರೊಂದಿಗೆ ಈ ಬಗ್ಗೆ ಆಗ್ಗಾಗ್ಗೆ ಚರ್ಚೆಯನ್ನೂ ಮಾಡುತ್ತಿದ್ದರು. ಶ್ರೀರಾಮನನ್ನು ಆದರ್ಶವಾಗಿ ಸ್ವೀಕರಿಸಿ ಯೋಗಿಯಂತೆ ಜೀವನ ನಡೆಸಿದವರು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಅತ್ಯುತ್ತಮ ಕನ್ನಡ ಶಿಕ್ಷಕರು: ಅವರ ಕಲಿಸುವ ಆಸಕ್ತಿ, ಕನ್ನಡದ ಪ್ರೀತಿ, ಭಾಷಾ ಪಾಂಡಿತ್ಯ,ಮಕ್ಕಳ ಮೇಲಿನ ಅಕ್ಕರೆ ಎಂದೂ ಮರೆಯಲಾರೆ. ಶಿಕ್ಷಕರಿಗೆ ಮಾದರಿಯಂತಿದ್ದರು. ಸದಾ ಹಸನ್ಮುಖಿ, ವಿನಮ್ರ ವ್ಯಕ್ತಿತ್ವ. ಪಾಠ ಮಾಡುವಾಗಲೂ ಸಹಜ ಸುಂದರ ನಗು. ಅವರು ಮಕ್ಕಳ ಮೇಲೆ ಸಿಟ್ಟು ಮಾಡಿಕೊಂಡದ್ದು, ಬೈದದ್ದು ನಾವು ನೋಡಿಯೇ ಇಲ್ಲ. ಶುಭ್ರ ಬಿಳಿ ಪಂಚೆ, ಬಿಳಿ ಶರ್ಟ್. ನೆಟ್ಟಗಿನ ಆತ್ಮವಿಶ್ವಾಸದ ನಿಲುವು. ಪದ್ಯ ಕಲಿಸುವಾಗ ಸುಶ್ರಾವ್ಯವಾಗಿ ಹಾಡಿ, ಬಳಿಕ ವ್ಯಾಖ್ಯಾನಿಸುತ್ತಿದ್ದರು. ಹಳೆಗನ್ನಡ ಅವರಿಗೆ ಅಚ್ಚುಮೆಚ್ಚು. ಎಲ್ಲವನ್ನೂ ಸರಳವಾಗಿ ಲೀಲಾಜಾಲವಾಗಿ ಮನಸ್ಸಿಗೆ ಇಳಿಯುವಂತೆ ಆಸಕ್ತಿದಾಯಕವಾಗಿ ವಿವರಿಸುತ್ತಿದ್ದರು. "ಕುರುಡು ಕಾಂಚಾಣ ಕುಣಿಯುತಲಿತ್ತು..." ಎಂಬ ಬೇಂದ್ರೆಯವರ ಕವನವನ್ನು ಅವರು ಕುಣಿಯುತ್ತಾ ಹಾಡಿದ್ದು ಈಗಲೂ ಅಚ್ಚು ಹೊಡೆದಂತೆ ನೆನಪಿನಲ್ಲಿ ಇದೆ ಎನ್ನುತ್ತಾರೆ ಅವರ ವಿದ್ಯಾರ್ಥಿನಿ ಎ.ಪಿ.ಲಲಿತಾ.
ಕನ್ನಡ ಪಂಡಿತರಾಗಿ ಸಾವಿರಾರು ವಿದ್ಯಾರ್ಥಿಗಳ ಭವ್ಯ ಭವಿಷ್ಯವನ್ನು ರೂಪಿಸಿದ ರಾಮ್ ಭಟ್ ಅವರ ಶಿಷ್ಯೆ ನಾನು ಕೂಡ. ಬಿಳಿ ಶರ್ಟ್ ಬಿಳಿ ಲುಂಗಿ ಉಟ್ಕೊಂಡು ಕೈಯಲ್ಲಿ ಬ್ಯಾಗ್ ಹಿಡಿದು ಶಾಲೆಯ ಗೇಟ್ ನೊಳಗೆ ಬರುವ ದ್ರಶ್ಯ ಇಂದಿಗೂ ಕಣ್ಣ ಮುಂದೆ ಹಸಿರಾಗಿದೆ. ಯಾವತ್ತೂ ನಗು ಮುಖ. ಒಂದು ಘಟನೆ ನೆನಪಿಗೆ ಬರುತ್ತೆ. ಪ್ರತಿ ಯೊಂದು ದಿನ ಒಂದು ಪುಟ ಕಾಪಿ ಬರೆಯಲು ಇತ್ತು. ಅಕ್ಷರ ಚೆನ್ನಾಗಿ ಇದ್ದವರದ್ದು ಕೇವಲ ರೈಟ್ ಮಾರ್ಕ್ ಮಾಡಿ ಹೋಗುತ್ತಿದ್ದರು. ಒಂದು ದಿನ ಕೂಲಂಕಷವಾಗಿ ತಪಾಸಣೆ ಮಾಡುವಾಗ ಒಬ್ಬಾಕೆ ಅವಾಚ್ಯ ಶಬ್ದಗಳನ್ನೆಲ್ಲ ಬರೆದಿದ್ದಳು. ಇಡೀ ಶಾಲೆಯಲ್ಲಿ ಅವಳಷ್ಟು ಚಂದದ ಕೈಬರಹ ಯಾರಿಗೂ ಇರಲಿಲ್ಲ. ಅವರು ಅವಳನ್ನು ಅಲ್ಲಿಯೇ ನಿಲ್ಲಿಸಿ, ಇತರರಿಗೂ ಅನ್ವಯ ವಾಗುವಂತೆ ಹೇಳಿದ ಬುದ್ದಿವಾದ ಅವರ್ಣನೀಯ. ಅಂತಹ ಉತ್ತಮ ಶಿಕ್ಷಕ ರಾಮ ಭಟ್ರು ನಮ್ಮ ಕಣ್ಣ ಮುಂದಿನಿಂದ ಮರೆಯಾಗಿದ್ದಾರೆ ಎಂದು ನೆನಪು ಮಾಡಿಕೊಂಡಿದ್ದಾರೆ ಮಾರ್ಗರೆಟ್ ಮೊನಿಸ್.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment