ಉಳ್ಳಾಲ: ವಿವಿಧತೆಯಲ್ಲಿ ಏಕತೆ ಭಾರತದ ನಿಜವಾದ ಶಕ್ತಿ. ಮನುಷ್ಯನಿಗೆ ಉಸಿರು ಹೇಗೆಯೋ ಭಾರತ ದೇಶಕ್ಕೆ ಜಾತ್ಯತೀತ ಮೌಲ್ಯವೇ ಉಸಿರು. ಸಂವಿಧಾನ ಎತ್ತಿ ಹಿಡಿದ ಮೌಲ್ಯಗಳಿಗೆ ಗೌರವ ಕೊಡುವುದೇ ನಾವು ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ನಿಜವಾದ ಗೌರವ ಎಂದು ಪ್ರತಿಪಕ್ಷ ನಾಯಕ ಶಾಸಕ ಯು.ಟಿ ಖಾದರ್ ಹೇಳಿದರು.
ಅವರು ಶನಿವಾರ ಕೊಲ್ಯ ಕುಲಾಲಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾಡಳಿತ, ಉಳ್ಳಾಲ ತಾಲೂಕು ಇವುಗಳ ವತಿಯಿಂದ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವ ' ಅಮೃತ ಭಾರತಿಗೆ ಕನ್ನಡದ ಅರತಿ ' ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದ ಕೆ. ಪ್ರತಾಪ್ ಸಿಂಹ ನಾಯಕ್ ಅವರು ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬಲಿದಾನಗೈದ ವೀರರನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುವುದು ಧರ್ಮ. ಭಾರತದ ಸ್ವಾತಂತ್ರ್ಯ ಸಮೂಹ ಹೋರಾಟದ ಫಲ. ಸ್ವಂತಕ್ಕಾಗಿ ಅಲ್ಲ ಸಮಾಜಕ್ಕಾಗಿ ಎಲ್ಲ ಎಂಬ ಧ್ಯೇಯದೊಂದಿಗೆ ನಡೆದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ಮಕ್ಕಳಿಗೆ ತಿಳಿಸಬೇಕಾದ ಅಗತ್ಯವಿದೆ ಎಂದರು. ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಬೆಂಗಳೂರು ಇದರ ಅಧ್ಯಕ್ಷರಾದ ಸಂತೋಷ್ ರೈ ಬೋಳಿಯಾರ್, ಕರ್ನಾಟಕ ಅಲೆಮಾರಿ ಅರೆ ಅಕೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ದ.ಕ ಜಿಲ್ಲಾ ಪಂಚಾಯತಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅತಿಥಿಗಳಾಗಿ ಭಾಗವಹಿಸಿದ್ದರು
ಭಾರತದ ಭಾವ ರಾಗ ತಾಳ:
ವಿಶೇಷ ಆಹ್ವಾನಿತರಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಉಳ್ಖಾಲ ಘಟಕದ ಅಧ್ಯಕ್ಷರಾದ ಡಾ. ಧನಂಜಯ ಕುಂಬ್ಳೆ ಮಾತನಾಡಿ ಎಲ್ಲೆಡೆಯಿಂದ ಸದ್ವಿಚಾರಗಳು ಹರಿದು ಬರಲಿ ಎಂಬ ಭಾವ, ವಂದೇಮಾತರಂ ಎಂಬ ರಾಗ, ಪ್ರಜಾಪ್ರಭುತ್ವ ಎಂಬ ತಾಳ ಸೇರಿ ಭಾರತವಾಗಿದೆ. ಇದರಲ್ಲಿ ಅಪಶ್ರುತಿ ಬರದಂತೆ ನಾವು ಕಾಪಾಡಬೇಕು. ರಾಣಿ ಅಬ್ಬಕ್ಕ ಪೋರ್ಚುಗೀಸರನ್ನು ತಡೆಯದಿದ್ದರೆ ನಾವು ಕೂಡ ಗೋವಾದಲ್ಲಿ ಆದಂತೆ ಊರು ಬಿಟ್ಟು ಓಡಬೇಕಾದ ಸ್ಥಿತಿ ಒದಗುತ್ತಿತ್ತು ಎಂದರು. ಉಳ್ಳಾಲ ನಗರಸಭೆಯ ಅಧ್ಯಕ್ಷರಾದ ಚಿತ್ರಕಲಾ ಕೆ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಸಂಕಲ್ಪವಿಧಿ ಬೋಧಿಸಿದರು.
ಉಳ್ಳಾಲ ತಹಶೀಲ್ದಾರ್ ಟಿ.ಜಿ ಗುರುಪ್ರಸಾದ್ ಸ್ವಾಗತಿಸಿದರು. ಉಳ್ಳಾಲ ನಗರಸಭೆಯ ಪೌರಾಯುಕ್ತ ರಾಯಪ್ಪ, ವಂದಿಸಿದರು. ಮಂಗಳೂರು ಸಮಗ್ರ ಬಾಲವಿಕಾಸ ಯೋಜನಾಧಿಕಾರಿ ಶೈಲಜಾ ಉಪಸ್ಥಿತರಿದ್ದರು. ಅಧ್ಯಾಪಕ ತ್ಯಾಗಂ ಹರೇಕಳ ನಿರೂಪಿಸಿದರು.
ಉಳ್ಳಾಲದಲ್ಲಿರುವ ಅಬ್ಬಕ್ಕ ರಾಣಿ ಪ್ರತಿಮೆಗೆ ಗಣ್ಯರ ಮಾಲಾರ್ಪಣೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ತೊಕ್ಕೊಟ್ಟು ವೀರಮಾರುತಿ ವ್ಯಾಯಾಮ ಶಾಲೆಯಿಂದ ಕೊಲ್ಯ ಕುಲಾ ಸಭಾಭವನದ ತನಕ ವಿವಿಧ ಸಾಂಸ್ಕೃತಿಕ ತಂಡಗಳು, ಅಬ್ಬಕ್ಕರಾಣಿಯ ಸ್ತಬ್ಧಚಿತ್ರ ಸಹಿತ ಸಾರ್ವಜನಿಕ ಶೋಭಾಯಾತ್ರೆ ನಡೆಯಿತು. ಹೇಮಚಂದ್ರ ಕೈರಂಗಳ ಮತ್ತು ಬಳಗದವರಿಂದ ದೇಶ ಭಕ್ತಿ ಗೀತೆಗಳ ಗಾಯನ ನಡೆಯಿತು. ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು. ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಮರ್ಪಿಸುವ ಶಿಲಾಫಲಕ ಅನಾವರಣವನ್ನು ಗಣ್ಯರು ಅನಾವರಣ ಮಾಡಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق