ಕುತ್ತಾರ್: 'ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಜೀವ ಪ್ರೀತಿ ಮತ್ತು ಜೀವನ ಪ್ರೀತಿಗಳನ್ನು ಪೋಷಿಸುವ ಮೂಲಕ ಒಟ್ಟು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುತ್ತವೆ. ಇಂದಿಲ್ಲಿ ನೀಡುತ್ತಿರುವ ಸಂಜೀವಿನಿ ಪ್ರಶಸ್ತಿ ಎಂಬುದು, ತನ್ನ ವೈಯಕ್ತಿಕ ಅಪೇಕ್ಷೆ ಆದ್ಯತೆಗಳನ್ನು ಬದಿಗೊತ್ತಿ, ನಮ್ಮೆಲ್ಲರ ಬದುಕನ್ನು ರೂಪಿಸಿದ ನಮ್ಮ ಅಮ್ಮಂದಿರ ಕರ್ತೃತ್ವಶಕ್ತಿಗೆ ಸಂದ ಗೌರವವಾಗಿದೆ. ಕ.ಲೇ.ವಾ. ಸಂಘವು ವಾಚಕಿಯರನ್ನೂ ಲೇಖಕಿಯರನ್ನೂ ಸಮಾನ ಅವಕಾಶದಲ್ಲಿ ಹೊಂದಿ ಬೆಳೆಸುತ್ತಾ ಮಹಿಳೆಯರ ಮುಕ್ತ ಚಿಂತನೆ- ಅಭಿವ್ಯಕ್ತಿಗಳನ್ನು ಬಲಪಡಿಸುವ ಉತ್ತಮ ಕಾರ್ಯವನ್ನು ಮಾಡುತ್ತಿದೆ" ಎಂದು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅಭಿಪ್ರಾಯಪಟ್ಟರು.
ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಮಂಗಳೂರು ಇವರ ಆಶ್ರಯದಲ್ಲಿ ಮುನ್ನೂರು ಕುತ್ತಾರು ಪದವಿನ 'ಸಂಜೀವಿನಿ' ಗೃಹದಲ್ಲಿ ಭಾನುವಾರ (ಮೇ 1) ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಸಂಜೀವಿ ನಾರಾಯಣ ಅಡ್ಯಂತಾಯರ ಸ್ಮರಣಾರ್ಥ ಸ್ಥಾಪಿಸಲಾಗಿರುವ 'ಸಂಜೀವಿನಿ ಪ್ರಶಸ್ತಿ' ಯನ್ನು 92ರ ಹರೆಯದ ಶಿರ್ವಾಕೋಡು ಸುಮತಿ ಹೆಗ್ಗಡ್ತಿ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.
ಸಂಘದ ಅಧ್ಯಕ್ಷೆ ಡಾ. ಜ್ಯೋತಿ ಚೇಳಾಯಿರು ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಕುಸುಮಲತಾ ರೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಪನ್ಯಾಸಕ ರಘು ಇಡ್ಕಿದು ಅವರು 'ಕೌಟುಂಬಿಕ ಸಂಬಂಧಗಳು ಮತ್ತು ಸೌಹಾರ್ದತೆ' ಎಂಬ ವಿಷಯವಾಗಿ ವಿಶೇಷ ಉಪನ್ಯಾಸವಿತ್ತರು. ಹಿರಿಯ ಜಾನಪದ ವಿದ್ವಾಂಸ ಡಾ. ವಾಮನ ನಂದಾವರ, ಬಾಲಕೃಷ್ಣ ಅಡ್ಯಂತಾಯ ಚೆನ್ನೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿವೃತ್ತ ಯೋಧ ದಯಾನಂದ ಆಳ್ವ ಸಣ್ಣತ್ತಡ್ಕ ಅವರು ಸಂಜೀವಿ ನಾರಾಯಣ ಅಡ್ಯಂತಾಯರ ಸಂಸ್ಮರಣೆಗೈದರು. ಮಂಜುಳಾ ಸುಕುಮಾರ್ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ವಿದ್ಯಾ ಮೋಹನದಾಸ್ ಸಮ್ಮಾನಿತರ ಪರವಾಗಿ ಅನಿಸಿಕೆ ವ್ಯಕ್ತಪಡಿಸಿದರು.
ರಾಧಾಕೃಷ್ಣ ಅಡ್ಯಂತಾಯ ಸ್ವಾಗತಿಸಿ ಪ್ರಸ್ತಾವನೆಗೈದರು. ಆಶಾ ಶೆಣೈ, ಆಕೃತಿ ಭಟ್ ಹಾಗೂ ವಿಜಯಲಕ್ಷ್ಮೀ ಕಟೀಲು ಸಂದರ್ಭೋಚಿತವಾದ ಭಾವಗೀತೆಗಳನ್ನು ಹಾಡಿದರು. ಶಾಸಕಿ ಶಕುಂತಳಾ ಶೆಟ್ಟಿಯವರು ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದ ಸಂಯೋಜಕಿ ರೂಪಕಲಾ ಆಳ್ವ ವಂದಿಸಿದರು. ಡಾ. ಸುಧಾರಾಣಿ ನಿರೂಪಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಸದಸ್ಯೆಯರಿಂದ ಡಾ. ದಿನಕರ ಎಸ್ ಪಚ್ಚನಾಡಿಯವರ ನಿರ್ದೇಶನದಲ್ಲಿ 'ಉಳ್ಳಾಲದ ಅಬ್ಬಕ್ಕ' ತುಳು ಯಕ್ಷಗಾನ ತಾಳಮದ್ದಲೆ ನಡೆಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment