ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜಾನಪದ ಕುಣಿತಗಳ ಪ್ರದರ್ಶನದಲ್ಲಿ ಮೂಲಸತ್ವಕ್ಕೆ‌ ಧಕ್ಕೆ ಬಾರದಿರಲಿ

ಜಾನಪದ ಕುಣಿತಗಳ ಪ್ರದರ್ಶನದಲ್ಲಿ ಮೂಲಸತ್ವಕ್ಕೆ‌ ಧಕ್ಕೆ ಬಾರದಿರಲಿ

ಕುತ್ತಾರು ಜಾನಪದ ವೈಭವದಲ್ಲಿ ಪ್ರೊ. ಅಭಯಕುಮಾರ್


ಮುಡಿಪು: ನಾಡಿನ ವಿವಿಧ ಸಮುದಾಯಗಳು, ಜಾತಿಗಳು ಜಾನಪದ ಕುಣಿತಗಳನ್ನು ರೂಪಿಸಿವೆ. ಪ್ರತೀ ಕುಣಿತಕ್ಕೂ ಕಾಲ ಸಂದರ್ಭ ಹಾಗೂ ಅದರದ್ದೇ ಆದ ತಾಳ ಲಯಗಳಿವೆ. ಕುಣಿತಗಳ ಪ್ರದರ್ಶನದಲ್ಲಿ ಸಂದರ್ಭವನ್ನು ಸೂಚಿಸಿ ಮೂಲಸತ್ವಕ್ಕೆ ಧಕ್ಕೆ ಬರದಂತೆ ಸೃಜನಶೀಲತೆಯನ್ನು ಮೆರೆಯಬೇಕು ಎಂದು ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ, ಜಾನಪದ ವಿದ್ವಾಂಸ ಪ್ರೊ. ಅಭಯಕುಮಾರ್ ಹೇಳಿದರು.


ಅವರು ಭಾನುವಾರ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ವತಿಯಿಂದ  ಕುತ್ತಾರಿನ ರಾಜರಾಜೇಶ್ವರಿ  ದೇವಸ್ಥಾನದ ಸಭಾಂಗಣದಲ್ಲಿ ಜಾನಪದ ವೈಭವ 2022 ಜಾನಪದ ನೃತ್ಯ ಸ್ಪರ್ಧೆ ಮತ್ತು ಅರಿವು  ಕಾರ್ಯಕ್ರಮದಲ್ಲಿ ಜಾನಪದ‌ ಕುಣಿತ ಸ್ವರೂಪ ಮತ್ತು ಅರ್ಥ' ಎಂಬ ವಿಷಯದ ಕುರಿತು ಮಾತನಾಡಿದರು.


ಕುತ್ತಾರು ರಾಜರಾಜೇಶ್ವರಿ ದೇವಸ್ಥಾನದ ಸಮಿತಿ ಅಧ್ಯಕ್ಷರಾದ ವಿವೇಕಾನಂದ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಲಾಪೋಷಕ, ಸಂಘಟಕ ಲಯನ್ ಪ್ರಸಾದ್ ರೈ ಕಲ್ಲಿಮಾರು, ಕರ್ನಾಟಕ ಸರಕಾರದ ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮದ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಉದ್ಯಮಿ, ಉಳ್ಳಾಲ ಕಸಾಪ ಕೋಶಾಧಿಕಾರಿ ಚಂದ್ರಹಾಸ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಸಾಪ ಹಿರಿಯ ಪದಾಧಿಕಾರಿಗಳಾದ ಆನಂದ ಅಸೈಗೋಳಿ, ಗುಣಾಜೆ ರಾಮಚಂದ್ರ ಭಟ್ ಉಪಸ್ಥಿತರಿದ್ದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದ.ಕ ಜಿಲ್ಲಾ ಕಸಾಪ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷರಾದ ಡಾ. ಧನಂಜಯ ಕುಂಬ್ಳೆ ಮಾತನಾಡಿ ಜಾನಪದ ಸಾಹಿತ್ಯದ ಬಗೆಗೆ ಅಸಡ್ಡೆ ಸಲ್ಲದು. ಅದು ನಮ್ಮ ನಾಡಿನ ಭಾಷೆ ಸಾಹಿತ್ಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದೆ. ಜಾನಪದವನ್ನು ರಾಷ್ಟ್ರೀಯ ಸಂಪತ್ತು ಎಂಬಂತೆ ಕಾಪಾಡಬೇಕು ಎಂದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಸಂಚಾಲಕಿ ಕುಸುಮ ಪ್ರಶಾಂತ್ ಉಡುಪ ಇವರನ್ನು ಸನ್ಮಾನಿಸಲಾಯಿತು.


ಉಳ್ಳಾಲ ಕಸಾಪ ಕಾರ್ಯದರ್ಶಿಗಳಾದ ರವೀಂದ್ರ ರೈ ಕಲ್ಲಿಮಾರು ಸ್ವಾಗತಿಸಿದರು. ಕಾರ್ಯಕ್ರಮ ಸಂಚಾಲಕಿ ಕಸಾಪ ಅಂಬ್ಲಮೊಗರು ಪ್ರತಿನಿಧಿ ಕುಸುಮ ಪ್ರಶಾಂತ್ ಉಡುಪ ವಂದಿಸಿದರು. ಅಧ್ಯಾಪಕರಾದ ತ್ಯಾಗಂ ಹರೇಕಳ ನಿರೂಪಿಸಿದರು.


ಜಾನಪದ ಕುಣಿತ ಫಿನಿಕ್ಸ್ ಮಂಗಳೂರು ಪ್ರಥಮ, ತಣ್ಣೀರು ಬಾವಿ ಯುವತಿ ಮಂಡಲ ದ್ವಿತೀಯ


ಜಾನಪದ ವೈಭವದ ಅಂಗವಾಗಿ ಏರ್ಪಡಿಸಿದ್ದ‌ ಜಿಲ್ಲಾ ಮಟ್ಟದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಪೂಜಾಕುಣಿತ ಪ್ರದರ್ಶಿಸಿದ ಫಿನಿಕ್ಸ್ ಮಂಗಳೂರು ತಂಡ ಪ್ರಥಮ, ಚೆನ್ನು ಕುಣಿತದ ತಣ್ಣೀರುಬಾವಿ ಯುವತಿ ಮಂಡ ದ್ವಿತೀಯ, ಐಸುರಿ ಕಲಾತಂಡ ಪಾಂಡೇಶ್ವರ ತೃತೀಯ ಬಹುಮಾನವನ್ನು ಪಡೆಯಿತು.


ಸಸಿಹಿತ್ಲು ಯುವತಿ ಮಂಡಲ, ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಿರಿ ಜಾನಪದ ನೃತ್ಯತಂಡ, ಮೊಂಟೆಪದವು ನಾಗರಾಜು ಕಲಾತಂಡ, ಪಾಂಡೇಶ್ವರದ ಸಂಸ್ಕೃತಿ ಕಲಾತಂಡ, ಸಾಗರ್ ಸ್ಟಾರ್ಸ್ ತಂಡಗಳು ಮೆಚ್ಚುಗೆ ಬಹುಮಾನ ಪಡೆದವು. ವಿಜೇತರಿಗೆ ಪ್ರಥಮ ರೂ.8000, ದ್ವಿತೀಯ ರೂ 6000 ಹಾಗೂ ತೃತೀಯ ರೂ. 4000 ನಗದು ಮತ್ತು ಪ್ರಮಾಣ ಪತ್ರ ಮತ್ತು ಸ್ಮರಣಿಕೆಯನ್ನು ನೀಡಲಾಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post