ಮಂಗಳೂರು: ಅತಿವೇಗದಿಂದ ಬಂದ ಬಿಎಂಡಬ್ಲ್ಯು ಕಾರೊಂದು ನಗರದ ಎಂ.ಜಿ ರಸ್ತೆಯ ಬಲ್ಲಾಳ್‌ಬಾಗ್‌ನಲ್ಲಿ ಇಂದು ಮಧ್ಯಾಹ್ನ ರಸ್ತೆಯ ಡಿವೈಡರ್ ಮೇಲೆ ಹಾರಿ ಮತ್ತೊಂದು ಬದಿಯಲ್ಲಿ ಸಂಚರಿಸುತ್ತಿದ್ದ ಸ್ಕೂಟರ್ ಸೇರಿದಂತೆ ಇತರ ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದಿದೆ.
ಸ್ಕೂಟರ್ ಸವಾರ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗಾಯಗೊಂಡಿರುವ ಮಹಿಳೆಯನ್ನು ಪ್ರೀತಿ ಮನೋಜ್ ಕಾಲ್ಯಾ ಎಂದು ಗುರುತಿಸಲಾಗಿದೆ.
ಅಪಘಾತಕ್ಕೆ ಕಾರಣವಾದ ಬಿಎಂಡಬ್ಲ್ಯು ಕಾರು ಚಾಲಕ ಮಾದಕ ದ್ರವ್ಯ ಸೇವಿಸಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದು, ವಾಸ್ತವ ಸಂಗತಿ ಇನ್ನಷ್ಟೇ ಗೊತ್ತಾಗಬೇಕಿದೆ. ಅಪಘಾತ ಸಂಭವಿಸಿದ ತಕ್ಷಣ ಜಮಾಯಿಸಿದ ಸ್ಥಳೀಯರು, ಅಜಾಗರೂಕತೆಯ ಚಾಲನೆಗಾಗಿ ಕಾರು ಚಾಲಕನನ್ನು ಹೊರಗೆಳೆದು ಹಿಗ್ಗಾಮುಗ್ಗಾ ಥಳಿಸಿದರು.
ಅಪಘಾತಕ್ಕೆ ಕಾರಣವಾದ ಕಾರು ಎಂಫೈರ್ ಮಾಲ್ ಕಡೆಯಿಂದ ಲಾಲ್‌ಬಾಗ್ ಕಡೆಗೆ ಹೋಗುತ್ತಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾರು ಚಾಲಕನ ಮೇಲೆ ಪ್ರಕರಣ ದಾಖಲಿಸಿಕೊಂಡು, ಆತನನ್ನು ವಶಕ್ಕೆ ಪಡೆದಿದ್ದಾರೆ.
ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದ್ದು, ಕುತೂಹಲಿಗಳು ಕಾರಿನ ವಿವರವನ್ನು ಆರ್‌ಟಿಓ ಹಾಗೂ ವಿಮಾ ಕಂಪನಿಗಳ ಮೂಲಕ ಪಡೆದುಕೊಂಡು ಅವುಗಳನ್ನೂ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಅದರಂತೆ ಈ ಕಾರು ನಾಲ್ಕು ಬಾರಿ ಮಾರಾಟವಾಗಿದ್ದು, ಪ್ರಸ್ತುತ ರವಿ ಚನನ ಎಂಬವರ ಹೆಸರಿನಲ್ಲಿದೆ. 2019ರ ಡಿಸೆಂಬರ್ 26ಕ್ಕೆ ಈ ಕಾರಿನ ವಿಮೆ ಕೂಡ ಮುಗಿದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment