ಮಂಗಳೂರು: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರತಿ ಮನೆಗೂ ನೀರು ಒದಗಿಸುವ ನಮ್ಮ ಭರವಸೆ ಈಡೇರಿಸಲು ಸರ್ವ ಪ್ರಯತ್ನವನ್ನೂ ಮಾಡುತ್ತೇವೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 24×7 ಕುಡಿಯುವ ನೀರು ಒದಗಿಸುವ ಜಲಸಿರಿ ಯೋಜನೆಯ ಭಾಗವಾಗಿ ಬಜಾಲ್ ಪರಿಸರದಲ್ಲಿ 4.60 ಕೋಟಿ ವೆಚ್ಚದ ಮೇಲ್ಮಟ್ಟದ ಜಲಸಂಗ್ರಹಾಗಾರಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಜಲಸಿರಿ ಯೋಜನೆಯ ಕಾಮಗಾರಿ ಪ್ರಗತಿಯ ಹಂತದಲ್ಲಿದ್ದು ನೀರು ಸಂಗ್ರಹಿಸಲು ಸಮರ್ಪಕವಾದ ಸಂಗ್ರಹಾಗಾರಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದರು.
ಬಜಾಲ್ ಪರಿಸರದಲ್ಲಿ ನಿರ್ಮಾಣವಾಗುವ 20 ಲಕ್ಷ ಲೀಟರ್ ಸಂಗ್ರಹಣಾ ಸಾಮರ್ಥ್ಯದ ಜಲಸಂಗ್ರಹಾಗಾರದಿಂದ ವೆಲೆನ್ಸಿಯಾ,ಕಂಕನಾಡಿ, ಅಳಪೆ ದಕ್ಷಿಣ, ಜಪ್ಪಿನಮೊಗರು ವಾರ್ಡಿನ ಸರಿಸುಮಾರು 4086 ಮನೆಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ. ಯೋಜನೆ ಪೂರ್ಣಗೊಂಡ ಬಳಿಕ ಪ್ರತಿ ಮನೆಗೂ 24 ಗಂಟೆ ನೀರು ಒದಗಿಸುವ ಕನಸು ನನಸಾಗಲಿದೆ ಎಂದು ಹೇಳಿದರು.
ಬಳಿಕ ಮಾತನಾಡಿದ ಮೇಯರ್ ಪ್ರೇಮಾನಂದ ಶೆಟ್ಟಿ, ಜಲಸಿರಿ ಯೋಜನೆಗೆ ಶಾಸಕರ ಮುತುವರ್ಜಿಯಿಂದ ಸರಿಸುಮಾರು 750 ಕೋಟಿ ಅನುದಾನ ಬಿಡುಗಡೆಯಾಗಿದೆ. ಶಾಸಕರ ಮಾರ್ಗದರ್ಶನದಲ್ಲಿ ಯೋಜನೆಯನ್ನು ಸಾಧ್ಯವಾದಷ್ಟು ಬೇಗನೆ ಪೂರ್ಣಗೊಳಿಸಲು ಶ್ರಮಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಉಪಮಹಾಪೌರರಾದ ಸುಮಂಗಲ ರಾವ್, ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸಂದೀಪ್ ಗರೋಡಿ, ಕಾರ್ಪೋರೆಟರ್ ಶೋಭಾ ಪೂಜಾರಿ, ವೀಣಾ ಮಂಗಳ, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ಮುಖಂಡರಾದ ಕಿರಣ್ ರೈ ಎಕ್ಕೂರು, ಸುಕೇಶ್ ಶೆಟ್ಟಿ, ವಸಂತ್ ಜೆ ಪೂಜಾರಿ, ಭರತ್ ಶೆಟ್ಟಿ, ಸುಜಾತ, ರಾಮ್ ಪ್ರಸಾದ್, ಈಶ್ವರ್, ವೀರೇಂದ್ರ, ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment