ಮಂಗಳೂರು: ಎಳವೆಯಲ್ಲಿಯೇ ಮಕ್ಕಳಲ್ಲಿ ಓದುವ ಹವ್ಯಾಸ ಬರೆಯುವ ಚಟ ಮತ್ತು ಸಾಹಿತ್ಯದ ಬಗ್ಗೆ ಒಲವು ಮೂಡಿಸುವ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡಬೇಕು. ಸಾಹಿತ್ಯದ ಬಗ್ಗೆ ಗೌರವ ಮತ್ತು ಆಸಕ್ತಿ ಇದ್ದಲ್ಲಿ ಮಕ್ಕಳ ವ್ಯಕ್ತಿತ್ವವೇ ಬದಲಾಗಿ ಅಂತಹ ಮಕ್ಕಳು ಮುಂದೆ ಸಮಾಜಕ್ಕೆ ಆಸ್ತಿಯಾಗಬಲ್ಲರು ಎಂದು ಸರಕಾರಿ ಪ್ರೌಢಶಾಲೆ ಅತ್ತಾವರ ಇದರ ಮುಖ್ಯ ಶಿಕ್ಷಕ ಶಿವಕುಮಾರ್ ಎನ್.ಆರ್ ಅಭಿಪ್ರಾಯ ಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಮತ್ತು ಸರಕಾರಿ ಪ್ರೌಢಶಾಲೆ ಅತ್ತಾವರ ಇದರ ಜಂಟಿ ಆಶ್ರಯದಲ್ಲಿ ಶಾಲಾ ಮಕ್ಕಳಿಗೆ “ಕವನ ರಚನಾ ಕಮ್ಮಟ” ಶಿಬಿರ ಮಂಗಳವಾರ (ಏ.5) ನಗರದ ಅತ್ತಾವರದ ಸರಕಾರಿ ಪ್ರೌಢಶಾಲೆಯಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಮಂಗಳೂರು ತಾಲೂಕು ಅಧ್ಯಕ್ಷರಾದ ಡಾ|| ಮಂಜುನಾಥ್ ಎಸ್ ರೇವಣಕರ್ ವಹಿಸಿದ್ದರು. ಅವರು ಮಾತನಾಡಿ, ಕನ್ನಡ ಸಾಹಿತ್ಯ ಕೇವಲ ಸಾಹಿತಿ ಮತ್ತು ಕವಿಗಳ ಆಸ್ತಿಯಲ್ಲ. ಮಂಗಳೂರಿನ ತಾಲೂಕಿನ ಪ್ರತಿ ಶಾಲೆಯಲ್ಲಿ ಮತ್ತು ಪ್ರತಿ ಮನೆಯಲ್ಲಿ ಕನ್ನಡದ ಕಂಪನ್ನು ಪಸರಿಸುವ ಕಾರ್ಯವನ್ನು ಕಸಾಪ ಮಂಗಳೂರು ಘಟಕ ಮುಂದಿನ ದಿನಗಳಲ್ಲಿ ಮಾಡಲಿದೆ ಎಂದು ನುಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಸುಬ್ರಾಯ ಭಟ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಸಾಪದ ಕಾರ್ಯದರ್ಶಿ ಗಣೇಶ್ ಪ್ರಸಾದ್‍ಜಿ ಅವರು ಸ್ವಾಗತ ಭಾಷಣ ಮಾಡಿದರು. ಕಸಾಪದ ಗೌರವ ಕಾರ್ಯದರ್ಶಿ ಡಾ|| ಮುರಲೀ ಮೋಹನ್ ಚೂಂತಾರು ವಂದನಾರ್ಪಣೆ ಮಾಡಿದರು.
ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಸುಬ್ರಾಯ ಭಟ್ (ಚುಟುಕು ಕವಿತೆ), ರಘು ಇಡ್ಕಿದು (ಮಕ್ಕಳ ಕವನ), ಶ್ರೀಮತಿ ಡಾ|| ಮೀನಾಕ್ಷಿ ರಾಮಚಂದ್ರ (ಕಥನ ಕವನ) ಇವರು ಭಾಗವಹಿಸಿದ್ದರು. ಕಸಾಪದ ಪದಾಧಿಕಾರಿ ಶ್ರೀಮತಿ ರತ್ನಾವತಿ. ಜೆ ಬೈಕಾಡಿ ಇವರಿಂದ ಕನ್ನಡ ಗೀತೆಗಳ ಗಾಯನ ಕೂಡಾ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಕಸಾಪದ ಪದಾಧಿಕಾರಿ ಕೆ.ಕೃಷ್ಣಪ್ಪ ನಾಯ್ಕ್, ಶಾಲಾ ಶಿಕ್ಷಕರಾದ ಪಿಲಿಪ್ ಆರ್ಥರ್ ಡಿ’ಸೋಜಾ, ಲಿಲ್ಲಿ ಪಾಯನ್, ಯಶೋಧ, ಸುಚೇತಾ, ಮೀನಾ, ಗಣೇಶ್, ಪ್ರಸನ್ನಾ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸುಮಾರು 60 ಮಕ್ಕಳು ಈ ಕವನ ಕಮ್ಮಟ ಶಿಬಿರದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment