ಮಂಗಳೂರು: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆ ತನ್ನ ಸ್ಥಾಪನೆಯ ಶತಮಾನೋತ್ಸವದ ಆಚರಣೆಯ ಹಿನ್ನೆಲೆಯಲ್ಲಿ ಸಮಾಜದಲ್ಲಿ ಕ್ಯಾನ್ಸರ್ ಮುಕ್ತ ಆಂದೋಲನವನ್ನು ಹಮ್ಮಿಕೊಂಡ ನಿಟ್ಟಿನಲ್ಲಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯು ಕಳೆದ ಫೆಬ್ರವರಿ 2022 ರಿಂದ ಎಪ್ರಿಲ್ 2022 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಾಳೆಪುಣಿ ಗ್ರಾಮ, ಮುಡಿಪು, ಬಂಟ್ವಾಳದ ಪರಂಗಿಪೇಟೆ, ಬೆಳ್ತಂಗಡಿ ನಗರ, ಮತ್ತು ಉಳ್ಳಾಲ ಮೊಗವೀರಪಟ್ಣ ಇಲ್ಲಿ ಜಸ್ಟೀಸ್ ಕೆ. ಎಸ್. ಹೆಗಡೆ ಆಸ್ಪತ್ರೆ ಕಾಲೇಜು, ನಿಟ್ಟೆ ವಿಶ್ವವಿದ್ಯಾನಿಲಯ ಮತ್ತು ಯೆನೇಪೋಯ ಆಸ್ಪತ್ರೆ ಕಾಲೇಜು ವಿಶ್ವವಿದ್ಯಾನಿಲಯ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯಗಳ ಸಹಯೋಗದೊಂದಿಗೆ 4 ಕ್ಯಾನ್ಸರ್ ಪೂರ್ವ ತಪಾಸಣಾ ಶಿಬಿರ ಮತ್ತು ಮಾಹಿತಿ ಕಾರ್ಯಾಗಾರಗಳನ್ನು ಯಶಸ್ವಿಯಾಗಿ ಹಮ್ಮಿಕೊಂಡಿತ್ತು.
ಅದೇ ರೀತಿ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜು ಅಡ್ಯಾರ್, ಮಂಗಳೂರು ಇದರ ಸಹಯೋಗದೊಂದಿಗೆ ಒಂದು ದಿನದ ರಾಜ್ಯ ಮಟ್ಟದ ಕ್ಯಾನ್ಸರ್ ಮುಕ್ತ ಚಿಂತನೆಗಾಗಿ ಯುವ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಯುವ ರೆಡ್ ಕ್ರಾಸ್ ಘಟಕಗಳ ಕಾರ್ಯಕ್ರಮ ಅಧಿಕಾರಿಗಳಿಗೆ ಕ್ಯಾನ್ಸರ್ ಅರಿವು ಮತ್ತು ಕ್ಯಾನ್ಸರ್ ನಿರ್ಮೂಲನ ಜಾಗೃತಿಗಾಗಿ ಅಭಿಯಾನ ಮಾಹಿತಿಯನ್ನು ನೀಡುವ ಒಂದು ದಿನದ ಕಾರ್ಯಕ್ರಮವನ್ನು ಯೆನೇಪೋಯ ವಿಶ್ವವಿದ್ಯಾನಿಲಯ ನರ್ಸಿಂಗ್ ಕಾಲೇಜ್ ಸಹಯೋಗದೊಂದಿಗೆ ಯಶಸ್ವಿಯಾಗಿ ನಡೆಸಲಾಯಿತು.
ಈ ಹಿನ್ನೆಲೆಯಲ್ಲಿ ಇಂದು (ಏ.30) ನಗರದ ಪಿಲಿಕುಳದ ವಿಜ್ಞಾನ ಕೇಂದ್ರದಲ್ಲಿ ಕ್ಯಾನ್ಸರ್ ಜಾಗೃತಿ ಅಭಿಯಾನದ ಕಾರ್ಯಕ್ರಮದ ಸಮಾಪನ ಕಾರ್ಯಕ್ರಮವನ್ನು ಜರುಗಿಸಲಾಯಿತು. ಜೊತೆಗೆ ಈ ಜಾಗೃತಿ ಅಭಿಯಾನದಲ್ಲಿ ಸಹಕರಿಸಿದ ಎಲ್ಲಾ ವಿದ್ಯಾಸಂಸ್ಥೆಗಳು ಮತ್ತು ಸ್ಥಳೀಯ ಸಾಮಾಜಿಕ ಸೇವಾ ಸಂಸ್ಥೆಗಳ ಮುಖ್ಯಸ್ಥರನ್ನು ಸತ್ಕರಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಸಭಾಪತಿಗಳಾದ ಸಿ.ಎ. ಶಾಂತರಾಮ್ ಶೆಟ್ಟಿ ಅವರು ವಹಿಸಿದ್ದು, ಮುಖ್ಯ ಸನ್ಮಾನ ಗೌರವ ಪೀಠದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊಫೆಸರ್. ಸುಬ್ರಮಣ್ಯ ಯಡಪಡಿತ್ತಾಯ, ನಿಟ್ಟೆ ವೈದ್ಯಕೀಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊಫೆಸರ್ ಡಾಕ್ಟರ್ ಸತೀಶ್ ಕುಮಾರ್ ಭಂಡಾರಿ, ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಶೈಕ್ಷಣಿಕ ಡೀನ್ ಶಮಂತ್ ರೈ. ಹಾಗೂ ಟ್ರಸ್ಟಿ ದೇವದಾಸ್ ಹೆಗಡೆ, ಪಿಲಿಕುಳ ನಿಸರ್ಗಧಾಮ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಡಾಕ್ಟರ್ ಕೆ.ವಿ. ರಾವ್. ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾಕ್ಟರ್ ಗಣಪತಿ ಗೌಡ, ಯೆನೇಪೋಯ ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಶ್ರೀಮತಿ ನಿತ್ಯಾಶ್ರೀ ಬಿ.ವಿ, ನಿಟ್ಟೆ ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಶ್ರೀಮತಿ ಲತಾ ಎಸ್. ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಯುವ ರೆಡ್ ಕ್ರಾಸ್ ಅಧಿಕಾರಿ ಶ್ರೀಮತಿ ಶ್ರೀಲತಾ ಭಾಗವಹಿಸಿದ್ದರು. ರೋಶನಿ ಕಾಲೇಜ್ ಆಫ್ ಸೋಶಿಯಲ್ ವರ್ಕ್ ಮತ್ತು ನಿಟ್ಟೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಲ್ಪಟ್ಟಿತು. ಶ್ರೀಮತಿ ನಿತ್ಯಾಶ್ರೀ ಬಿ.ವಿ. ಕಾರ್ಯಕ್ರಮದ ನಿರೂಪಣೆಯನ್ನು ನಿರ್ವಹಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಯುವ ರೆಡ್ ಕ್ರಾಸ್ ಸಂಚಾಲಕರಾದ ಸಚೇತ್ ಸುವರ್ಣ, ಸ್ವಾಗತಿಸಿ ದ.ಕ. ಜಿಲ್ಲಾ ರೆಡ್ ಕ್ರಾಸ್ ಶಾಖೆಯ ಗೌರವ ಕಾರ್ಯದರ್ಶಿಯಾದ ಬಿ.ಕೆ. ಕುಸುಮಾಧರ್ ವಂದಿಸಿದರು. ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಮುಕ್ತ ಆಂದೋಲನಕ್ಕಾಗಿ ಶ್ರಮಿಸಿದ ಎಲ್ಲಾ ವೈದ್ಯರು ಸ್ವಯಂಸೇವಕರು ಹಾಗೂ ಕಾರ್ಯಕರ್ತರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದ.ಕ. ಜಿಲ್ಲಾ ಶಾಖೆಯ ಆಡಳಿತ ಮಂಡಳಿಯ ಸದಸ್ಯರಾದ ರವೀಂದ್ರನಾಥ್, ರವೀಂದ್ರ ಶೆಟ್ಟಿ ಮತ್ತು ರಕ್ತ ನಿಧಿಯ ಸಂಚಾಲಕರಾದ ಪ್ರವೀಣ್ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق