ಕರ್ನಾಟಕ ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಎಸ್.ಬಿ. ನರೇಂದ್ರ ಕುಮಾರ್ ಅಭಿನಂದನಾ ಸಮಾರಂಭ
ಧರ್ಮಸ್ಥಳದಲ್ಲಿ ಶುಕ್ರವಾರ ಕರ್ನಾಟಕ ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರಾದ ಎಸ್.ಬಿ. ನರೇಂದ್ರ ಕುಮಾರ್ ಅವರಿಗೆ ಅಭಿನಂದನಾ ಸಮಾರಂಭ ನಡೆಯಿತು.
ಉಜಿರೆ: ಶಿಕ್ಷಕರು ಬಹುಮುಖ ಪ್ರತಿಭೆ ಹೊಂದಿದ್ದು ಪಠ್ಯ ಹಾಗೂ ಪಠ್ಯೇತರ ವಿಷಯಗಳಲ್ಲಿ ಪರಿಣತರಾಗಿದ್ದಾಗ ಅವರು ಎಲ್ಲಾ ವಿದ್ಯಾರ್ಥಿಗಳಿಂದ ಆತ್ಮೀಯವಾಗಿ ಗೌರವಿಸಲ್ಪಡುತ್ತಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರಾದ ಎಸ್.ಬಿ. ನರೇಂದ್ರ ಕುಮಾರ್ ಅವರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಮಾನ್ಯವಾಗಿ ಎಲ್ಲಾ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಶಿಸ್ತು ಮತ್ತು ಸ್ವಚ್ಛತೆ ಕಾಪಾಡುವಲ್ಲಿ ಸಭೆ-ಸಮಾರಂಭ ಆಯೋಜಿಸುವಲ್ಲಿ ತಜ್ಞರಾಗಿರುತ್ತಾರೆ. ಅವರು ಶಾಲೆಯಲ್ಲಿ ಸರ್ವಾಂತರಯಾಮಿಯಾಗಿ ಎಲ್ಲರಿಗೂ ಚಿರಪರಿಚಿತರು. ನರೇಂದ್ರ ಕುಮಾರ್ ರಾಜ್ಯ ಮಟ್ಟ ಹಾಗೂ ರಾಷ್ಟ್ರಮಟ್ಟದ ಕ್ರೀಡಾ ತಾರೆಗಳನ್ನು ರೂಪಿಸಿರುವುದಲ್ಲದೇ ಉತ್ತಮವಾದ ಉದಯೋನ್ಮುಖ ಪ್ರತಿಭಾವಂತ ಯಕ್ಷಗಾನ ಕಲಾವಿದರನ್ನೂ ರೂಪಿಸಿದ್ದಾರೆ. ಎನ್.ಸಿ.ಸಿ .ನೇವಲ್ ಘಟಕದ ಅಧಿಕಾರಿಯಾಗಿ ಯಕ್ಷಗಾನ ತರಬೇತುದಾರರಾಗಿ ಉತ್ತಮ ಸೇವೆ ನೀಡಿದ್ದಾರೆ. ವಿದ್ಯಾರ್ಥಿಗಳ ಯಕ್ಷಗಾನ ತಂಡವನ್ನು ವಿವಿಧ ರಾಜ್ಯಗಳಿಗೆ ಹಾಗೂ ವಿದೇಶಗಳಿಗೆ ಕರೆದುಕೊಂಡು ಹೋಗಿ ಉತ್ತಮ ಪ್ರದರ್ಶನ ನೀಡಿ ಕೀರ್ತಿ ತಂದಿರುತ್ತಾರೆ. ಈ ರೀತಿ ಎಲ್ಲಾ ಗುರುಗಳು ತಮ್ಮಲ್ಲಿರುವ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನಿಸ್ವಾರ್ಥವಾಗಿ ಉದಾರ ದಾನ ಮಾಡಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು. ಶಿಸ್ತಿನ ಸಿಪಾಯಿಗಳಾದ ಇಂತಹ ಶಿಕ್ಷಕರನ್ನು ವಿದ್ಯಾರ್ಥಿಗಳು ಯಾವಾಗಲೂ ಆತ್ಮೀಯವಾಗಿ ಗೌರವಿಸಿ ಧನ್ಯತೆಯಿಂದ ಸ್ಮರಿಸುತ್ತಾರೆ ಎಂದು ಅವರು ಹೇಳಿದರು.
ಅಭಿನಂದನಾ ಭಾಷಣ ಮಾಡಿದ ಉಜಿರೆಯ ಎಸ್.ಡಿ.ಎಂ. ಸನಿವಾಸ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಟಿ. ಕೃಷ್ಣಮೂರ್ತಿ ಮಾತನಾಡಿ ಸರಳ ವ್ಯಕ್ತಿತ್ವದ ಸಜ್ಜನರಾದ ನರೇಂದ್ರ ಕುಮಾರ್ ನೃತ್ಯ, ವೇಷಭೂಷಣ ತೊಡಿಸುವುದು, ಚಕ್ರತಾಳ, ರಾಕ್ಷಸ ವೇಷ ಮೊದಲಾದ ಯಕ್ಷಗಾನದ ಎಲ್ಲಾ ಮಜಲುಗಳಲ್ಲಿ ಉತ್ತಮ ಸೇವೆ ನೀಡಿದ್ದಾರೆ. ಅವರ ಕಿರಾತ, ಶೂರ್ಪನಖಿ ಮತ್ತು ವೀರಭದ್ರನ ಪಾತ್ರಗಳು ಖ್ಯಾತಿ ಪಡೆದಿವೆ. ಅವರೊಬ್ಬ ಆಲ್‌ರೌಂಡರ್ ಕಲಾವಿದರು ಎಂದು ಶ್ಲಾಘಿಸಿದರು.
ನರೇಂದ್ರ ಕುಮಾರ್ ಅಭಿನಂದನೆಗೆ ಕೃತಜ್ಞತೆ ವ್ಯಕ್ತಪಡಿಸಿ ಹೆಗ್ಗಡೆಯವರು ಮತ್ತು ಕುಟುಂಬದವರ ನಿರಂತರ ಪ್ರೋತ್ಸಾಗ ಮಾರ್ಗದರ್ಶನ ಮತ್ತು ನೆರವನ್ನು ಕೃತಜ್ಞತೆಯಿಂದ ಸ್ಮರಿಸಿದರು. ಧಾರವಾಡದ ಪದ್ಮಲತಾ ನಿರಂಜನ್ ಕುಮಾರ್ ಕಳುಹಿಸಿದ ಉಡುಗೊರೆ ಮತ್ತು ಗೌರವಾರ್ಪಣೆಯನ್ನು ಡಿ. ಹರ್ಷೇಂದ್ರ ಕುಮಾರ್ ನೀಡಿದರು.
ನರೇಂದ್ರ ಕುಮಾರ್ ಅವರ ಜೀವನ ಸಾಧನೆಯ ಮಾಹಿತಿ ಪುಸ್ತಕವನ್ನು ಡಿ. ಹರ್ಷೇಂದ್ರ ಕುಮಾರ್ ಬಿಡುಗಡೆಗೊಳಿಸಿದರು. ಡಿ. ಅನಂತ ಪದ್ಮನಾಭ ಭಟ್ ಸ್ವಾಗತಿಸಿದರು. ಶ್ರೀನಿವಾಸ್ ರಾವ್ ಧನ್ಯವಾದವಿತ್ತರು. ಶ್ರೀಹರಿ ಕಾರ್ಯಕ್ರಮ ನಿರ್ವಹಿಸಿದರು.
إرسال تعليق