ಧರ್ಮಸ್ಥಳದಲ್ಲಿ “ಸಾಮಾನ್ಯ ಸೇವಾ ಕೇಂದ್ರ” ಕಾರ್ಯಾಗಾರ
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಕಾರ್ಯಾಗಾರವನ್ನು ಉದ್ಘಾಟಿಸಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು -ಶ್ರಮ ಕಾರ್ಡನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಹೇಮಾವತಿ ಹೆಗ್ಗಡೆಯವರು ಸಾಮಾನ್ಯ ಸೇವಾ ಕೇಂದ್ರದ ಮಾಹಿತಿ ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಉಜಿರೆ: ನಿರಂತರ ಸಂಪಾದನೆಯಿಂದ ಉತ್ತಮ ಗುಣಮಟ್ಟದ ಜೀವನ ನಡೆಸಬಹುದು. ಆರ್ಥಿಕ ಶ್ರೀಮಂತಿಕೆ ಮುಖ್ಯ ಅಲ್ಲ. ನಿರಂತರತೆಯಿಂದ ಜೀವನಶೈಲಿ ಸುಧಾರಣೆಯಾಗುತ್ತದೆ. ದಿಲ್ಲಿಯ ಕಾರ್ಯಕ್ರಮವನ್ನು ಭಗೀರಥ ಪ್ರಯತ್ನದಿಂದ ಹಳ್ಳಿಗೆ ತಂದಿರುವುದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಗ್ಗಳಿಕೆಯಾಗಿದೆ. ಸರ್ಕಾರದ ಸಕಲ ಸೇವೆಗಳನ್ನೂ ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸುವುದೇ ಸಾಮಾನ್ಯ ಸೇವಾ ಕೇಂದ್ರಗಳ ಉದ್ದೇಶವಾಗಿದ್ದು, ಇದು ಶ್ರೀಸಾಮಾನ್ಯನಿಗೆ ನೀಡುವ ರಾಜೋಪಚಾರವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಶನಿವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಆಯೋಜಿಸಿದ ಸಾಮಾನ್ಯ ಸೇವಾ ಕೇಂದ್ರ ಯೋಜನೆಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಈಗಾಗಲೇ 6,206 ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ 25 ಲಕ್ಷ ಇ-ಶ್ರಮ ಕಾರ್ಡ್ ನೋಂದಾವಣೆ ಮಾಡಲಾಗಿದೆ. ಪಾನ್‍ಕಾರ್ಡ್ ವಿಮೆಪಾಲಿಸಿ, ರಾಷ್ಟ್ರೀಯ ಪಿಂಚಣಿ ಯೋಜನೆ, ಸಿಲಿಂಡರ್ ಅನಿಲ ಸಂಪರ್ಕ ಮೊದಲಾದ 26,39,561 ಫಲಾನುಭವಿಗಳಿಗೆ ಸೇವೆ ಒದಗಿಸಲಾಗಿದೆ.
38 ಮಂದಿ ಜಿಲ್ಲಾ ಮಾರ್ಗದರ್ಶಿ ಅಧಿಕಾರಿಗಳು ಮತ್ತು 205 ಮಂದಿ ತಾಲ್ಲೂಕು ಮಾರ್ಗದರ್ಶಿ ಅಧಿಕಾರಿಗಳ ನೇತೃತ್ವದಲ್ಲಿ 6,206 ಮಂದಿ ಸಿಬ್ಬಂದಿ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಜನರ ಆರ್ಥಿಕ ಮಟ್ಟ ಹಾಗೂ ಜೀವನ ಶೈಲಿ ಸುಧಾರಣೆಯಾಗಿದೆ. ಗ್ರಾಮೀಣಾಭಿವೃದ್ಧಿ ಯೋಜನೆಯ ಫಲಾನುಭವಿಗಳಲ್ಲದೆ ಜಾತಿ, ಮತ, ಬೇಧವಿಲ್ಲದೆ ಸಮಸ್ತ ನಾಗರಿಕರಿಗೂ ಸೇವೆ ನೀಡಲಾಗುವುದು ಎಂದು ಹೆಗ್ಗಡೆಯವರು ಪ್ರಕಟಿಸಿದರು.
ಸರ್ಕಾರದ ಯೋಜನೆಗಳ ಬಗ್ಯೆ ಅಧಿಕೃತ ಮಾಹಿತಿ ಪಡೆದು ಜನರು ಹಕ್ಕಿನಿಂದ ಅದರ ಸದುಪಯೋಗ ಮಾಡಬೇಕು. ಪ್ರಧಾನಿಯವರು ಹೇಳಿದಂತೆ ಎಲ್ಲರೂ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ನಮ್ಮ ಸಾಧನೆಯನ್ನು ನೋಡಿ ಪ್ರಧಾನಿಯವರು ದಿಲ್ಲಿಯಿಂದ ಹಳ್ಳಿಗೆ ಪ್ರಗತಿ ನೋಡಲು ಬರುವಂತಾಗಲಿ ಎಂದು ಹೆಗ್ಗಡೆಯವರು ಹಾರೈಸಿದರು.
ಸಾಮಾನ್ಯ ಸೇವಾ ಕೇಂದ್ರಗಳ ಬಗ್ಯೆ ಮಾಹಿತಿ ಪುಸ್ತಕವನ್ನು ಬಿಡುಗಡೆಗೊಳಿಸಿದ ಹೇಮಾವತಿ ವೀ. ಹೆಗ್ಗಡೆಯವರು ಕಲ್ಪವೃಕ್ಷದಂತಿರುವ ಸೇವಾ ಕೇಂದ್ರಗಳ ಸದುಪಯೋಗ ಮಾಡಿ ಎಲ್ಲರೂ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ತನ್ಮೂಲಕ ದೇಶದ ಪ್ರಗತಿಯಾಗಲಿ ಎಂದು ಹಾರೈಸಿದರು.
ಸಾಮಾನ್ಯ ಸೇವಾ ಕೇಂದ್ರದ ಆ್ಯಪ್ ಬಿಡುಗಡೆಗೊಳಿಸಿ, ಮಾತನಾಡಿದ ದೆಹಲಿಯ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಾಮಾನ್ಯ ಸೇವಾ ಕೇಂದ್ರ ಇ-ಆಡಳಿತ ವ್ಯವಸ್ಥಾಪಕ ನಿರ್ದೇಶಕ ಡಾ. ದಿನೇಶ್ ಕುಮಾರ್ ತ್ಯಾಗಿ ಮಾತನಾಡಿ, ಗ್ರಾಮೀಣ ಪ್ರದೇಶದವರು ಕೂಡಾ ಅದ್ಭುತ ಪ್ರತಿಭೆ ಮತ್ತು ಕೌಶಲ ಹೊಂದಿದ್ದು ಜ್ಞಾನ ಸಂಗ್ರಹದೊಂದಿಗೆ ಜೀವನಶೈಲಿ ಸುಧಾರಣೆಗೆ ಸಾಮಾನ್ಯ ಸೇವಾ ಕೇಂದ್ರ ವರದಾನವಾಗಿದೆ ಎಂದು ಹೇಳಿದರು. ಸರ್ಕಾರ ವಿವಿಧ ಯೋಜನೆಗಳ ಮೂಲಕ ಪ್ರಗತಿಗೆ ಅವಕಾಶ ನೀಡಿದೆ. ಗ್ರಾಮಸ್ವರಾಜ್ಯದ ಮೂಲಕ ಪ್ರತಿಯೊಬ್ಬರೂ ಶಾಂತಿ, ನೆಮ್ಮದಿಯೊಂದಿಗೆ ಸುಖ-ಸಂತೋಷದ ಜೀವನ ನಡೆಸಬೇಕು ಎಂದು ಹಾರೈಸಿದರು.
ಅನೇಕ ಮಂದಿ ತಮ್ಮ ಉದ್ಯೋಗವನ್ನು ಬಿಟ್ಟು ಸಾಮಾನ್ಯ ಸೇವಾ ಕೇಂದ್ರದ ಮೂಲಕ ಉತ್ತಮ ಪ್ರಗತಿ, ಸಾಧನೆ ಮಾಡಿದ್ದಾರೆ. ಉದ್ಯಮಶೀಲತಾಭಿವೃದ್ಧಿ ಸಾಧಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರಾಮರಾಜ್ಯದ ಕನಸು ಇಲ್ಲಿ ನನಸಾಗುತ್ತಿದೆ ಎಂದು ಶ್ಲಾಘಿಸಿದರು.
ಸಾಮಾನ್ಯ ಸೇವಾ ಕೇಂದ್ರ ಯೋಜನೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಧ್ಯೆ ಇಂದು ಮದುವೆ ಆಗಿದ್ದು ಮುಂದೆ ಸುಖೀ ಕೌಟುಂಬಿಕ ಜೀವನ ನಡೆಯಲಿದೆ ಎಂದು ಅವರು ಹಾರೈಸಿದರು.
ಮುಖ್ಯ ತಂತ್ರಜ್ಞಾನಾಧಿಕಾರಿ ಅಭಿಷೇಕ್ ರಂಜನ್, ಅವಿನಾಶ್ ತ್ಯಾಗಿ, ಕೃಷ್ಣಕುಮಾರ್ ಸಿಂಗ್ ಉಪಸ್ಥಿತರಿದ್ದರು.
ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಹಣಕಾಸು ವಿಭಾಗದ ನಿರ್ದೇಶಕ ಶಾಂತರಾಮ ಪೈ ಧನ್ಯವಾದವಿತ್ತರು. ರಾಜೇಶ್ ಶೆಟ್ಟಿ ಮತ್ತು ಪ್ರವೀಣ್ ಕಾರ್ಯಕ್ರಮ ನಿರ್ವಹಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment