ಕುಂಬಳೆ: ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯ ಸಭೆ ಹಾಗೂ ವಿವಿವಿ ಪಾಕಲೋಕ ಮಾಹಿತಿ ಕಾರ್ಯಾಗಾರವು ಮಾ.8ರಂದು ಮಂಗಳವಾರ ವಲಯ ಕೋಶಾಧ್ಯಕ್ಷರಾದ ಅಮ್ಮಂಕಲ್ಲು ರಾಜಗೋಪಾಲ್ ಭಟ್ ಅವರ ನೆಕ್ಕರೆಕಾಡು ಅನುಗ್ರಹ ನಿವಾಸದಲ್ಲಿ ನಡೆಯಿತು.
ಶಂಖನಾದ, ಧ್ವಜಾರೋಹಣ, ಗುರುವಂದನೆ ಗೋಸ್ತುತಿಯೊಂದಿಗೆ ಆರಂಭವಾದ ಸಭೆಯ ಅಧ್ಯಕ್ಷತೆಯನ್ನು ವಲಯಾಧ್ಯಕ್ಷರಾದ ಬಿ.ಎಲ್. ಶಂಭು ಹೆಬ್ಬಾರ್ ವಹಿಸಿದರು.
ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ಅವರು ಸ್ವಾಗತಿಸಿ ಗತ ಸಭೆಯ ವರದಿ ವಾಚನ ಮಾಡಿ,
ವಿವಿವಿ ಸೇವಾಸೌಧ ಕಾಮಗಾರಿ ಸಾಂಗವಾಗಿ ನಡೆಯಲು ಶ್ರೀಗುರುಗಳ ಮಾರ್ಗದರ್ಶನದಂತೆ ಹದಿಮೂರು ಕೋಟಿ ರಾಮತಾರಕ ಜಪವನ್ನು ಎಲ್ಲರೂ ಸಂಕಲ್ಪ ಸಹಿತವಾಗಿ ಜಪಿಸಲು ತಿಳಿಸಲಾಯಿತು.
ಎಪ್ರಿಲ್ ದಿನಾಂಕ 02, 03, 04 ರಂದು ಮೀನಗದ್ದೆ ಮನೆಯಲ್ಲಿ ನಡೆಯುವ ಶ್ರೀಗುರುಗಳ ಮೊಕ್ಕಾಂ ನ ವಿಚಾರವನ್ನು ಸಭೆಗೆ ತಿಳಿಸಲಾಯಿತು.
ಕೋಶಾಧ್ಯಕ್ಷರು ಲೆಕ್ಕಪತ್ರ ಮಂಡನೆ ಮಾಡಿದರು. ಮಾರ್ಚ್ 15 ರ ಪ್ರದೋಷಕಾಲದಲ್ಲಿ ಶ್ರೀ ಕಂಬಾರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ರುದ್ರಾಧ್ಯಾಯಿಗಳಿಂದ ಶ್ರೀರುದ್ರ ಪಾರಾಯಣ ನೆರವೇರುವ ವಿಚಾರವನ್ನು ಸಭೆಗೆ ತಿಳಿಸಿ, ವಲಯದ ಎಲ್ಲಾ ರುದ್ರಾಧ್ಯಾಯಿಗಳೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ವೈದಿಕ ಪ್ರಧಾನರಾದ ಬೆಜಪ್ಪೆ ಸುಬ್ರಹ್ಮಣ್ಯ ಭಟ್ ಆಹ್ವಾನ ನೀಡಿದರು.
ಪಾಕಲೋಕ ಸಮಿತಿಯ ಗೌರವಾಧ್ಯಕ್ಷರಾದ ಡಾ. ವೈ. ವಿ. ಕೃಷ್ಣಮೂರ್ತಿ ಅವರು ಎಪ್ರಿಲ್ 16 ರಂದು ಬದಿಯಡ್ಕದ ಶ್ರೀಭಾರತೀ ವಿದ್ಯಾಪೀಠದಲ್ಲಿ ಜರಗಲಿರುವ ವಿಶೇಷ ವಿಶಿಷ್ಟ ವಿಷಮುಕ್ತ (ವಿವಿವಿ) ಬಾಳೆ ಮೇಳದ ಬಗ್ಗೆ ಸಭೆಗೆ ಮಾಹಿತಿ ನೀಡಿ ಪ್ರತೀ ಮನೆಯ ಸದಸ್ಯರೂ ಭಾಗವಹಿಸಬೇಕೆಂದು ಆಹ್ವಾನಿಸಿದರು.
ಪಾಕಲೋಕ ಸಮಿತಿಯ ಕಾರ್ಯದರ್ಶಿ ಈಶ್ವರಿ ಬೇರ್ಕಡವು ಮಾತನಾಡಿ ಸ್ವಾವಲಂಬಿ ಜೀವನಕ್ಕೆ ಜನತೆಗೆ ಪ್ರೇರಣೆ ನೀಡುವ ಬಾಳೆಯ ಪೌಷ್ಠಿಕಾಂಶದ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಮುಳ್ಳೇರಿಯ ಮಂಡಲ ಮಾತೃಪ್ರಧಾನೆ ಗೀತಾ ಭಟ್ ಮುಳ್ಳೇರಿಯ ಅವರು ಬಾಳೆಮೇಳಕ್ಕೆ ವಲಯದಿಂದ ಬಾಳೆಯ ಉತ್ಪನ್ನಗಳನ್ನು ಮತ್ತು ಬಾಳೆಕಾಯಿ ಹುಡಿ (ಬಾಕಾಹು), ತೆಂಗಿನೆಣ್ಣೆಗಳನ್ನು ಸಂಗ್ರಹಿಸಿ ಬದಿಯಡ್ಕಕ್ಕೆ ತಲುಪಿಸುವಂತೆ ಕೋರುತ್ತಾ ಕಾರ್ಯಕ್ರಮದಲ್ಲಿ ಕಾರ್ಯಕರ್ತರಾಗಿ ಪಾಲ್ಗೊಂಡು ಮೇಳವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ರಾಮತಾರಕ ಮಂತ್ರ, ಶಾಂತಿ ಮಂತ್ರದೊಂದಿಗೆ ಸಭೆ ಮುಕ್ತಾಯವಾಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment