ಮಂಗಳೂರು: ವಿಶ್ವ ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಒಬ್ಬ ಮಗುವಿನ ವ್ಯಕ್ತಿತ್ವ ರೂಪಿಸಲು ತಾಯಿ ಬೇಕು. ಗಂಡನ ಯಶಸ್ಸಿಗೆ ಹೆಂಡತಿ ಮತ್ತು ಮನೆಯ ಶಾಂತಿ ಮತ್ತು ನೆಮ್ಮದಿ ವಾತಾವರಣಕ್ಕೆ ಮಹಿಳೆ ಅತೀ ಅಗತ್ಯ. ಹೀಗೆ ಒಬ್ಬ ಮಹಿಳೆ ಅಮ್ಮನಾಗಿ, ಸಹೋದರಿಯಾಗಿ, ಪತ್ನಿಯಾಗಿ, ಸೊಸೆಯಾಗಿ ಪುರುಷರ ಜೀವನದಲ್ಲಿ ಬಹು ಮುಖ್ಯ ಭೂಮಿಕೆ ವಹಿಸುತ್ತಾರೆ. ಮಹಿಳೆ ದೈಹಿಕವಾಗಿ ಪುರುಷರಿಗಿಂತ ಬಲಾಡ್ಯವಲ್ಲದಿದ್ದರೂ, ಮಾನಸಿಕವಾಗಿ ಮಹಿಳೆ ಪುರುಷರಿಗಿಂತಲೂ ಬಲಶಾಲಿ, ಒತ್ತಡದ ಸನ್ನಿವೇಶವನ್ನು ನಿಭಾಯಿಸುವಲ್ಲಿ ಮಹಿಳೆ ಹೆಚ್ಚು ಯಶಸ್ವಿಯಾಗುತ್ತಾರೆ. ಒಂದು ಪರಿಪೂರ್ಣ ಮನೆ, ಕುಟುಂಬ, ಸಮಾಜ, ನಾಡು ಮತ್ತು ದೇಶ ಕಟ್ಟಬೇಕಾದಲ್ಲಿ ಮಹಿಳೆ ಅನಿವಾರ್ಯಳು. ತಮ್ಮ ಕುಟುಂಬ ನಿರ್ವಹಣೆ ಜೊತೆಗೆ ಗೃಹರಕ್ಷಕಿಯಾಗಿ ಕೆಲಸ ಮಾಡಿ ಸಮಾಜದ ಸ್ವಾಸ್ಥ ಕಾಪಾಡುವ ಮಹಿಳಾ ಗೃಹರಕ್ಷಕಿಯರ ಕೊಡುಗೆ ಅತೀ ಅಮೂಲ್ಯ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ನುಡಿದರು.
ಜಿಲ್ಲಾ ಗೃಹರಕ್ಷಕದಳ, ಮೇರಿಹಿಲ್, ಮಂಗಳೂರು ಕಛೇರಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಂಗಳವಾರ ಗೃಹರಕ್ಷಕಿಯರಾದ ಶ್ರೀಮತಿ ಆಶಾ, ಮೆಟಲ್ ಸಂಖ್ಯೆ 143, ಶ್ರೀಮತಿ ಮಮತಾ, ಮೆಟಲ್ ಸಂಖ್ಯೆ 140 ಹಾಗೂ ಕುಮಾರಿ ರತ್ನಾ ಕೆ, ಮೆಟಲ್ ಸಂಖ್ಯೆ 155 ಇವರಿಗೆ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಥಮ ದರ್ಜೆ ಸಹಾಯಕಿಯಾದ ಅನಿತಾ ಟಿ. ಎಸ್ ಹಾಜರಿದ್ದರು. ಈ ಸಂದರ್ಭದಲ್ಲಿ ಗೃಹರಕ್ಷಕಿಯರಾದ ಭವಾನಿ, ರಾಜಶ್ರೀ, ಸುಲೋಚನಾ, ಜಯಲಕ್ಷ್ಮಿ, ಮಂಜುಳಾ, ಜಯಂತಿ, ಮೋಹಿನಿ, ಯೋಗಿನಿ, ರೇಣುಕಾ, ಸುಕನ್ಯಾ, ಉಷಾ, ಮರಿಯ ಹಾಗೂ ಗೃಹರಕ್ಷಕರಾದ ದಿವಾಕರ್, ದುಷ್ಯಂತ್ ಮತ್ತು ಸುಮಾರು 25 ಮಂದಿ ಗೃಹರಕ್ಷಕಿಯರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment