ತುಮಕೂರು: ಸಾಸಲು ಗ್ರಾಮದಲ್ಲಿ ಹುಚ್ಚುನಾಯಿ ಕಡಿದು ತೀವ್ರ ಗಾಯಗೊಂಡಿದ್ದ 2 ವರ್ಷದ ಮಗು ತ್ರಿಷಾ ಮೃತಪಟ್ಟಿದೆ.
ತಿಂಗಳ ಹಿಂದೆ ಮನೆಯ ಮುಂದೆ ಆಟವಾಡುತ್ತಿದ್ದ ಪುಟ್ಟರಾಜು ಮತ್ತು ಚಿಕ್ಕಮ್ಮ ದಂಪತಿಯ ಮಗು ತಿಷಾ ಹಾಗೂ ಹಸುವಿಗೆ ಹುಚ್ಚುನಾಯಿ ಕಡಿದಿತ್ತು.
ನಾಯಿ ಕಡಿದ ಮೂರು ದಿನದಲ್ಲಿ ಹಸು ಸಾವನ್ನಪ್ಪಿತ್ತು. ಆದರೆ, ಮಗುವಿಗೆ ನಾಯಿ ಕಚ್ಚಿರುವ ಬಗ್ಗೆ ಪಾಲಕರ ಅರಿವಿಗೆ ಬಂದಿರಲಿಲ್ಲ.
ಒಂದು ತಿಂಗಳ ಬಳಿಕ ಅಂದರೆ ಮಾ.5ರಂದು ಅನಾರೋಗ್ಯ ಲಕ್ಷಣಗಳು ಕಾಣಿಸಿದ್ದರಿಂದ ಜಿಲ್ಲಾಸ್ಪತ್ರೆ ಮಕ್ಕಳ ತಜ್ಞರ ಬಳಿ ಕರೆದುಕೊಂಡು ಹೋದಾಗ ರೇಬಿಸ್ ಅಂಟಿರುವುದು ತಿಳಿದುಬಂದಿದೆ.
ಹೆಚ್ಚಿನ ಚಿಕಿತ್ಸೆಗಾಗಿ ನಗರದ ಸಿದ್ಧಾರ್ಥ ವೈದ್ಯಕೀಯ ಕಾಲೇಜಿಗೆ ದಾಖಲಿಸಿದ್ದರಾದರೂ ಮಾ.8ರಂದು ಮಗು ಮೃತಪಟ್ಟಿದೆ.
ಹಸುಗೆ ನಾಯಿ ಕಚ್ಚಿದ್ದನ್ನು ತ್ರಿಷಾಳಾ ಅಜ್ಜಿ ನೋಡಿದ್ದರು. ಆದರೆ ಮೊಮ್ಮಗಳಿಗೆ ನಾಯಿ ಕಚ್ಚಿರುವ ಬಗ್ಗೆ ಅಜ್ಜಿಗೆ ತಿಳಿದಿರಲಿಲ್ಲ ಎನ್ನಲಾಗಿದ್ದು, ನಾಯಿ ಓಡಿಸಿಕೊಂಡು ಬಂದಾಗ ಬಿದ್ದು ಮಗುವಿಗೆ ಗಾಯವಾಗಿದೆ ಎಂದು ಭಾವಿಸಿ ಮನೆಯವರು ನಿರ್ಲಕ್ಷ್ಯ ತೋರಿದ್ದಾರೆ.
ಮಗುವಿಗೂ ನಾಯಿ ಕಚ್ಚಿದ್ದನ್ನು ಅಜ್ಜಿ ಸರಿಯಾಗಿ ನೋಡದ ಕಾರಣ ಮಗುವಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗಿಲ್ಲ. ಚಿಕಿತ್ಸೆ ಕೊಡಿಸಿದ್ದರೆ ಬದುಕುವ ಸಾಧ್ಯತೆಯಿತ್ತು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
Post a Comment