ಮಂಗಳೂರು: ನಗರದ ಹೃದಯ ಭಾಗದ ಕೊಡಿಯಾಲ್‌ಬೈಲ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡ ಸರ್ವಾಲಂಕೃತ ಮಂಜೇಶ್ವರ ಗೋವಿಂದ ಪೈ ವೃತ್ತವನ್ನು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಬುಧವಾರ ಸಂಜೆ ನಡೆದ ಸರಳ ಸುಂದರ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಿದರು.
ಸುಮಾರು 35 ಲಕ್ಷ ರೂ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡಿರುವ ಈ ವೃತ್ತವು ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರು ನಗರದ ಸೌಂದರ್ಯಕ್ಕೆ ಕಿರೀಟವಿಟ್ಟಂತಿದೆ.
ಖಾಸಗಿಯವರ ಸಹಯೋಗದಲ್ಲಿ ಮಂಗಳೂರು ಮಹಾನಗರಪಾಲಿಕೆ ಈ ವೃತ್ತವನ್ನು ಅಭವೃದ್ಧಿಪಡಿಸಿದೆ. ಸೇವಾಂಜಲಿ ಟ್ರಸ್ಟ್‌ನವರು ಈ ವೃತ್ತವನ್ನು ನಿರ್ಮಿಸಿಕೊಟ್ಟಿದ್ದಾರೆ. ಶ್ರೀಮತಿ ವನಿತಾ ಅಚ್ಯುತ ಪೈ ಅವರ ಸ್ಮರಣಾರ್ಥ ಅವರ ಮಕ್ಕಳು ನಡೆಸುತ್ತಿರುವ ಫುಜ್ಲಾನಾ ಗ್ರೂಪ್ ಈ ವೃತ್ತದ ನಿರ್ಮಾಣಕ್ಕೆ ಸಂಪೂರ್ಣ ಆರ್ಥಿಕ ಸಹಾಯ ನೀಡಿದ್ದು, ನಿರ್ವಹಣೆಯ ಹೊಣೆಯನ್ನೂ ಹೊತ್ತುಕೊಂಡಿದೆ.
ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಜನ್ಮದಿನದ ಅಂಗವಾಗಿ ಮಾ.23ರಂದು ಈ ವೃತ್ತವನ್ನು ಲೋಕಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರಕವಿಗಳ ಕೊಡುಗೆಗಳನ್ನು ಸ್ಮರಿಸಲಾಯಿತು.
ಪುನರ್ ನಿರ್ಮಾಣಕ್ಕಾಗಿ ಹಳೆಯ ವೃತ್ತವನ್ನು ಕೆಡವಿದಾಗ ಅಲ್ಲೊಂದು ಬೃಹತ್ ಬಾವಿ ಇರುವುದು ಪತ್ತೆಯಾಗಿತ್ತು. ಆ ಬಾವಿಯನ್ನು ಹಾಗೆಯೇ ಉಳಿಸಿಕೊಂಡು ಅದರ ಮೇಲೆಯೇ ನೂತನ ವೃತ್ತವನ್ನು ನಿರ್ಮಿಸಲಾಗಿದೆ. ಗೋವಿಂದ ಪೈ ಅವರು ಕುಳಿತುಕೊಂಡು ನವಭಾರತ ಪತ್ರಿಕೆಯನ್ನು ಓದುತ್ತಿರುವ ಭಂಗಿಯಲ್ಲಿ ಇರುವ 280 ಕೆ.ಜಿ ತೂಕದ ಕಂಚಿನ ಪುತ್ಥಳಿಯನ್ನು ವೃತ್ತದ ಮೇಲಿನ ಪೀಠದಲ್ಲಿ ಸ್ಥಾಪಿಸಲಾಗಿದೆ. ವೃತ್ತದಲ್ಲಿ ಕಾರಂಜಿ, ಸುಂದರ ಉದ್ಯಾನ ಮತ್ತು ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ.
ಸೇವಾಂಜಲಿ ಟ್ರಸ್ಟ್‌ನ ಅಧ್ಯಕ್ಷರೂ ಆಗಿರುವ ಶಾಸಕ ಡಿ. ವೇದವ್ಯಾಸ ಕಾಮತ್ ಅವರು, ಈ ವೃತ್ತದ ಪುನರ್ ನಿರ್ಮಾಣದ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಮಹಾನಗರಪಾಲಿಕೆಯಿಂದ ಎಲ್ಲ ಅನುಕೂಲಗಳನ್ನೂ ಮಾಡಿಕೊಟ್ಟ ಮೇಯರ್ ಪ್ರೇಮಾನಂದ ಶೆಟ್ಟಿ ಅವರಿಗೆ ಶಾಸಕರು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್, ನಗರದ ಎಲ್ಲ ವೃತ್ತಗಳನ್ನೂ ಮುಂದಿನ ದಿನಗಳಲ್ಲಿ ಖಾಸಗಿಯವರ ಸಹಯೋಗದಲ್ಲಿ ಇದೇ ರೀತಿ ಮೇಲ್ದರ್ಜೆಗೇರಿಸಿ ನಗರ ಸೌಂದರೀಕರಣವನ್ನು ಹೆಚ್ಚಿಸಲಾಗುವುದು. ಅದಕ್ಕೆ ಅಗತ್ಯದ ಪೂರ್ವತಯಾರಿಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.
ಈ ವೃತ್ತದ ನಿರ್ಮಾಣ ಕಾರ್ಯದಲ್ಲಿ ಶ್ರಮಿಸಿದ ಎಲ್ಲರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
Post a Comment