ಮಂಗಳೂರು: ಪ್ರಪ್ರಥಮ ಬಾರಿಗೆ ಕನ್ನಡಕ್ಕೆ ರಾಷ್ಟ್ರಕವಿ ಗೌರವವನ್ನು ತಂದುಕೊಟ್ಟ, ಗಡಿನಾಡು ಮಂಜೇಶ್ವರದಲ್ಲಿ ಹುಟ್ಟಿದರೂ ಶಿಕ್ಷಣವನ್ನು ಮಂಗಳೂರಿನಲ್ಲಿ ಮಾಡಿ ಇಡೀ ರಾಷ್ಟ್ರವೇ ಬೆರಗಾಗುವಂತಹ ಕೃತಿಗಳನ್ನು ಸೃಷ್ಟಿಸಿದವರು ಶ್ರೀಯುತ ಮಂಜೇಶ್ವರ ಗೋವಿಂದ ಪೈ. ಅವರ ಹೆಸರಿನಲ್ಲಿರುವ ಮಂಗಳೂರಿನ ಕೊಡಿಯಾಲ್ ಬೈಲ್ ನ ವೃತ್ತ ಹೊಸ ರೂಪದೊಂದಿಗೆ ಮೈದಳೆದುಕೊಂಡಿದೆ.
ಸಾಂಪ್ರದಾಯಿಕ ವಿನ್ಯಾಸದೊಂದಿಗೆ ಆಧುನಿಕತೆಯ ಸ್ಪರ್ಶ ಪಡೆದು ಸಿದ್ಧಗೊಂಡಿರುವ ಈ ವೃತ್ತ ಭವಿಷ್ಯದ ಪೀಳಿಗೆಗೆ ಸಾಹಿತ್ಯ ಲೋಕದ ಧ್ರುವತಾರೆ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ನೆನಪನ್ನು ಮನಸ್ಸಿನಲ್ಲಿ ಅಚ್ಚೊತ್ತುವಂತೆ ಮಾಡಲಿದೆ. ರಾಷ್ಟ್ರಕವಿ ಗೋವಿಂದ ಪೈಗಳು ಕೈಯಲ್ಲಿ ನವಭಾರತ ಪತ್ರಿಕೆಯನ್ನು ಹಿಡಿದು ಓದುತ್ತಾ ಕುಳಿತಿರುವ ಭಂಗಿಯಲ್ಲಿರುವ ಕಂಚಿನ ಪುತ್ಥಳಿಯನ್ನು ಇಲ್ಲಿ ಸ್ಥಾಪಿಸಲಾಗುತ್ತಿದ್ದು, ಅದರ ನಿರ್ಮಾಣವನ್ನು ಕಾರ್ಕಳದ ಶಿಲ್ಪಿ ಕೃಷ್ಣ ಆಚಾರಿಯವರ ತಂಡದವರು ಮಾಡಿದ್ದಾರೆ.
ದೇಶ, ವಿದೇಶಗಳಿಂದ ಮಂಗಳೂರಿಗೆ ಬರುವ ಅತಿಥಿಗಳು ಉಳಿದುಕೊಳ್ಳುವ ಓಶಿಯನ್ ಪರ್ಲ್ ಹೋಟೇಲಿನ ಎದುರಿನಲ್ಲಿರುವ ಈ ವೃತ್ತ ಮಂಗಳೂರಿನ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಸಹಜವಾಗಿ ಆಕರ್ಷಣೀಯ ಕೇಂದ್ರ ಬಿಂದುವಾಗಲಿದೆ. ವೃತ್ತದ ಒಳಗಿರುವ ಪುರಾತನ ಕಾಲದ ಬಾವಿಯನ್ನು ಹಾಗೆ ಉಳಿಸಲಾಗಿದ್ದು, ಅದರ ನೀರನ್ನೇ ಕಾರಂಜಿಯಂತೆ ವೃತ್ತದಲ್ಲಿ ಚಿಮ್ಮಿಸಿ ಇನ್ನಷ್ಟು ಆಕರ್ಷಣೀಯವಾಗಿಸುವ ಯೋಜನೆ ಮಾಡಲಾಗಿದೆ. ವೃತ್ತದ ಒಳಗೆ ಹೂಗಳನ್ನು ಮತ್ತು ಹಚ್ಚಹಸುರಿನ ಹುಲ್ಲುಗಳನ್ನು ಬೆಳೆಸಲಾಗುತ್ತಿದ್ದು, ಅದಕ್ಕಾಗಿ ಪ್ರತ್ಯೇಕ ಸ್ಥಳಗಳನ್ನು ಖ್ಯಾತ ಸೌಂದರ್ಯ ವಿನ್ಯಾಸಕಾರರಾದ ಸುಜಯ್ ಲೋಬೋ ಅವರು ಗುರುತಿಸಿ ಅಭಿವೃದ್ಧಿಪಡಿಸಿದ್ದಾರೆ. ವೃತ್ತದ ಸುತ್ತಲೂ ಕೆತ್ತನೆಯ ಕಬ್ಬಿಣದ ಗ್ರೀಲ್ ಗಳನ್ನು ಅಳವಡಿಸಲಾಗಿದ್ದು, ಅದರಲ್ಲಿ ಸಾಂಪ್ರದಾಯಿಕ ಕುಸುರಿ ಕೆಲಸ ಮಾಡಲಾಗಿದೆ. ಕಾರಂಜಿ ಮತ್ತಿತರ ವಿದ್ಯುತ್ ಅಲಂಕಾರಿಕ ವಸ್ತುಗಳ ಅಳವಡಿಕೆ ಯನ್ನು ಗಣೇಶ್ ಎಲೆಕ್ಟ್ರಿಕಲ್ ನ ಸೀತಾರಾಂ ಅವರು ವಹಿಸಿಕೊಂಡಿದ್ದರು. ಗೋವಿಂದ ಪೈಯವರ ಕಂಚಿನ ಮೂರ್ತಿಯ ನಿರ್ಮಾಣ ರಥಬೀದಿಯ ಗೋವರ್ಧನ್ ಮೆಟಲ್ಸ್ ನವರು ಮಾಡಿರುತ್ತಾರೆ.
ಇದರ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿರುವ ಖ್ಯಾತ ಬಿಲ್ಡರ್ ಗಿರಿಧರ್ ಶೆಟ್ಟಿ ಈ ಬಗ್ಗೆ ಮಾಹಿತಿ ನೀಡಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಈ ವೃತ್ತದ ಪುನರ್ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿದ್ದು, ಟ್ರಸ್ಟಿನ ಅಧ್ಯಕ್ಷರಾದ, ಶಾಸಕ ವೇದವ್ಯಾಸ ಕಾಮತ್ ಅವರ ಅಪೇಕ್ಷೆಯಂತೆ ಈ ವೃತ್ತ ಇತಿಹಾಸ ಮತ್ತು ಪ್ರಸ್ತುತ ಮಾದರಿಯ ಶೈಲಿಯ ಸಮರ್ಪಕ ಮಿಳಿತದೊಂದಿಗೆ ರಚನೆಯಾಗಿದೆ ಎಂದು ತಿಳಿಸಿದ್ದಾರೆ.
ಈ ವೃತ್ತದ ನಿರ್ಮಾಣದಲ್ಲಿ ಸೂಕ್ತ ಸಲಹೆ, ಸಹಕಾರ ನೀಡಿದ ಉದ್ಯಮಿ ಮಂಗಲ್ಪಾಡಿ ನರೇಶ್ ಶೆಣೈಯವರ ಸಹಕಾರ ಕೂಡ ಉಪಯುಕ್ತವಾಗಿದೆ ಎಂದು ಅವರು ಹೇಳಿದ್ದಾರೆ. ಫುಜ್ಲಾನಾ ಗ್ರೂಪಿನಿಂದ ಈ ವೃತ್ತದ ನವೀಕರಣದ ಯೋಜನೆ ಮಾಡಲಾಗಿದ್ದು, ವನಿತಾ ಅಚ್ಯುತ್ ಪೈ ಅವರ ಸ್ಮರಣಾರ್ಥ ಅವರ ಮಕ್ಕಳ ಕೊಡುಗೆಯಾಗಿ ಈ ವೃತ್ತ ರಚನೆಯಾಗಿದೆ. ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಈ ವೃತ್ತದ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದು, ಮಂಗಳೂರು ಮಹಾನಗರ ಪಾಲಿಕೆ ಅದಕ್ಕೆ ಅಧಿಕೃತವಾಗಿ ಲಿಖಿತ ಒಪ್ಪಿಗೆ ನೀಡಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment