ಮಂಗಳೂರು: ಕರಾವಳಿ ಲೇಖಕಿಯರ ವಾಚಕಿಯರ ಸಂಘವು ಮಾರ್ಚ್ 27ರಂದು ಹಿರಿಯ ಕವಯತ್ರಿ ಜ್ಯೋತಿ ಗುರುಪ್ರಸಾದ್ ಅವರು ರಚಿಸಿರುವ 'ಮನಸು ಮಾಗಿದ ಸುಸ್ವರ' ಕನ್ನಡದ ಮೌಲಿಕ ಚಿತ್ರಗೀತೆಗಳ ಕುರಿತಾದ ಅಂಕಣ ಕೃತಿಗೆ ಸಂಬಂಧಿಸಿದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಮಂಗಳೂರಿನ ಉರ್ವಸ್ಟೋರ್ ಸಾಹಿತ್ಯ ಸದನದಲ್ಲಿ ಆಯೋಜಿಸಿದೆ. ಬೆಳಿಗ್ಗೆ 9.30ರಿಂದ ಆರಂಭವಾಗುವ ವಿಚಾರ ಸಂಕಿರಣವನ್ನು ಮಂಗಳೂರು ಆಕಾಶವಾಣಿ ಕಲಾವಿದ ಖ್ಯಾತ ಸಿತಾರ್ ವಾದಕ ಉಸ್ತಾದ್ ರಫೀಕ್ ಖಾನ್ ಸಂಕಿರಣವನ್ನು ಉದ್ಘಾಟಿಸುವರು. ಹಿರಿಯ ಲೇಖಕಿ ಎ. ಪಿ. ಮಾಲತಿಯವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಸೃಷ್ಟಿ ಪ್ರಕಾಶನದ ಸೃಷ್ಟಿ ನಾಗೇಶ್, ಲೇಖಕಿ ಜ್ಯೋತಿ ಗುರುಪ್ರಸಾದ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಬೆಳಿಗ್ಗೆ 10.45ಕ್ಕೆ ಮಂಗಳೂರು ಆಕಾಶವಾಣಿಯ 'ಎ' ಶ್ರೇಣಿ ಕಲಾವಿದರಾದ ಜಯಲಕ್ಷ್ಮೀ ಶಾಸ್ತ್ರೀ ಹಾಗೂ ರತ್ನಾವತಿ ಬೈಕಾಡಿ ಅವರಿಂದ 'ಅಮರ ಮಧುರ' ಗಾಯನ ಕಾರ್ಯಕ್ರಮ ನಡೆಯುವುದು. ಬೆಳಿಗ್ಗೆ 11 ಗಂಟೆಗೆ ಖ್ಯಾತ ಲೇಖಕಿ ಡಾ. ಶುಭಾ ಮರವಂತೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ವಿಚಾರಗೋಷ್ಠಿಯಲ್ಲಿ ಮಂಗಳೂರು ಆಕಾಶವಾಣಿಯ ವಿಶ್ರಾಂತ ಹಿರಿಯ ಪ್ರಸಾರಕ ಮುದ್ದು ಮೂಡುಬೆಳ್ಳೆ ಅವರು 'ಚಿತ್ರಗೀತೆಗಳಲ್ಲಿ ಪ್ರೇಮದ ಪರಿಕಲ್ಪನೆ ಮತ್ತು ಸಾಮಾಜಿಕ ಮೌಲ್ಯಗಳು' ವಿಷಯದ ಕುರಿತು ವಿಚಾರ ಮಂಡನೆ ಮಾಡುವರು.
ನಿರಂಜನ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಲತಾ ಆರ್ ಕೋಟ್ಯಾನ್ ಅವರು 'ಮೌಲಿಕ ಚಿತ್ರಗೀತೆಗಳ ರಸಗ್ರಹಣ' ಎಂಬ ವಿಷಯದಲ್ಲಿ ವಿಚಾರ ಮಂಡನೆ ಮಾಡುವರು. 12.45ಕ್ಕೆ ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಸುಸ್ವರ ಕಾರ್ಯಕ್ರಮ ನಡೆಯಲಿದೆ. ಬಳಿಕ ಲೇಖಕಿಯೊಂದಿಗೆ ಸಂವಾದ ನಡೆಯಲಿದೆ ಎಂದು ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಕಾರ್ಯದರ್ಶಿ ಡಾ| ಮಂಜುಳಾ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment