ಚಿಕ್ಕಮಗಳೂರು: ವಿಜ್ಞಾನದ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಪಂಚಾಶಾಸ್ತ ಎಜುಕೇಷನ್ ಅಂಡ್ ಕಲ್ಚರಲ್ ಟ್ರಸ್ಟ್ ಅಧ್ಯಕ್ಷ ಚೇತನ್ ಶ್ರೀಶಾಂತ್ ಹೇಳಿದರು.
ತಾಲ್ಲೂಕಿನ ಮಳಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪಂಚಾಶಾಸ್ತ ಎಜುಕೇಷನ್ ಅಂಡ್ ಕಲ್ಚರಲ್ ಟ್ರಸ್ಟ್ ಹಾಗೂ ನಿರ್ವಿಘ್ನ ಸೇವಾ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಭಾರತದ ಹೆಮ್ಮೆಯ ವಿಜ್ಞಾನಿ ಸರ್.ಸಿ.ವಿ.ರಾಮನ್ ಅವರ ಅಪೂರ್ವ ಸಾಧನೆಯ ನೆನಪಿನಲ್ಲಿ ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನ ಎಂದು ಗುರುತಿಸಲಾಗಿದೆ. ಅವರು ೧೯೨೮ರ ಫೆಬ್ರವರಿ ೨೮ ರಂದು ರಾಮನ್ ಎಫೆಕ್ಟ್ ಎಂದೇ ಪ್ರಸಿದ್ಧವಾದ ತಮ್ಮ ಅಧ್ಯಯನದ ವಿವರಗಳನ್ನು ಜಗತ್ತಿಗೆ ತಿಳಿಸಿದ್ದರು ಎಂದರು.
ಸಾರ್ವಜನಿಕ ಭಾಷಣಗಳು, ರೇಡೀಯೋ, ಟಿವಿ, ವಿಜ್ಞಾನ ಚಲನಚಿತ್ರಗಳ ವಿಷಯಗಳು ಮತ್ತು ಪರಿಕಲ್ಪನೆಗಳ ಕುರಿತು ವಿಜ್ಞಾನ ಪ್ರದರ್ಶಗಳು, ಚರ್ಚೆಗಳು, ರಸಪ್ರಶ್ನೆ ಸ್ಪರ್ಧೆಗಳು, ಉಪನ್ಯಾಸಗಳು ಮತ್ತು ವಿಜ್ಞಾನ ಮಾದರಿ ಪ್ರದರ್ಶನಗಳನ್ನು ಆಯೋಜಿಸುವ ಮೂಲಕ ಶಿಕ್ಷಣ ಸಂಸ್ಥೆಗಳು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುತ್ತವೆ ಎಂದು ತಿಳಿಸಿದರು.
ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಮಾತನಾಡಿ ಸಿ.ವಿ. ರಾಮನ್ ಅವರು ಹಲವು ಪ್ರಯೋಗಗಳನ್ನು ನಡೆಸಿ ಅವುಗಳ ಆಧಾರದ ಮೇಲೆ ಬೆಳಕಿನ ಚದುರುವಿಕೆಯ ಬಗ್ಗೆ 1928 ರಲ್ಲಿ ಕೆಲವು ನಿರ್ಧಾರಗಳನ್ನು ಮಂಡಿಸಿದರು.
ಅವರ ರೋಹಿತ ದರ್ಶನವನ್ನು ಘನ, ದ್ರವ, ಅನಿಲ ವಸ್ತುಗಳ ವಿಶ್ಲೇಷಣೆಗೆ, ಮಾನವ ಅಂಗಾಂಶಗಳು ಮತ್ತು ಸೂಕ್ಷ್ಮ ಜೀವಿಗಳ ವಿಶ್ಲೇಷಣೆಗೆ ಕೆಲವು ವಸ್ತುಗಳನ್ನು ಪತ್ತೆ ಹಚ್ಚಲು ಬಳಸಲಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ವಿವರಿಸಿದರು.
ಇದೇ ವೇಳೆ ಪ್ರಬಂಧ ಸ್ಫರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಎಜುಕೇಷನ್ ಅಂಡ್ ಕಲ್ಚರಲ್ ಟ್ರಸ್ಟ್ ಹಾಗೂ ನಿರ್ವಿಘ್ನ ಸೇವಾ ಸಮಿತಿ ವತಿಯಿಂದ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್‌ನ ಕಾರ್ಯದರ್ಶಿ ನಿಶಾಂತ್, ಸೇವಾ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಸದಸ್ಯರಾದ ಗೋಪಿ, ಪ್ರದೀಪ್, ಸಂದೀಪ್, ಹರ್ಷಿತ್, ಶಾಲೆಯ ಶಿಕ್ಷಕರಾದ ಬಸವರಾಜ್, ಹಂಸ, ರೂಪ ಮತ್ತಿತರರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق