ಬೆಂಗಳೂರು: ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ ಆರೋಪದ ಮೇಲೆ ವಸತಿ ಸಚಿವ ವಿ. ಸೋಮಣ್ಣ ವಿರುದ್ಧ ಸಮನ್ಸ್ ಜಾರಿ ಮಾಡಲಾಗಿದೆ.
ಮುಂದಿನ ತಿಂಗಳು ಏಪ್ರಿಲ್ 16 ಕ್ಕೆ ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದೆ.
ಇದು 8-9 ವರ್ಷಗಳ ಹಿಂದಿನ ಪ್ರಕರಣವಾಗಿದ್ದು, 2013ರಲ್ಲಿ ರಾಮಕೃಷ್ಣ ಎಂಬವರು ಸಚಿವ ಸೋಮಣ್ಣ ವಿರುದ್ಧ ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ್ದಾರೆ ಎಂದು ಖಾಸಗಿ ದೂರು ದಾಖಲಿಸಿದ್ದರು.
ಈ ಬಗ್ಗೆ ಕೋರ್ಟ್ ತನಿಖೆ ನಡೆಸಿ ವರದಿ ನೀಡುವಂತೆ ಲೋಕಾಯುಕ್ತ ಪೊಲೀಸರಿಗೆ ಕೋರ್ಟ್ ಸೂಚಿಸಿತ್ತು. ಆದರೆ, ಲೋಕಾಯುಕ್ತ ಪೊಲೀಸರು ಆದಾಯ ಮೀರಿ ಆಸ್ತಿ ಗಳಿಸಿಲ್ಲವೆಂದು ವರದಿ ನೀಡಿದ್ದರು. ಲೋಕಾಯುಕ್ತ ಪೊಲೀಸರ ಬಿ ರಿಪೋರ್ಟ್ನ್ನು ಕೋರ್ಟ್ ತಿರಸ್ಕರಿಸಿದೆ.
ಸೋಮಣ್ಣನವರು ಶಾಸಕನಾಗುವ ಮೊದಲಿನ ಆದಾಯ, ನಂತರದ ಆದಾಯ, ಗಳಿಸಿದ ಆಸ್ತಿಯ ಸೂಕ್ತ ವಿವರಣೆಯನ್ನು ಪೊಲೀಸರು ನೀಡಿಲ್ಲ. ಹೀಗಾಗಿ ಅಸಮರ್ಪಕ ತನಿಖೆ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿ ಸಮನ್ಸ್ ಜಾರಿ ಮಾಡಿದೆ.
إرسال تعليق