ಬೆಳ್ತಂಗಡಿ: ಭಾರತವು ಕೃಷಿ ಮೂಲಾಧಾರಿತ ದೇಶವಾಗಿದೆ. ಈ ಮಣ್ಣಿನಲ್ಲಿ ಹುಟ್ಟಿ, ಕಲಿತು, ಎಷ್ಟೇ ಉನ್ನತ ಸ್ಥಾನಕ್ಕೆ ಏರಿದರೂ ಆಹಾರದ ಮೂಲವಾಗಿರುವ ಕೃಷಿಯನ್ನು ಮರೆಯಬಾರದು ಎಂದು ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ರವಿಶಂಕರ್ ಕೆ ಆರ್ ಹೇಳಿದರು.
ಅವರು ಬೆಳ್ತಂಗಡಿಯ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಸಮಾಜ ಕಾರ್ಯ ವಿಭಾಗ, ಬೆಳ್ತಂಗಡಿ ನಗರ ಪಂಚಾಯತ್ ಹಾಗೂ ರುಡ್ ಸೆಟ್ ಸಿದ್ಧವನ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ಭತ್ತದ ಯಾಂತ್ರೀಕರಣ ಮತ್ತು ಸ್ವಯಂ ಉದ್ಯೋಗ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿಯ ಮಹತ್ವವನ್ನು ಮರೆಯುತ್ತಿರುವ ಕಾಲಘಟ್ಟದಲ್ಲಿ ಅದನ್ನು ತಿಳಿಸುವ ಪ್ರಯತ್ನ ಈ ಕಾರ್ಯಕ್ರಮ ಮಾಡುತ್ತಿದೆ. ವಿದ್ಯಾರ್ಥಿಗಳು ಇದರ ಉದ್ದೇಶವನ್ನು ಅರಿತು ಮುಂದುವರೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಜಿ ಶಾಸಕ, ಗುರುದೇವ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ಕೆ. ವಸಂತ ಬಂಗೇರ ಮಾತನಾಡಿದರು. ರೈತ ದೇಶದ ಬೆನ್ನೆಲುಬು. ಹೀಗಾಗಿ ರೈತರ ಮಕ್ಕಳು ಎಂದು ಹೇಳಿಕೊಳ್ಳಲು ಹೆಮ್ಮೆ ಪಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ, ಬೆಳ್ತಂಗಡಿ ನಗರ ಪಂಚಾಯತ್ ಮುಖ್ಯಾಧಿಕಾರಿ ಎಮ್ ಹೆಚ್ ಸುಧಾಕರ್ ಮಾತನಾಡಿದರು. ಕೃಷಿ ಹದಗೆಟ್ಟಾಗ ಸಂಸ್ಕೃತಿಯೂ ಕೆಡುತ್ತದೆ. ಹೀಗಾಗಿ ಭಾರತೀಯ ಸಂಸ್ಕೃತಿಯ ಉಳಿವಿಗೆ ಕೃಷಿ ಅತ್ಯಗತ್ಯ ಎಂದು ತಿಳಿಸಿದರು. ರುಡ್ ಸೆಟ್ ಸ್ವ ಉದ್ಯೋಗ ತರಬೇತಿ ಸಂಸ್ಥೆ ಉಪನ್ಯಾಸಕಿ ಅನಸೂಯ ಮಾತನಾಡಿ ವಾಣಿಜ್ಯ ಕೃಷಿಗೆ ಮರುಹೋಗುತ್ತಿರುವ ಇಂದಿನ ದಿನಗಳಲ್ಲಿ ಭತ್ತದ ಕೃಷಿಯ ಬಗ್ಗೆ ಗಮನಹರಿಸುವುದು ಮುಖ್ಯವಾಗಿದೆ ಎಂದು ನುಡಿದರು. ಉಡುಪಿಯ ಕೃಷಿ ಯಾಂತ್ರೀಕರಣ ಯೋಜನಾಧಿಕಾರಿ ಅಶೋಕ್ ಭತ್ತದ ಯಾಂತ್ರೀಕರಣ ಬಗೆಗಿನ ಮಾಹಿತಿ ನೀಡಿದರು
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ. ಉಪಸ್ಥಿತರಿದ್ದರು. ಎಸ್ ಡಿ ಎಂ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿ ಚೈತ್ರಾ ಸ್ವಾಗತಿಸಿದರು. ವಿದ್ಯಾರ್ಥಿ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ರಾಕೇಶ್ ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق