ಹಾವೇರಿ: ಖಾಸಗಿ ಬಸ್ ಶನಿವಾರ ನಸುಕಿನ ವೇಳೆ ಮೇಲ್ಸೇತುವೆಯಿಂದ ಸರ್ವಿಸ್ ರಸ್ತೆಗೆ ಬಿದ್ದ ಪರಿಣಾಮ ಚಾಲಕ ಹಾಗೂ ಮಹಿಳೆ ಸೇರಿದಂತೆ ಇಬ್ಬರು ಸಾವಿಗೀಡಾಗಿದ್ದಾರೆ.
ಹಾವೇರಿ ನಗರದ ಹೊರವಲಯದ ದೇವಗಿರಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಚಾಲಕ ಶಿವಾಜಿ (45) ಮತ್ತು ಸುಜಾತಾ (35) ಮೃತಪಟ್ಟವರು.
ಬೆಂಗಳೂರಿನಿಂದ ಗೋಕಾಕ್ ಗೆ ಸಂಚರಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದ್ದು, 19 ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸುಮಾರು 25 ಅಡಿ ಎತ್ತರದಿಂದ ಬಸ್ ಕೆಳಗೆ ಬಿದ್ದ ಭಾರಿ ಶಬ್ದ ಕೇಳಿದ ಸ್ಥಳೀಯರು ಕೂಡಲೇ ಸಹಾಯಕ್ಕೆ ಬಂದಿದ್ದು, ಪ್ರಯಾಣಿಕರನ್ನು ರಕ್ಷಿಸಲು ನೆರವಾದರು.
ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕ್ರೇನ್ ಮೂಲಕ ಬಸ್ ಮೇಲೆತ್ತಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ಸ್ಥಳಕ್ಕೆ ಡಿವೈಎಸ್ಪಿ ಶಂಕರ ಮಾರಿಹಾಳ, ಸಿಪಿಐ ನಾಗಮ್ಮ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Post a Comment