ಕಾಸರಗೋಡು: “ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ನಾಡೋಜ ಕವಿ ಕಯ್ಯಾರರ ಹೆಸರಿನಲ್ಲಿ ಸ್ಥಾಪಿಸಿದ ಗಡಿನಾಡ ಚೇತನ ಚೊಚ್ಚಲ ಪ್ರಶಸ್ತಿಯು ಕನ್ನಡ ಸಂತ, ಗಡಿನಾಡ ಕನ್ನಡ ಕಣ್ವ, ಕಾಸರಗೋಡಿನ ಬಾಪು ಬಿ. ಪುರುಷೋತ್ತಮಅವರಿಗೆ ಒಲಿದು ಬಂದುದು ಕಾಸರಗೋಡಿನ ಕನ್ನಡಕ್ಕೆ ಸಂದ ಗೌರವ. ಕನ್ನಡಕ್ಕೆ ಕಂಟಕ ಬಂದಾಗಲೆಲ್ಲ ಅದನ್ನು ಕ್ರಿಯಾತ್ಮಕವಾಗಿ ಎದುರಿಸಿದ ಪುರುಷೋತ್ತಮ ಅವರ ಕನ್ನಡ ಸೇವೆಗೆ ಬೆಲೆತೆರಲು ಸಾಧ್ಯವಿಲ್ಲ. ತಡವಾಗಿಯಾದರೂ ಕರ್ನಾಟಕ ಸರಕಾರದಿಂದ ಲಭಿಸಿದ ಈ ಅಂಗೀಕಾರವು ಸಂತೋಷ ತಂದಿದೆ” ಎಂದು ಗಡಿನಾಡ ಕನ್ನಡ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರೂ ಕಾಸರಗೋಡು ಸರಕಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕರೂ ಆಗಿರುವ ಡಾ. ರತ್ನಾಕರ ಮಲ್ಲಮೂಲೆಯವರು ಅಭಿಪ್ರಾಯಪಟ್ಟಿದ್ದಾರೆ.
ಗಡಿನಾಡ ಚೇತನ ಪ್ರಶಸ್ತಿ ಭಾಜನರಾದ ಬಿ. ಪುರುಷೋತ್ತಮ ಅವರಿಗೆ ಸಿರಿಚಂದನ ಕನ್ನಡ ಯುವಬಳಗ (ರಿ) ಕಾಸರಗೋಡು ಸಂಸ್ಥೆಯು ಪುರುಷೋತ್ತಮ ಅವರ ಮನೆಯಲ್ಲಿ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕಾಸರಗೋಡಿನ ರಾಮ ಲಕ್ಷ್ಮಣ ಅಥವಾ ಕೋಟಿ ಚೆನ್ನಯರೆಂದೇ ಖ್ಯಾತಿ ಪಡೆದ ಕನ್ನಡ ಯೋಧರಾದ ಕಳ್ಳಿಗೆ ಮಹಾಬಲ ಭಂಡಾರಿ ಹಾಗೂ ಯು.ಪಿ ಕುಣಿಕುಳ್ಳಾಯರ ಕಾಲದಲ್ಲಿ ಅವರ ಸಹವರ್ತಿಯಾಗಿ ಬೆಳೆದು, ಕಯ್ಯಾರ ಕಿಂಞ್ಞಣ್ಣ ರೈಗಳ ಜತೆ ನಿಕಟ ಒಡನಾಟದಲ್ಲಿದ್ದ ಪುರುಷೋತ್ತಮರು ಅವರ ಕಾಲದ ಅನಂತರ ಅದೇ ಹಾದಿಯಲ್ಲಿ ನಡೆದು ಕನ್ನಡ ಸೇವೆ ಮಾಡಿದವರು ಮತ್ತು ಈ ಇಳಿವಯಸ್ಸಿನಲ್ಲೂ ನಿರಂತರ ಕನ್ನಡಕ್ಕಾಗಿ ತುಡಿಯುವವರು ಪುರುಷೋತ್ತಮ ಅವರು. ಇಂತಹ ಕನ್ನಡದ ಕಣ್ವನಿಗೆ ಗಡಿನಾಡ ಚೇತನ ಪ್ರಶಸ್ತಿ ದೊರಕಿರುವುದರಿಂದ ಕಾಸರಗೋಡಿನ ಕನ್ನಡ ಹೋರಾಟಕ್ಕೆ ಮತ್ತು ಕಾಸರಗೋಡಿನ ಹೆಸರನ್ನು ಸ್ಥಾಯಿಯಾಗಿಸಿದ ಕಯ್ಯಾರರ ಮನದಿಂಗಿತಕ್ಕೆ ಶಕ್ತಿಬಂದಿದೆ” ಎಂದು ಮಲ್ಲಮೂಲೆ ನುಡಿದರು.
ಸಿರಿಚಂದನ ಬಳಗದ ಪದಾಧಿಕಾರಿಗಳಾದ ರಾಜೇಶ್ ಎಸ್ ಪಿ ಯವರು ಮಾತನಾಡುತ್ತಾ, “ಗುರುಸಮಾನರಾದ ಪುರುಷೋತ್ತಮ ಅವರು ಯುವಜನತೆಗೆ ಸ್ಪೂರ್ತಿ ಹಾಗೂ ಮಾದರಿಯಾಗಿದ್ದಾರೆ. ಕನ್ನಡದ ಕೆಲಸಗಳು ಕವಿಗೋಷ್ಟಿ, ಸಮ್ಮೆಳನಗಳಿಗೆ ಸೀಮಿತಗೊಳ್ಳುತ್ತಿರುವಾಗ ಅವುಗಳಿಂದ ಮಾತ್ರವೆ ಕಾಸರಗೋಡಿನಲ್ಲಿ ಕನ್ನಡದ ಅಸ್ಮಿತೆಯನ್ನು ಕಾಪಿಡಲು ಸಾಧ್ಯವಿಲ್ಲ ಎಂದು ತಮ್ಮ ಕನ್ನಡದ ಕ್ರಿಯಾತ್ಮಕ ಕೆಲಸಗಳಿಂದ ತೋರಿಸಿಕೊಟ್ಟವರು ಅವರು” ಎಂದು ಹೇಳಿದರು.
ಬಳಿಕ ಮಾತನಾಡಿದ ಸುಜಾತ ಎಸ್ ಅವರು, ಪುರುಷೋತ್ತಮ ಅವರು ಕನ್ನಡಕ್ಕಾಗಿ ತಮ್ಮ ಆರೋಗ್ಯ, ಆರ್ಥಿಕ ಸ್ಥಿತಿ ಎಲ್ಲವನ್ನೂ ಕಡೆಗಣಿಸಿ ದುಡಿದಿದ್ದಾರೆ, ಈ ರೀತಿಯಲ್ಲಿ ಕನ್ನಡದ ಸಮಸ್ಯೆಗಳ ಪರಿಹಾರಕ್ಕಾಗಿ ಈ ಸಂತ ತಮ್ಮನ್ನೇ ತಾವು ತೇದು ಬಿಟ್ಟಿದ್ದಾರೆ. ಆದರೂ ಅವರಿಗೆ ತಮ್ಮ ಕೆಲಸ ಕಾರ್ಯಗಳ ಕುರಿತು ತೃಪ್ತಿಯಿಲ್ಲ, ಇನ್ನಷ್ಟು ಮಾಡಬೇಕು, ಮತ್ತಷ್ಟು ಸಮಸ್ಯೆಗಳು ಉಳಿದುಕೊಂಡಿವೆ ಎಂಬ ಮರುಕ ಅವರನ್ನು ಯಾವತ್ತೂ ಕಾಡುತ್ತದೆ.” ಎಂದರು.
ಸಿರಿಚಂದನ ಕನ್ನಡ ಯುವಬಳಗದ ಅಧ್ಯಕ್ಷ ಕಾರ್ತಿಕ್ ಪಡ್ರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಿರಿಚಂದನ ಯುವಬಳಗದ ವತಿಯಿಂದ ಪುರುಷೋತ್ತಮ ಅವರನ್ನು ಶಾಲು ಹೊದಿಸಿ, ಒಸಗೆಯನ್ನಿತ್ತು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬಳಗದ ಪದಾಧಿಕಾರಿಗಳಾದ ಪ್ರಶಾಂತ್ ಹೊಳ್ಳ, ಸುಜಿತ್ ಉಪ್ಪಳ, ಧನೇಶ್ ಕೋಟೆಕಣಿ, ಸುನಿತ ಮಯ್ಯ, ವೃಂದ ಬಳ್ಳಮೂಲೆ, ಕೀರ್ತನ್ ಕುಮಾರ್ ಸಿ ಎಚ್, ಪವಿತ್ರ ಎಡನೀರು ಈ ಮುಂತಾದವರು ಉಪಸ್ಥಿತರಿದ್ದರು.ಬಳಗದ ಕಾರ್ಯದರ್ಶಿ ಅನುರಾಧ ಕಲ್ಲಂಗೂಡ್ಲು ಸ್ವಾಗತ ಕೋರಿ, ಕೋಶಾಧಿಕಾರಿ ಸುಬ್ರಹ್ಮಣ್ಯ ಹೇರಳ ಧನ್ಯವಾದ ಸಲ್ಲಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق