ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ದೀರ್ಘಕಾಲದ ವಿದ್ಯುತ್ ಸಮಸ್ಯೆ: ಕಳಸಾಪುರ ಮೆಸ್ಕಾಂ ಕಛೇರಿ ಎದುರು ಪ್ರತಿಭಟನೆ

ದೀರ್ಘಕಾಲದ ವಿದ್ಯುತ್ ಸಮಸ್ಯೆ: ಕಳಸಾಪುರ ಮೆಸ್ಕಾಂ ಕಛೇರಿ ಎದುರು ಪ್ರತಿಭಟನೆ



ಚಿಕ್ಕಮಗಳೂರು: ತಾಲ್ಲೂಕಿನ ಕಳಸಾಪುರದಲ್ಲಿ ದೀರ್ಘಕಾಲ ವಿದ್ಯುತ್ ಅಭಾವ ಉಂಟಾಗಿ ಗ್ರಾಮಸ್ಥರಿಗೆ ತೀವ್ರ ಸಮಸ್ಯೆಯಾಗಿದೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಶುಕ್ರವಾರ ಗ್ರಾಮದ ಮೆಸ್ಕಾಂ ಕಛೇರಿ ಎದುರು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.


ಗ್ರಾಮ ಪಂಚಾಯಿತಿಯಿಂದ ಮೆಸ್ಕಾಂ ಕಛೇರಿಯವರೆಗೆ ಮೆರವಣಿಗೆ ಮೂಲಕ ತೆರಳಿದ ಪ್ರತಿಭಟನಾಕಾರರು ಕಳಸಾಪುರ ಗ್ರಾಮದಲ್ಲಿ ಸುಮಾರು 1500ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದಾರೆ. ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೂ ವಿದ್ಯುತ್ ಸರಬರಾಜಿಲ್ಲ. ರಾತ್ರಿ 2 ರಿಂದ ಬೆಳಿಗಿನ ಜಾವ 4ರ ತನಕ ಮಾತ್ರ ವಿದ್ಯುತ್ ನೀಡುತ್ತಿದ್ದು ಇದರಿಂದ ಗ್ರಾಮಸ್ಥರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ದೂರಿದರು.


ಗ್ರಾಮದಲ್ಲಿ ಸರ್ಕಾರಿ ಕಛೇರಿಗಳಾದ ನಾಡಕಛೇರಿ, ಭಾರತೀಯ ಅಂಚೆ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಂಚಾಯಿತಿ ಕಾರ್ಯಾಲಯ, ಪಶು ಆಸ್ಪತ್ರೆ, ಸರ್ಕಾರಿ ಪದವಿ ಪೂರ್ವ ಕಾಲೇಜು,  ಸೇವಾ ಕೇಂದ್ರಗಳು, ಬಿ.ಎಸ್.ಎನ್.ಎಲ್. ಕಛೇರಿ, ಹಾಲಿನ ಡೈರಿ ಸೇರಿದಂತೆ ಅನೇಕ ಇಲಾಖೆಗಳನ್ನು ಹೊಂದಿದ್ದು ಸಣ್ಣಪುಟ್ಟ ಕೆಲಸಗಳಿಗೂ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.


ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಕಳಸಾಪುರ ನಾಡಕಛೇರಿಗೆ ಸುಮಾರು 60ಕ್ಕೂ ಹೆಚ್ಚು ಗ್ರಾಮಗಳು ಒಳಗೊಂಡಿದ್ದು ಕಛೇರಿಗೆ ಸಂಬಂಧಿಸಿದ ಎಲ್ಲಾ ಗ್ರಾಮದ ರೈತರುಗಳು, ಸಾರ್ವಜನಿಕರು ಸರ್ಕಾರದ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಹಾಗೂ ಫಲಾನುಭವಿಗಳು ಸವಲತ್ತುಗಳನ್ನು ಪಡೆಯಲು ಆಗಮಿಸುವ ಇವರಿಗೆ ವಿದ್ಯುತ್ ಸಮಸ್ಯೆಯಿಂದಾಗಿ ಇಂಟರ್‍ನೆಟ್ ಅಭಾವ ಉಂಟಾಗಿ ವಾಪಾಸಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ರಾಜ್ಯದಲ್ಲಿ ಹೆಚ್ಚು ಮಳೆಯಾಗಿದ್ದರೂ ಕಳಸಾಪುರ ಗ್ರಾಮಕ್ಕೆ ಅಕ್ಟೋಬರ್ ತಿಂಗಳಿನಿಂದಲೇ ಲೋಡ್ ಶೆಡ್ಡಿಂಗ್ ನೆಪ ಹೇಳಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಆದ್ದರಿಂದ ಈ ಎಲ್ಲಾ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಕಳಸಾಪುರ ಗ್ರಾಮಕ್ಕೆ ನಿರಂತರ ವಿದ್ಯುತ್ ನೀಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.


ಗ್ರಾಮಸ್ಥರುಗಳು ಮಾತನಾಡಿ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಕೋವಿಡ್‍ನಿಂದ ಶಾಲಾ ಮಕ್ಕಳಿಗೆ ಇತ್ತೀಚಿನ ದಿನಗಳಲ್ಲಿ ಆನ್‍ಲೈನ್ ಕ್ಲಾಸ್‍ಗಳು ನಡೆಯುತ್ತಿದೆ ಜೊತೆಗೆ ಬಿಸಿಯೂಟಕ್ಕೆ ಕುಡಿಯುವ ನೀರನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ವಸತಿ ನಿಲಯಗಳಿಗೂ ಸಹ ವಿದ್ಯುತ್ ಅಭಾವದಿಂದಾಗಿ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.


ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಾಧಮ್ಮ, ಸದಸ್ಯರುಗಳಾದ ಹರ್ಷದ್, ಚಂದ್ರಶೇಖರ್, ಶ್ರೀಧರ್, ಯೋಗೇಶ್, ನಾಗೇಗೌಡ, ವೆಂಕಟೇಶ್, ಶಿವರತ್ನಮ್ಮ, ರುಕ್ಮಿಣಿ, ಶ್ವೇತ, ಲಕ್ಷ್ಮಮ್ಮ, ಗೌರಮ್ಮ  ಗ್ರಾಮಸ್ಥರಾದ ಸತೀಶ್, ಕುಮಾರ್, ರವಿ, ಜಯರಾಮ್, ಶಶಿಕಲಾ ಮತ್ತಿತರರು ಹಾಜರಿದ್ದರು.

0 Comments

Post a Comment

Post a Comment (0)

Previous Post Next Post