ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆತ್ಮವಿಶ್ವಾಸದಿಂದ ಪಕ್ಷ ಬಲವರ್ಧನೆಗೆ ಮುಂದಾಗಿ: ಭೋಜೇಗೌಡ

ಆತ್ಮವಿಶ್ವಾಸದಿಂದ ಪಕ್ಷ ಬಲವರ್ಧನೆಗೆ ಮುಂದಾಗಿ: ಭೋಜೇಗೌಡ

 


ಚಿಕ್ಕಮಗಳೂರು: ಪ್ರತಿಯೊಬ್ಬ ಕಾರ್ಯಕರ್ತರು ತಮ್ಮಲ್ಲಿರುವ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವ ಮೂಲಕ ಜೆಡಿಎಸ್ ಪಕ್ಷದ ಬಲವರ್ಧನೆಗೆ ಮುಂದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಪಕ್ಷದ ಮುಖಂಡ ಎಸ್.ಎಲ್. ಭೋಜೇಗೌಡ ಕರೆ ನೀಡಿದರು. 


ಜೆಡಿಎಸ್ ಕಛೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ಸಮಿತಿಯ ಪ್ರಮುಖ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಪಕ್ಷದಲ್ಲಿ ಏಳುಬೀಳುಗಳು ಸಹಜ ಅದೆಲ್ಲವನ್ನು ಮೆಟ್ಟಿನಿಂತು ಪಕ್ಷದ ಕಾರ್ಯಕರ್ತರು ಸಂಘಟನೆ ಮೂಲಕ ಪಕ್ಷದ ಬಲವರ್ಧನೆಗೆ ಮುಂದಾಗಬೇಕು, ಇಳಿವಯಸ್ಸಿನಲ್ಲಿ ಪಕ್ಷದ ವರಿಷ್ಠರಾದ ಹೆಚ್.ಡಿ. ದೇವೇಗೌಡ ಅವರು ರಾಜ್ಯ ಪ್ರವಾಸದ ಮೂಲಕ ಪಕ್ಷ ಗಟ್ಟಿಗೊಳಿಸಲು ಮುಂದಾಗಿದ್ದು ಅವರ ಆತ್ಮವಿಶ್ವಾಸ ನಮ್ಮೆಗೆಲ್ಲರಿಗೂ ಸ್ಪೂರ್ತಿಯಾಗಬೇಕು ಎಂದರು.


ಜೆಡಿಎಸ್ ಪಕ್ಷ ನಿನ್ನೆ, ಮೊನ್ನೆ ಹುಟ್ಟಿದ ಪಕ್ಷವಲ್ಲ ಬದಲಾಗಿ ಇಲ್ಲಿಂದ ನೂರಾರು ಮುಖಂಡರು ಮಂತ್ರಿಗಳಾಗಿ, ಶಾಸಕರಾಗಿ ಆಯ್ಕೆಯಾಗಿ ನಂತರ ಪಕ್ಷ ತೊರೆದಿದ್ದಾರೆ. ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಗುರುತಿಸಿ ನೊಂದಣಿ ಮಾಡುವ ಮೂಲಕ ಸಂಘಟನೆ ಮಾಡಬೇಕು, ನೊಂದಣಿ ಬಳಿಕ ಪಕ್ಷ ಜವಾಬ್ದಾರಿ ವಹಿಸಲಿದ್ದು ಸಮರ್ಪಕವಾಗಿ ನಿಭಾಯಿಸುವಂತೆ ಸಲಹೆ ನೀಡಿದರು.


ಜೆಡಿಎಸ್ ರಾಜ್ಯದಲ್ಲಿ ಎಲ್ಲಾ ಹಂತದಲ್ಲಿಯೂ ರೈತರಿಗೆ, ಬಡವರಿಗೆ, ಕಾರ್ಮಿಕರಿಗೆ ನೆರವಾಗಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ 28 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಮೂಲಕ ರೈತರಿಗೆ ಶ್ರಮಿಸಿದ್ದಾರೆ. ಪ್ರತಿಯೊಂದು ಕುಟುಂಬದಲ್ಲೂ ಸಾಲ ಮನ್ನಾ ಫಲಾನುಭವಿಗಳಿದ್ದಾರೆ. ರಾಜ್ಯದಲ್ಲಿ ಲಾಟರಿ ನಿಷೇಧ, ಸಾರಾಯಿ ನಿಷೇಧ, ಜೊತೆಗೆ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಜೆಡಿಎಸ್ ಸರ್ಕಾರದ ಸಾಧನೆ ಆದರೆ ಅದರ ಲಾಭವನ್ನು ಇತರೆ ಸರ್ಕಾರಗಳು ಪಡೆದುಕೊಳ್ಳುತ್ತಿವೆ ಎಂದರು.


ನಗರಸಭೆ ಚುನಾವಣೆಯಲ್ಲಿ ಜಾತ್ಯಾತೀತ ಶಕ್ತಿಗಳು ಒಂದಾಗಿದ್ದಲ್ಲಿ ಜಿಲ್ಲೆ ಜೆಡಿಎಸ್ ವಶವಾಗುತ್ತಿತ್ತು. ಮುಸಲ್ಮಾನರು, ಕ್ರಿಶ್ಚಿಯನ್ ಒಳಗೊಂಡಂತೆ ಅಲ್ಪಸಂಖ್ಯಾತರು ಪಕ್ಷದ ಕೈ ಹಿಡಿದ್ದಿದ್ದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬಹುದಾಗಿತ್ತು. ಪರಿಷತ್ ಚುನಾವಣೆಯಲ್ಲೂ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಸಹಕಾರ ಕೋರಿ ಜೆಡಿಎಸ್ ಬಾಗಿಲಿಗೆ ಬಂದಿದ್ದವು. ಮುಂದಿನ ಚುನಾವಣೆ ನಿಟ್ಟಿನಲ್ಲಿ ಪಕ್ಷವನ್ನು ಸಂಘಟಿಸಬೇಕು, ಅದಕ್ಕಾಗಿ ನೊಂದಣಿ ಹೆಚ್ಚಿಸಿ ಜೆಡಿಎಸ್‍ನ ಸರ್ಕಾರದ ಅವಧಿಯ ಸಾಧನೆಗಳನ್ನು ಜನರ ಮುಂದಿಡಬೇಕು ಎಂದು ಕರೆ ನೀಡಿದರು.


ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಮಾತನಾಡಿ ಜನತಾ ಜಲಧಾರೆ ಮೂಲಕ ಜೆಡಿಎಸ್ ಪಕ್ಷವನ್ನು ಸಂಘಟನೆ ಮಾಡುವ ಸದುದ್ದೇಶವನ್ನು ಪಕ್ಷದ ವರಿಷ್ಟರು ಹಾಗೂ ಮುಖಂಡರು ಹೊಂದಿದ್ದು ಇದನ್ನು ಕಾರ್ಯಕರ್ತರು ಯಶಸ್ವಿಗೊಳಿಸಬೇಕು. ಪಕ್ಷಕ್ಕೆ ಹೆಚ್ಚಿನ ಮಂದಿಯನ್ನು ನೊಂದಣಿಗೊಳಿಸುವ ಮೂಲಕ ಪಕ ಬಲವರ್ಧನೆಗೊಳಿಸಬೇಕು ಎಂದು ಸಲಹೆ ನೀಡಿದರು.


ಕಾರ್ಯಕರ್ತರು ಇಚ್ಚಾಶಕ್ತಿಯನ್ನು ಬೆಳೆಸಿಕೊಳ್ಳಬೇಕು, ಹಿರಿಯ ನಾಯಕರು, ಕಾರ್ಯಕರ್ತರು, ಮಹಿಳೆಯರನ್ನು, ಯುವಜನತೆಯನ್ನು ಸಂಪರ್ಕಿಸಿ ಪಕ್ಷದ ಸದಸ್ಯತ್ವ ನೊಂದಣಿ ಹೆಚ್ಚಿಸಬೇಕು ಎಂದು ತಿಳಿಸಿದರು.


ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆಯಿದ್ದು ಬಿಜೆಪಿ ಬಣ್ಣದ ಆಡಳಿತ ನಡೆಸುತ್ತಿದೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಭಿವೃದ್ಧಿ ಚಿಂತನೆಯನ್ನು ಧ್ಯೆಯವಾಗಿಟ್ಟುಕೊಂಡು ಜೆಡಿಎಸ್ ಸಂಘಟನೆಗೆ ಕಾರ್ಯಕರ್ತರು ಶ್ರಮಿಸುವಂತೆ ಹೇಳಿದರು.


ಇದೇ ವೇಳೆ ಎಸ್.ಎಲ್.ಬೋಜೇಗೌಡ ಅವರಿಗೆ ದಕ್ಷಿಣ ರೈಲ್ವೆ ವಲಯದಲ್ಲಿರುವ ಜೋನಲ್ ರೈಲ್ವೆ ಯೂಸರ್ಸ್ ಕೋನ್ಸುಲೇಟೀವ್ ಕಮಿಟಿಗೆ ನಾಮನಿರ್ದೇಶನಗೊಂಡ ಹಿನ್ನಲೆಯಲ್ಲಿ ಪಕ್ಷದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ಕುಮಾರ್, ಮಾಜಿ ಅಧ್ಯಕ್ಷ ಹೆಚ್. ಎಸ್. ಮಂಜಪ್ಪ, ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ವಕ್ತಾರ ಹೊಲದಗದ್ದೆ ಗಿರೀಶ್, ನಗರಸಭಾ ಸದಸ್ಯರಾದ ಗೋಪಿ, ದಿನೇಶ್, ಮುಖಂಡರುಗಳಾದ ಸಿ.ಕೆ.ಮೂರ್ತಿ, ದೇವಿಪ್ರಸಾದ್, ಇರ್ಷಾದ್, ಮಾನು ಮಿರಾಂಡ, ದೇವರಾಜ್ ಅರಸ್, ತಾ.ಪಂ. ಮಾಜಿ ಸದಸ್ಯೆ ಈರಮ್ಮ ಮತ್ತಿತರರು ಉಪಸ್ಥಿತರಿದ್ದರು.

0 Comments

Post a Comment

Post a Comment (0)

Previous Post Next Post