ಚಿಕ್ಕಮಗಳೂರು: ಪಕ್ಷವನ್ನು ತಾಲ್ಲೂಕು ಮಟ್ಟದಲ್ಲಿ ಗಟ್ಟಿಗೊಳಿಸಲು ಪ್ರತಿ ಗ್ರಾಮಗಳಲ್ಲಿ ಸದಸ್ಯತ್ವ ಅಭಿಯಾನ ನಡೆಸಿ ಮುಂಬರುವ ಜಿ.ಪಂ ಹಾಗೂ ತಾ.ಪಂ. ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನಗಳಿಸಲು ಪ್ರಯತ್ನಿಸಲಾಗುವುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ಕುಮಾರ್ ಹೇಳಿದರು.
ನಗರದ ಜೆಡಿಎಸ್ ಕಛೇರಿಯಲ್ಲಿ ನಗರ ಹಾಗೂ ಕ್ಷೇತ್ರ ಸಮಿತಿಯ ಸಭೆಯಲ್ಲಿ ಅವರು ಭಾಗವಹಿಸಿ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ಚರ್ಚಿಸಿ ಮಾತನಾಡುತ್ತಿದ್ದರು.
ಮುಂಬರುವ ಚುನಾವಣೆಗಳಲ್ಲಿ ಪಕ್ಷವು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಚರ್ಚೆ ನಡೆಸಿದ್ದು ಕಾರ್ಯಕರ್ತರು ಹಾಗೂ ಮುಖಂಡರು ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡುವ ಮೂಲಕ ಹೆಚ್ಚಿನ ಸ್ಥಾನ ತರುವಲ್ಲಿ ಪ್ರಯತ್ನಪಡಬೇಕು ಎಂದು ಹೇಳಿದರು.
ಇತ್ತೀಚೆಗೆ ನಡೆದ ನಗರಸಭಾ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂದು ಕಾಂಗ್ರೆಸ್‍ನವರು ಹೇಳಿಕೆ ನೀಡುತ್ತಿದ್ದಾರೆ. ಆದರೆ ಬಿಜೆಪಿಯ ನಿಜವಾದ ಬಿ ಟೀಂ ಆಗಿ ಕಾಂಗ್ರೆಸ್ ಕೆಲಸ ಮಾಡುತ್ತಿರುವುದು ಎಲ್ಲರಿಗೂ ತಿಳಿದಿದೆ ಎಂದರು.
ಪ್ರಸ್ತುತ ಕಾಂಗ್ರೆಸ್‍ನಲ್ಲಿ ಚುನಾವಣೆ ಗೆಲುವು ಸಾಧಿಸಿರುವ ಕೆಲವು ನಗರಸಭಾ ಸದಸ್ಯರು ಮೂಲತ ಜೆಡಿಎಸ್ ಪಕ್ಷದವರೇ ಆಗಿದ್ದಾರೆ. ಕಾಂಗ್ರೆಸ್ ಕಳೆದ ಭಾರಿ ನಗರಸಭಾ ಚುನಾವಣೆಯಲ್ಲಿ 12 ಸ್ಥಾನಗಳನ್ನು ಪಡೆದುಕೊಂಡಿತ್ತು ಆದರೆ ಈ ಬಾರಿ 10 ಸ್ಥಾನ ಪಡೆದುಕೊಂಡು ಹಿನ್ನೆಡೆ ಅನುಭವಿಸಿದೆ. ಆದರೆ ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷವನ್ನು ಸದೃಢಗೊಳಿಸಿ ಮುಂಬರುವ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವ ಗುರಿ ಹೊಂದಲಾಗಿದೆ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವಿಚಾರ ಪ್ರಸ್ತಾಪಿಸಿದ ಅವರು ತಿಮ್ಮಶೆಟ್ಟಿ ಎಂಬುವವರು ಪಕ್ಷದ ಒಡನಾಟದಲ್ಲಿ ಮುತುವರ್ಜಿಯಿಂದ ಕೆಲಸ ಮಾಡುತ್ತಿದ್ದಾರೆ. ಅಭ್ಯರ್ಥಿಯಾಗುವ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದು ಮುಂದಿನ ಜಿಲ್ಲಾ ಸಮಿತಿ ಸಭೆಯಲ್ಲಿ ಚರ್ಚಿಸಿ ರಾಜ್ಯ ಮುಖಂಡರುಗಳೊಂದಿಗೆ ಮಾತುಕತೆ ನಡೆಸಿ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗುವುದು ಎಂದರು.
ಜೆಡಿಎಸ್ ಮುಖಂಡ ಬಿ.ಎಂ.ತಿಮ್ಮಶೆಟ್ಟಿ ಮಾತನಾಡಿ, ಪಕ್ಷವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಿಷ್ಟಗೊಳಿಸಬೇಕು. ಕಾರ್ಯಕರ್ತರು ಹೆಚ್ಚಿನ ಶ್ರಮವಹಿಸಿ ಮುಂಬರುವ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ನಗರಸಭಾ ಸದಸ್ಯರಾದ ಎ.ಸಿ.ಕುಮಾರ್, ಗೋಪಿ, ದಿನೇಶ್, ತಾ.ಪಂ. ಸದಸ್ಯ ಆನಂದ್ ನಾಯ್ಕ, ಮುಖಂಡರಾದ ಸಿ.ಕೆ.ಮೂರ್ತಿ, ದೇವಿಪ್ರಸಾದ್, ನಿಸಾರ್ ಅಹ್ಮದ್, ಇರ್ಷಾದ್, ಚಿದಾನಂದ್, ದೇವರಾಜ್ ಅರಸ್, ಈಶ್ವರ್ ಮತ್ತಿತರರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment