ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕುಡಿಯುವ ನೀರಿನ ಸಮಸ್ಯೆ: ರಸ್ತೆ ತಡೆ ನಡೆಸಿ ಪ್ರತಿಭಟನೆ

ಕುಡಿಯುವ ನೀರಿನ ಸಮಸ್ಯೆ: ರಸ್ತೆ ತಡೆ ನಡೆಸಿ ಪ್ರತಿಭಟನೆ


ಚಿಕ್ಕಮಗಳೂರು: ನಗರದ ಬೈಪಾಸ್ ರಸ್ತೆ ದುರಸ್ಥಿಯಿಂದಾಗಿ ಪೈಪ್‍ಲೈನ್ ಹೊಡೆದು ಕಳೆದ 15 ದಿನಗಳಿಂದ ನಗರಸಭೆ ನೀರು ಬಾರದ ಹಿನ್ನೆಲೆಯಲ್ಲಿ ವಾರ್ಡ್ ನಂ.2ರ ನರಿಗುಡ್ಡೇನಹಳ್ಳಿ ನಿವಾಸಿಗಳು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.


ನಗರಸಭೆ ಅಧ್ಯಕ್ಷರು, ಇಂಜಿನಿಯರ್ ಹಾಗೂ ಆಯುಕ್ತರಿಗೆ ಸಮಸ್ಯೆಗಳ ಬಗ್ಗೆ ದೂರವಾಣಿ ಕರೆ ಮಾಡಿ ತಿಳಿಸಿದರೂ ಯಾವುದಕ್ಕೂ ಸ್ಪಂದಿಸುತ್ತಿಲ್ಲ ಎಂದು ನಿವಾಸಿಗಳು ಆಕ್ರೋಶ ಹೊರಹಾಕಿ ಘೋಷಣೆ ಕೂಗಿದ ಪ್ರಸಂಗ ನಡೆಯಿತು.


ಈ ಸಂದರ್ಭದಲ್ಲಿ ಮಾತನಾಡಿದ ವಾರ್ಡಿನ ನಗರಸಭಾ ಸದಸ್ಯೆ ಇಂದಿರಾಶಂಕರ್ ನಗರಸಭಾ ವ್ಯಾಪ್ತಿಯ 2ನೇ ವಾರ್ಡಿನಲ್ಲಿ ಸುಮಾರು 800 ಕ್ಕೂ ಹೆಚ್ಚು ಕುಟುಂಬಗಳಿವೆ. ನಗರಸಭೆ, ಸಿಡಿಎ ರಸ್ತೆ ನಿರ್ಮಾಣದ ನೆಪದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಪೈಪ್‍ಗಳನ್ನು ಹೊಡೆದುಹಾಕಿದ್ದು ಇದರಿಂದಾಗಿ ಈ ಭಾಗದಲ್ಲಿ ಕಳೆದ 15 ದಿನಗಳಿಂದ ನೀರು ಬಾರದೆ ನಿವಾಸಿಗಳಿಗೆ ತೀವ್ರ ಸಮಸ್ಯೆ  ಉಂಟಾಗಿದೆ ಎಂದರು.


ಇಲ್ಲಿನ ಬಹುತೇಕ ಕುಟುಂಬ ಕೂಲಿ ಕಾರ್ಮಿಕರಾಗಿ ದುಡಿಮೆ ಮಾಡುತ್ತಿದ್ದು, ಬೆಳಗ್ಗೆಯಿಂದ ಸಂಜೆವರೆಗೆ ದುಡಿದು ಮನೆಗೆ ಬಂದು 40, 50 ರೂ ಪಾವತಿಸಿ ನೀರು ಪಡೆಯುವ ಸ್ಥಿತಿ ನಿರ್ಮಾಣವಾಗಿದೆ. ಕೊಳವೆ ಬಾವಿಗಳು ಸುಸ್ಥಿತಿಯಲ್ಲಿಲ್ಲ ಕೂಡಲೇ ಇಲ್ಲಿನ ಸಮಸ್ಯೆಯನ್ನು ನಿವಾರಿಸಬೇಕು, ಇಲ್ಲವಾದಲ್ಲಿ ನಗರಸಭೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.


ಯಾವುದೇ ಅಧಿಕಾರಿಗಳು ಪಕ್ಷಾತೀತವಾಗಿ ವಾರ್ಡ್‍ಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು, ಆದರೆ 2ನೇ ವಾರ್ಡಿನಲ್ಲಿ ಯಾವುದೇ ಸಮಸ್ಯೆಗಳಾದರೂ ಅಧಿಕಾರಿಗಳು ಸ್ಪಂದಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.  ವಾರ್ಡಿನ ಹಿಂದಿನ ನಗರಸಭೆ ಮಾಜಿ ಅಧ್ಯಕ್ಷರು ಹೇಳಿದಂತೆ ಅಧಿಕಾರಿಗಳು ಕೇಳುತ್ತಿದ್ದಾರೆ. ಕಾಂಗ್ರೆಸ್ ಗೆದ್ದಿರುವ ವಾರ್ಡ್‍ನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡದಂತೆ ತಿಳಿಸಿದ್ದಾರಂತೆ ಎಂದು ಗಂಭೀರ ಆರೋಪ ಮಾಡಿದರು.


ನರಿಗುಡ್ಡೇನಹಳ್ಳಿ ಭಾಗದಲ್ಲಿ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಮೇಲಾಗಿ ವಿದ್ಯುತ್ ದೀಪಗಳ ನಿರ್ವಹಣೆ ಇಲ್ಲ, ಕನಿಷ್ಟ ಪಕ್ಷ ಒಂದು ಪಡಿತರ ವಿತರಣಾ ಅಂಗಡಿಯು ಇಲ್ಲವಾಗಿದೆ. ಇದರಿಂದ ಇಲ್ಲಿನ ಜನ 50, 100 ರೂಗಳನ್ನು ನೀಡಿ ಆಟೋದಲ್ಲಿ ತೆರಳಿ ಪಡಿತರ ತರುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ 10 ವರ್ಷಗಳಿಂದ ಈ ಭಾಗದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ ಇದಕ್ಕೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ದೂರಿದರು.


ಸರಿಯಾದ ಉದ್ಯಾನವನಗಳಿಲ್ಲ, ನೀರು ಪೂರೈಕೆ ಸರಿಯಾಗಿಲ್ಲ, ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ಇಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ನೀಡಬೇಕು. ಶೀಘ್ರವಾಗಿ ಇಲ್ಲಿನ ಸಮಸ್ಯೆಗಳನ್ನು ಕೂಡಲೇ ಬಗೆಹರಿಸದಿದ್ದಲ್ಲಿ ನಗರಸಭೆ ಎದುರು ಸ್ಥಳೀಯರೊಂದಿಗೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.


ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಚಂದನ್, ರಾಘವೇಂದ್ರ ಭಂಡಾರಿ, ರಮೇಶ್, ಚಂದ್ರು, ಲೋಕೇಶ್, ವಾರ್ಡಿನ ನಿವಾಸಿಗಳಾದ ಅಶೋಕ್, ಚಂದ್ರಶೇಖರ್,  ಭಾಗೀರಮ್ಮ, ರತ್ನಮ್ಮ, ಅನುಸೂಯ, ಜ್ಯೋತಿ, ಕಮಲಮ್ಮ, ವಿಶ್ವನಾಥ್, ಮಂಜುಳಾ ಮತ್ತಿತರರು ಹಾಜರಿದ್ದರು.

0 تعليقات

إرسال تعليق

Post a Comment (0)

أحدث أقدم