ಚಿಕ್ಕಮಗಳೂರು: ನಗರದ ಅರಳಗುಪ್ಪೆ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ಐಸಿಯು ವಾರ್ಡ್ ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ವಾರ್ಡ್‍ನ್ನು ನವೀಕರಣಗೊಳಿಸಿ ಜೊತೆಗೆ ಐದು ಐಸಿಯು ಅತ್ಯಾಧುನಿಕ ಕಾಟ್‍ಗಳನ್ನು ಚಿಕ್ಕಮಗಳೂರು ಜಿಲ್ಲಾ ರೌಂಡ್ ಟೇಬಲ್ ಸಂಸ್ಥೆ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದರು.
ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಬೋಜೇಗೌಡ ಅವರು ನವೀಕರಣಗೊಂಡ ವಾರ್ಡ್‍ನ್ನು ಶನಿವಾರ ಉದ್ಘಾಟಿಸಿ ಮಾತನಾಡಿ ರೌಂಡ್ ಟೇಬಲ್ ಸಂಸ್ಥೆಯು ಉತ್ತಮವಾದ ಕೆಲಸ ಮಾಡುತ್ತಿದ್ದು ನಿಮ್ಮ ಈ ಕಾರ್ಯಕ್ರಮಗಳು ಮೆಚ್ಚುವಂತಹದ್ದಾಗಿದೆ ಎಂದರು.
ಶಾಲೆಗಳಿಗೆ ಹಾಗೂ ಆಸ್ಪತ್ರೆಗಳಿಗೆ ಸಾಕಷ್ಟು ಕೊಡುಗೆ ನೀಡುತ್ತಿರುವ ರೌಂಡ್ ಟೇಬಲ್ ಸಂಸ್ಥೆಯು ಕೋವಿಡ್ ಸಮಯದಲ್ಲಿ ಸಹ ಆಸ್ಪತ್ರೆಯ ರೋಗಿಗಳ ಅನುಕೂಲಕ್ಕಾಗಿ ವಿವಿಧ ಸೇವೆಯನ್ನು ನೀಡುವ ಮೂಲಕ ಸಹಕರಿಸಿದೆ ಎಂದ ಅವರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸಾರ್ವಜನಿಕರಿಗೆ ಸ್ಪಂದಿಸುವಂತಹ ಕೆಲಸ ಮಾಡಲಿ ಎಂದು ಆಶಿಸಿದರು.
ಕೆಪಿಸಿಸಿ ರಾಜ್ಯ ವಕ್ತಾರ ಹೆಚ್.ಹೆಚ್.ದೇವರಾಜ್ ಮಾತನಾಡಿ ರೌಂಡ್ ಟೇಬಲ್ ಸಂಸ್ಥೆಯು ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮವಾದ ಕೆಲಸವನ್ನು ಮಾಡುತ್ತಿದೆ. ಸಾರ್ವಜನಿಕರಿಗೆ ಅಗತ್ಯವಾಗಿ ಬೇಕಾಗಿರುವ ವಿದ್ಯಾಭ್ಯಾಸ, ಆರೋಗ್ಯಕ್ಕೆ ಸಂಬಂಧಿಸಿದಂತೆ ಸಂಸ್ಥೆಯು ಅಪಾರವಾದ ಕೊಡುಗೆಯನ್ನು ನೀಡುತ್ತಿದೆ ಎಂದು ತಿಳಿಸಿದರು.
ಸಾಮಾಜಿಕ ಕಾಳಜಿ ಹೊಂದಿರುವಂತಹ ಕಾರ್ಯಕ್ರಮಗಳನ್ನು ಪ್ರತಿಯೊಬ್ಬರು ಬೆಂಬಲಿಸುತ್ತಿದ್ದು ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದ ಅವರು ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ರೌಂಡ್ ಟೇಬಲ್ ಸಂಸ್ಥೆಯು ಇದೇ ರೀತಿ ಮುಂದುವರೆಯಲಿ ಎಂದರು. ಸಾರ್ವಜನಿಕರಿಗೆ ಸ್ಪಂದಿಸುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಂಡದವರಿಗೂ ಹಾಗೂ ಸದಸ್ಯರಿಗೆ ಇದೇ ವೇಳೆ ಶುಭ ಕೋರಿದರು.
ಜಿಲ್ಲಾ ರೌಂಡ್ ಟೇಬಲ್ ಅಧ್ಯಕ್ಷ ಹೆಚ್.ಡಿ.ವಿನಯ್‍ರಾಜ್ ಮಾತನಾಡಿ ರಾಜ್ಯ ರೌಂಡ್ ಟೇಬಲ್ ಸಂಸ್ಥೆ ಹಾಗೂ ಜಿಲ್ಲಾ ಸಂಸ್ಥೆಯ ವತಿಯಿಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳ ಅನುಕೂಲಕ್ಕಾಗಿ ಸುಮಾರು 4 ಲಕ್ಷ ರೂ. ಹಣ ವ್ಯಯಿಸಿ ಅತ್ಯಾಧುನಿಕ ಕಾಟ್ ಹಾಗೂ ಬೆಡ್‍ಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ಗುರುಶಾಂತಪ್ಪ, ಜಿಲ್ಲಾ ರೌಂಡ್ ಟೇಬಲ್‍ನ ಕಾರ್ಯದರ್ಶಿ ಅಶ್ವಿನ್, ವಲಯ ಅಧ್ಯಕ್ಷ ವಿನಯ್, ಕಾರ್ಯದರ್ಶಿ ದೇವ, ಸದಸ್ಯರುಗಳಾದ ನಿತಿನ್, ಮಲ್ಲಿಕ್, ಹಿಮ, ಕುಲ್‍ದೀಪ್, ಸಿದ್ದಾರ್ಥ್, ಕಾರ್ತೀಕ್, ನಕುಲ್, ನಿಶ್ಚಿತ್, ಚಂಚಲ, ದರ್ಶನ ಹಾಗೂ ವೈದ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Post a Comment