ಮಂಗಳೂರು: ಹೆಚ್ಚಿನ ಎಲ್ಲಾ ಬಾಯಿ ಕ್ಯಾನ್ಸರ್‍ಗಳು ತಡೆಗಟ್ಟಬಹುದಾದ ರೋಗವಾಗಿದ್ದು, ತಂಬಾಕು ಉತ್ಪನ್ನಗಳನ್ನು ಬಳಸದೇ ಇದ್ದಲ್ಲಿ ಖಂಡಿತವಾಗಿಯೂ ಬಾಯಿ ಕ್ಯಾನ್ಸರ್ ಬರುವ ಸಾಧ್ಯತೆ ಶೇಕಡಾ 90 ರಷ್ಟು ಕ್ಷೀಣೆಸುತ್ತದೆ. ಹೆಚ್ಚಿನ ಎಲ್ಲಾ ಬಾಯಿ ಕ್ಯಾನ್ಸರ್‍ಗಳು ತಂಬಾಕು ಉತ್ಪನ್ನಗಳಾದ ಗುಟ್ಕಾ, ಪಾನ್ ಪರಾನ್, ಬೀಡಿ, ಸಿಗರೇಟುಗಳ ದುರ್ಬಳಕೆಯಿಂದ ಬರುತ್ತದೆ. ಇದನ್ನು ವರ್ಜಿಸಿದ್ದಲ್ಲಿ ಮುಂದೊದಗುವ ಅನಾಹುತವನ್ನು ತಡೆಗಟ್ಟಬಹುದು. ಅದೇ ರೀತಿ ಒಂದು ವೇಳೆ ಬಾಯಿ ಕ್ಯಾನ್ಸರ್ ಬಂದರೂ ಆರಂಭಿಕ ಹಂತದಲ್ಲಿಯೇ ಅಂದರೆ ಸ್ಟೇಜ್ ಒಂದು ಮತ್ತು ಸ್ಟೇಜ್ ಎರಡರಲ್ಲಿ ಗುರುತಿಸಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದಲ್ಲಿ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ. ಬಾಯಿ ಕ್ಯಾನ್ಸರ್ ತಡೆಗಟ್ಟಬಹುದಾದ ಮತ್ತು ಚಿಕಿತ್ಸೆಗೆ ಸ್ಪಂದಿಸುವ ರೋಗವಾಗಿದೆ. ಆದರೆ ಮುಂದುವರಿದ ಹಂತದಲ್ಲಿ ಚಿಕಿತ್ಸೆಗೆ ಸರಿಯಾಗಿ ಸ್ವಂದಿಸದೇ ಇರುವ ಸಾಧ್ಯತೆ ಹೆಚ್ಚು. ಹಳ್ಳಿ ಮದ್ದು, ಮಂತ್ರವಾದ, ಮತ್ತಿತರ ಅವೈಜ್ಞಾನಿಕ ಚಿಕಿತ್ಸೆಯಿಂದ ರೋಗ ಉಲ್ಬಣವಾಗ ಬಹುದೇ ಹೊರತು ಯಾವುದೇ ಪ್ರಯೋಜನ ಸಿಗದು ಎಂದು ಚೂಂತಾರು ಸರೋಜಿನಿ ಪ್ರತಿಷ್ಠಾನದ ಕಾರ್ಯದರ್ಶಿ ಖ್ಯಾತ ಬಾಯಿ ಮುಖ ದವಡೆ ಶಸ್ತ್ರ ಚಿಕಿತ್ಸಕರಾದ ಡಾ|| ಮುರಲೀ ಮೋಹನ್ ಚೂಂತಾರು ಅಭಿಪ್ರಾಯ ಪಟ್ಟರು.
ದಿನಾಂಕ 04-02-2022ನೇ ಶುಕ್ರವಾರದಂದು ನಗರದ ದೇರೇಬೈಲ್ ಕೊಂಚಾಡಿಯ ಯುವಕ ಮಂಡಲದ ಕಛೇರಿಯಲ್ಲಿ ಸಂಜೆ 7 ರಿಂದ 8 ರವರೆಗೆ ಬಾಯಿ ಕ್ಯಾನ್ಸರ್ ಮಾಹಿತಿ ಶಿಬಿರ, ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಜರುಗಿತು.
ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ) ಮಂಗಳೂರು ಮತ್ತು ದೇರೆಬೈಲ್ ಕೊಂಚಾಡಿ ಯುವಕ ಮಂಡಲ ಇವರ ಜಂಟಿ ಆಶ್ರಯದೊಂದಿಗೆ ಈ ಮಾಹಿತಿ ಶಿಬಿರ ನಡೆಯಿತು. ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ವಿಷ್ಣು ಮೂರ್ತಿ ಭಟ್, ಅಧ್ಯಕ್ಷರಾದ ಶ್ರೀ ಪದ್ಮನಾಭ ಮುಂತಾದವರು ಉಪಸ್ಥಿತರಿದ್ದರು.
ಸುಮಾರು 50 ಮಂದಿ ಯುವಕ ಮಂಡಲದ ಸದಸ್ಯರು ಈ ಶಿಬಿರದ ಪ್ರಯೋಜನ ಪಡೆದರು. ಇದೇ ಸಂದರ್ಭದಲ್ಲಿ ಡಾ|| ಮುರಲೀ ಮೋಹನ್ ಚೂಂತಾರು ಅವರು ಬರೆದ ‘ಅರಿವು’ ಬಾಯಿ ಕ್ಯಾನ್ಸರ್ ಮಾರ್ಗದರ್ಶನ ಪುಸ್ತಕವನ್ನು ಎಲ್ಲಾ ಸದಸ್ಯರಿಗೆ ಉಚಿತವಾಗಿ ಹಂಚಲಾಯಿತು ಮತ್ತು ಬಾಯಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಕರ ಪತ್ರವನ್ನು ಹಂಚಲಾಯಿತು.
Post a Comment